ರಾಮನಗರ: ಅಂಜನಿಪುತ್ರ ಹನುಮ ಜಯಂತಿಯನ್ನು ನಗರದಲ್ಲಿ ಶುಕ್ರವಾರ ಶ್ರದ್ಧಾ–ಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು. ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ದೇವಾಲಯಗಳಲ್ಲಿ ಜಮಾಯಿಸಿದ್ದ ಹನುಮ ಭಕ್ತರು ಜಾತ್ರೆಯ ವಾತಾವರಣವನ್ನು ಸೃಷ್ಟಿಸಿದ್ದರು.
ದೇವಾಲಯಗಳಲ್ಲಿ ಬೆಳಿಗ್ಗೆ ಆಂಜನೇಯ ಮೂರ್ತಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಗಣಹೋಮ, ರಾಮತಾರಕ ಹೋಮ, ಪ್ರಧಾನ ಹೋಮ ಹಾಗೂ ವಿವಿಧ ಹೋಮ ಮತ್ತು ಪೂರ್ಣಾಹುತಿ ಆಚರಣೆಗಳನ್ನು ನೆರವೇರಿಸಲಾಯಿತು. ಭಕ್ತಗಣ ಭಜನೆಗಳನ್ನು ಮಾಡಿ, ವಾಯುಪುತ್ರನನ್ನು ಸ್ಮರಿಸಿತು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ವಿಜಯನಗರದ ಅಭಯ ಆಂಜನೇಯ ಸ್ವಾಮಿ, ಗಾಂಧಿನಗರದ ಕೋತಿ ಆಂಜನೇಯ ಸ್ವಾಮಿ, ಅಗ್ರಹಾರದ ಆಂಜನೇಯ ಸ್ವಾಮಿ, ಹೊರವಲಯದ ರಾಮದೇವರ ಬೆಟ್ಟ, ಕೆಂಗಲ್ ಆಂಜನೇಯ ಸ್ವಾಮಿ ಸೇರಿದಂತೆ ನಗರ ಹಾಗೂ ಗ್ರಾಮೀಣ ಭಾಗದ ಆಂಜನೇಯ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.
ಭಕ್ತರು ಬೆಳಿಗ್ಗೆಯಿಂದಲೇ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಬಹುತೇಕ ದೇವಾಲಯಗಳಲ್ಲಿ ದೇವಾಲಯದ ವತಿಯಿಂದ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಕೆಲ ಭಕ್ತರು ಸಹ ಸ್ವಯಂಪ್ರೇರಿತವಾಗಿ ಪುಳಿಯೋಗರೆ, ಚಿತ್ರಾನ್ನ, ಮಜ್ಜಿಗೆ, ಪಾನಕ ವಿತರಣೆ ಮಾಡಿ ಭಕ್ತಿ ಮೆರೆದರು.
ಹಿಂದೂ ಜಾಗರಣ ವೇದಿಕೆ ವತಿಯಿಂದ ಹನುಮ ಜಯಂತಿ ಅಂಗವಾಗಿ ನಗರದಲ್ಲಿ ಬೈಕ್ ರ್‍ಯಾಲಿ ಜರುಗಿತು. ಹೊಸಳ್ಳಿ ಬಯಲು ಆಂಜನೇಯಸ್ವಾಮಿ ದೇವಾಲಯದಿಂದ ಆರಂಭವಾದ ರ‍್ಯಾಲಿ ರಸ್ತೆಗಳಲ್ಲಿ ಸಂಚರಿಸಿತು. ಅಗ್ರಹಾರದ ಆಂಜನೇಯ ಸ್ವಾಮಿ ದೇವಾಲಯ, ವಿಜಯನಗರದ ಆರ್ಚ್ ಬಳಿಯ ಆಂಜನೇಯ ಸ್ವಾಮಿ ದೇವಾಲಯ, ಎಂ.ಎಚ್. ಶಾಲೆ ಬಳಿಯ ಆಂಜನೇಯಸ್ವಾಮಿ ದೇಗುಲ, ರಾಯರದೊಡ್ಡಿ ಮಾರ್ಗವಾಗಿ ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯದಲ್ಲಿಅಂತ್ಯಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.