ADVERTISEMENT

ಬಾಗಿಲೇ ತೆರೆಯದ ಅಂಗವಿಕಲರ ಶೌಚಾಲಯ!

ಕಟ್ಟಿ ಮೂರು ವರ್ಷವಾದರೂ ಬಳಕೆಯಲ್ಲಿಲ್ಲ: ಮೂಲ ಸೌಕರ್ಯವೂ ಮರೀಚಿಕೆ

ಆರ್.ಜಿತೇಂದ್ರ
Published 2 ಡಿಸೆಂಬರ್ 2020, 19:30 IST
Last Updated 2 ಡಿಸೆಂಬರ್ 2020, 19:30 IST
ಮಹಾತ್ಮಗಾಂಧಿ ಉದ್ಯಾನದ ಫುಟ್‌ಪಾತ್‌ ಮೇಲೆ ಅಂಗವಿಕಲರಿಗಾಗಿ ನಿರ್ಮಾಣವಾದ ಶೌಚಾಲಯ
ಮಹಾತ್ಮಗಾಂಧಿ ಉದ್ಯಾನದ ಫುಟ್‌ಪಾತ್‌ ಮೇಲೆ ಅಂಗವಿಕಲರಿಗಾಗಿ ನಿರ್ಮಾಣವಾದ ಶೌಚಾಲಯ   

ರಾಮನಗರ: ನಗರದ ಹೃದಯ ಭಾಗದಲ್ಲಿರುವ ಮಹಾತ್ಮಗಾಂಧಿ ಉದ್ಯಾನದ ಮುಂಭಾಗ ಅಂಗವಿಕಲರಿಗೆಂದೇ ನಿರ್ಮಿಸಲಾದ ಶೌಚಾಲಯವು ಮೂರು ವರ್ಷವಾದರೂ ಇನ್ನೂ ಬಳಕೆಗೆ ಮುಕ್ತವಾಗಿಲ್ಲ!

2017–18ನೇ ಸಾಲಿನ ಶೇ 3ರ ಎಸ್‌ಎಫ್‌ಸಿ ನಿಧಿಯ ಅನುದಾನದ ಅಡಿಯಲ್ಲಿ ಈ ‘ವಿಕಲಚೇತನ ಸ್ನೇಹಿ’ ಶೌಚಾಲಯ ನಿರ್ಮಾಣ ಆಗಿದೆ. ಇದಕ್ಕಾಗಿ ಬರೋಬ್ಬರಿ 10 ಲಕ್ಷ ಅನುದಾನವನ್ನು ರಾಮನಗರ ನಗರಸಭೆ
ವ್ಯಯಿಸಿದೆ. ಹೀಗಿದ್ದೂ ಶೌಚಾಲಯವನ್ನು ಉದ್ಘಾಟನೆ ಮಾಡಿ ಬಳಕೆಗೆ ಮುಕ್ತಗೊಳಿಸಿಲ್ಲ. ಇದರಿಂದಾಗಿ ಇದರ ನಿರ್ಮಾಣದ ಉದ್ದೇಶವೇ ಈಡೇರದಂತೆ ಆಗಿದೆ.

ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅಂಗವಿಕಲರು ಇದ್ದಾರೆ. ಇಂತಹವರು ಸಾಮಾನ್ಯರಿಗಾಗಿ ನಿರ್ಮಿಸಲಾಗಿರುವ ಶೌಚಾಲಯಗಳನ್ನು ಬಳಸುವುದು ಕಷ್ಟ. ಹೀಗಾಗಿ ಇವರ ಬಳಕೆಗೆ ಅನುಕೂಲವಾಗುವ ರಚನೆಯನ್ನುಒಳಗೊಂಡ ಶೌಚಾಲಯವನ್ನು ಇಲ್ಲಿ ನಿರ್ಮಿಸಲಾಗಿದೆ. ಓಡಾಟಕ್ಕೆ ಅನುಕೂಲ ಆಗುವಂತೆ ಉದ್ಯಾನದ ಮುಂಭಾಗ ರಸ್ತೆಗೆ ಹೊಂದಿಕೊಂಡಂತೆ ಪಾದಚಾರಿ ಮಾರ್ಗದ ಮೇಲೆ 8X8 ಅಡಿ ಅಳತೆಯಲ್ಲಿ ಇದನ್ನುಕಟ್ಟಲಾಗಿದ್ದು, ಏಕಕಾಲಕ್ಕೆ ನಾಲ್ಕು ಮಂದಿ ಉಪಯೋಗ ಮಾಡಬಹುದಾಗಿದೆ.

ADVERTISEMENT

ನೀರಿನ ಸಂಪರ್ಕವೇ ಇಲ್ಲ: ನಿರ್ಮಾಣದ ಗುತ್ತಿಗೆ ಪಡೆದಿರುವ ಏಜೆನ್ಸಿಯು ಕೇವಲ ಕಟ್ಟಡ ಕಟ್ಟಿ ಕೈ ತೊಳೆದುಕೊಂಡಿದೆ. ನೀರಿನ ಸಂಪರ್ಕ ಸೇರಿದಂತೆ ಶೌಚಾಲಯಕ್ಕೆ ಬೇಕಾದ ಮೂಲ ಸೌಕರ್ಯಗಳನ್ನೇ
ಮಾಡಿಕೊಟ್ಟಿಲ್ಲ. ಹೀಗಾಗಿ ಇಂದಿಗೂ ಶೌಚಾಲಯವು ಬಳಕೆಯಲ್ಲಿ ಇಲ್ಲ. ಸಾರ್ವಜನಿಕರ ಹಣ ಹೀಗೆ ಪೋಲಾಗುತ್ತಿರುವುದಕ್ಕೆ ಜನರು ಬೇಸರ ವ್ಯಕ್ತಪಡಿಸುತ್ತಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ರಾಮನಗರ ನಗರಸಭೆ ಆಯುಕ್ತ ಬಿ. ನಂದಕುಮಾರ್ ‘ಅಂಗವಿಕಲರ ಶೌಚಾಲಯ ಉದ್ಘಾಟನೆ ಆಗದಿರುವ ಬಗ್ಗೆ ನನಗೆ ತಿಳಿದಿಲ್ಲ. ಈ ಕೂಡಲೇ ಸಿಬ್ಬಂದಿಯಿಂದ
ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು. ‘ನಗರದಲ್ಲಿ ಕೆಲವು ಶೌಚಾಲಯಗಳನ್ನು ನಿರ್ವಹಣೆಗೆ ನೀಡಿಲ್ಲ. ಇದರ ವಿವರ ಪಡೆಯುತ್ತಿದ್ದು, ಇದರೊಟ್ಟಿಗೆ ಹೊಸ ಶೌಚಾಲಯವನ್ನೂ ನಿರ್ವಹಣೆಗಾಗಿ ನೀಡಲಾಗುವುದು’ ಎಂದರು.

***

ಕೆಲವು ಶೌಚಾಲಯಗಳನ್ನು ನಿರ್ವಹಣೆಗೆ ನೀಡಿಲ್ಲ. ಈ ಬಗ್ಗೆ ಸಿಬ್ಬಂದಿಯಿಂದ ಮಾಹಿತಿ ಪಡೆದು ಕ್ರಮ ಜರುಗಿಸುತ್ತೇನೆ.

- ಬಿ. ನಂದಕುಮಾರ್,ಆಯುಕ್ತ, ರಾಮನಗರ ನಗರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.