ADVERTISEMENT

ಹಾರೋಹಳ್ಳಿ: ಪಾರ್ಕಿಂಗ್ ಅವ್ಯವಸ್ಥೆ ಸಾರ್ವಜನಿಕ ಪರದಾಟ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 2:08 IST
Last Updated 10 ನವೆಂಬರ್ 2025, 2:08 IST
ಹಾರೋಹಳ್ಳಿ ಪಟ್ಟಣದ ಹೆದ್ದಾರಿಯ ಮುಖ್ಯರಸ್ತೆಯಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುವುದು
ಹಾರೋಹಳ್ಳಿ ಪಟ್ಟಣದ ಹೆದ್ದಾರಿಯ ಮುಖ್ಯರಸ್ತೆಯಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುವುದು   

ಹಾರೋಹಳ್ಳಿ: ಜಿಲ್ಲೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹಾರೋಹಳ್ಳಿ ಪಟ್ಟಣವು ಚಿಕ್ಕದಾದರೂ, ಸಮಸ್ಯೆಗಳ ವಿಷಯದಲ್ಲಿ ದೊಡ್ಡದಿದೆ. ತಾಲ್ಲೂಕು ಕೇಂದ್ರವಾದರೂ ಇದುವರೆಗೆ ತಾಲ್ಲೂಕು ಎನಿಸಿಕೊಳ್ಳುವ ಮಟ್ಟಿಗೆ ಅಭಿವೃದ್ಧಿ ಕಂಡಿಲ್ಲ. ಬೆಂಗಳೂರು–ಕನಕಪುರ ಹೆದ್ದಾರಿ ಮಧ್ಯೆ ಇರುವ ಪಟ್ಟಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಂಚಾರ ದಟ್ಟಣೆ ಜೊತೆಗೆ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿದೆ.

ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಪಟ್ಟಣದಲ್ಲಿ ವಾಹನಗಳ ಸಂಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ, ಅದಕ್ಕೆ ತಕ್ಕಂತೆ ಪಟ್ಟಣದಲ್ಲಿ ದಟ್ಟಣೆ ನಿರ್ವಹಣೆ ಮತ್ತು ವಾಹನಗಳ ಪಾರ್ಕಿಂಗ್‌ಗೆ ಸರಿಯಾದ ವ್ಯವಸ್ಥೆ ಇಲ್ಲ. ಪಟ್ಟಣದಲ್ಲಿ ವಾಹನಗಳನ್ನು ಬೇಕಾಬಿಟ್ಟಿಯಾಗಿ ನಿಲ್ಲಿಸಲಾಗುತ್ತಿದೆ. ಇದರಿಂದಾಗಿ, ವಾಹನಗಳ ಸರಾಗ ಸಂಚಾರಕ್ಕೆ ತೊಂದರೆಯಾಗಿದೆ.

ಮುಂಚೆ ಪಟ್ಟಣದಲ್ಲಿ ರಸ್ತೆ ಅತಿಕ್ರಮಣದಿಂದ ವಾಹನಗಳ ಪಾರ್ಕಿಂಗ್‌ಗೆ ಸಮಸ್ಯೆಯಾಗಿತ್ತು. ಜನ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ತೆರಳುತ್ತಿದ್ದರು. ರಸ್ತೆಗಳೇ ವಾಹನ ನಿಲುಗಡೆ ಸ್ಥಳವಾಗಿದ್ದರಿಂದ ಇತರ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಅದರಿಂದ ಎಚ್ಚೆತ್ತುಕೊಂಡು ಪಟ್ಟಣ ಪಂಚಾಯಿತಿ ರಸ್ತೆ ಅತಿಕ್ರಮಣ ಮಾಡಿಕೊಂಡು ತಲೆ ಎತ್ತಿದ್ದ ಕಟ್ಟಡಗಳನ್ನು ನೆಲಸಮಗೊಳಿಸಿತ್ತು.

ADVERTISEMENT

ಪಟ್ಟಣಕ್ಕೆ ರಸ್ತೆ ಅತಿಕ್ರಮಣದಿಂದ ಮುಕ್ತಿ ಸಿಕ್ಕರೂ, ಪಾರ್ಕಿಂಗ್ ವ್ಯವಸ್ಥೆಗೆ ಮಾತ್ರ ಪರ್ಯಾಯ ವ್ಯವಸ್ಥೆ ಇರಲಿಲ್ಲ. ಬೀದಿ ವ್ಯಾಪಾರದ ಸ್ಥಳವೂ ಆಗಿರುವ ಪಾದಚಾರಿ ಮಾರ್ಗಗಳೇ ವಾಹನಗಳ ನಿಲುಗಡೆ ಸ್ಥಳಗಳಾಗಿದ್ದವು. ಪಟ್ಟಣದ ವ್ಯಾಪಾರಿಗಳು, ಅಂಗಡಿಗಳ ಮಾಲೀಕರು ಹಾಗೂ ಗ್ರಾಹಕರು ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಪ್ರಮುಖ ರಸ್ತೆಗಳೆಲ್ಲ ಟ್ರಾಫಿಕ್ ಸಾಮಾನ್ಯವಾಗಿದೆ.

ಎಲ್ಲೆಲ್ಲಿ ಸಮಸ್ಯೆ?: ಪಟ್ಟಣದ ರಾಷ್ಟ್ರೀಯ ಹೆದ್ದಾರಿ, ಆನೇಕಲ್ ರಸ್ತೆ, ಬಿಡದಿ ರಸ್ತೆ, ಬಸ್ ನಿಲ್ದಾಣದ ಹತ್ತಿರ ಬೆಳಿಗ್ಗೆ ಮತ್ತು ಸಂಜೆ ಹೆಚ್ಚು ಸಂಚಾರ ದಟ್ಟಣೆ ಉಂಟಾಗುತ್ತದೆ. ತಾಲ್ಲೂಕು ಕಚೇರಿಗೆ ವಿವಿಧ ಕೆಲಸ–ಕಾರ್ಯಗಳಿಗೆ ಬರುವವರು ಪಾರ್ಕಿಂಗ್‌ಗೆ ಸ್ಥಳಾವಕಾಶವಿಲ್ಲದೆ, ಕಚೇರಿ ಎದುರು ವಾಹನಗಳನ್ನು ಅಡ್ಡದಿಡ್ಡಿಯಾಗಿ ನಿಲ್ಲಿಸಿ ಹೋಗುತ್ತಾರೆ. ಇದರಿಂದಾಗಿ, ರಸ್ತೆಯಲ್ಲಿ ವಾಹನ ಸಂಚಾರ ದುಸ್ತರವಾಗುತ್ತಿದೆ.

‘ವಾಹನಗಳ ದಟ್ಟಣೆಯಿಂದಾಗಿ ವಾಯುಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಉಂಟಾಗುತ್ತಿದೆ. ಬೇಸಿಗೆಯಿಂದಾಗಿ ರಸ್ತೆಗಳಲ್ಲಿ ದೂಳು ಹೆಚ್ಚಾಗಿದ್ದು, ಇದರೊಂದಿಗೆ ವಾಹನಗಳು ಉಗುಳುವ ಹೊಗೆಯುವ ಜನರ ಆರೋಗ್ಯಕ್ಕೆ ಮಾರಕವಾಗಿದೆ. ಇದರಿಂದಾಗಿ ಜನ ಕೆಮ್ಮು ಸೇರಿದಂತೆ ವಿವಿಧ ಸಮಸ್ಯೆಗಳಿಂದಾಗಿ ಆಸ್ಪತ್ರೆಗೆ ಹೋಗುವುದು ಮಾಮೂಲಾಗಿದೆ’ ಎಂದು ಸ್ಥಳಿಯ ನಿವಾಸಿ ಗೋವಿಂದಯ್ಯ ಹೇಳಿದರು.

ಹಾರೋಹಳ್ಳಿ ಪಟ್ಟಣದ ಆನೇಕಲ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಿರುವುದು

ದಿನ ನಿಗದಿಪಡಿಸಲಿ: ‘ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಮಾಡುವವರೆಗೆ ಪಟ್ಟಣದ ರಸ್ತೆಗಳಲ್ಲಿ ವಾಹನಗಳ ನಿಲುಗಡೆ ವಿಷಯದಲ್ಲಿ ಪೊಲೀಸರು ಶಿಸ್ತು ತರಬೇಕು. ಪ್ರಮುಖ ರಸ್ತೆಗಳಲ್ಲಿ ನಿಗದಿತ ದಿನಗಳಲ್ಲಿ ಮಾತ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಬೇಕು. ಆಗ, ಪಾರ್ಕಿಂಗ್ ಸಮಸ್ಯೆಯಿಂದಾಗುವ ವಾಹನ ದಟ್ಟಣೆ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ಪೊಲೀಸರು ಈ ಬಗ್ಗೆ ಗಮನ ಹರಿಸಬೇಕು’ ಎಂದು ಆಟೊ ಚಾಲಕ ಕಿಶೋರ್ ಒತ್ತಾಯಿಸಿದರು. 

‘ಪ್ರತಿ ರಸ್ತೆಯಲ್ಲಿ ನಿಗದಿತ ದಿನದಂದು ದ್ವಿಚಕ್ರ ಅಥವಾ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಬೇಕು. ರಸ್ತೆಗಳಲ್ಲಿ ಪಾರ್ಕಿಂಗ್ ಬೋರ್ಡ್ ಹಾಕಬೇಕು. ಪಾರ್ಕಿಂಗ್‌ಗೆ ಅವಕಾಶವಿಲ್ಲದ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ ಹಾಗೂ ದಂಡದ ಎಚ್ಚರಿಕೆಯ ನಾಮಫಲಕ ಅಳವಡಿಸಬೇಕು. ಆಗ ವಾಹನಗಳ ಸವಾರರು ಎಚ್ಚೆತ್ತುಕೊಳ್ಳುತ್ತಾರೆ’ ಎಂದರು.

ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ರಸ್ತೆಯಲ್ಲೇ ಭಾರಿ ವಾಹನಗಳನ್ನು ನಿಲ್ಲಿಸುವುದು ಸಾಮಾನ್ಯವಾಗಿದೆ
ಪಟ್ಟಣದ ಪಾರ್ಕಿಂಗ್ ಸಮಸ್ಯೆ ಮತ್ತು ಸಂಚಾರ ದಟ್ಟಣೆ ನಿವಾರಣೆಗೆ ಬಿಡದಿ ರಸ್ತೆಯಲ್ಲಿ ವಾಹನ ನಿಲುಗಡೆಗೆ ಜಾಗ ಗುರುತಿಸಲಾಗಿದೆ. ಇನ್ಮುಂದೆ ಅಲ್ಲೇ ವಾಹನ ನಿಲ್ಲಿಸಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗುವುದು
– ಮಲ್ಲೇಶ್ ಇನ್‌ಸ್ಪೆಕ್ಟರ್ ಹಾರೋಹಳ್ಳಿ ಪೊಲೀಸ್ ಠಾಣೆ

ಉಲ್ಲಂಘನೆಗೆ ದಂಡ ವಿಧಿಸಲಿ

ಪ‍ಟ್ಟಣದಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್ ಸೇರಿದಂತೆ ಸಂಚಾರ ನಿಯಮಗಳ ಉಲ್ಲಂಘನೆಗೆ ಕಡಿವಾಣ ಬೀಳಬೇಕಾದರೆ ಪೊಲೀಸರು ನಿಯಮ ಉಲ್ಲಂಘನೆ ಮಾಡುವವರಿಗೆ ₹500 ದಂಡ ವಿಧಿಸಬೇಕು. ಇಲ್ಲದಿದ್ದರೆ ಈ ಸಮಸ್ಯೆ ಬಗೆಹರಿಯದು. ಹೋಟೆಲ್‌ಗಳು ಅಂಗಡಿಗಳು ತಂಗುದಾಣಗಳ ಮುಂದೆ ಪಾರ್ಕಿಂಗ್ ನಿಷೇಧ ಫಲಕಗಳನ್ನು ಹಾಕಬೇಕು. ಅದನ್ನು ಮೀರಿಯೂ ವಾಹನ ನಿಲ್ಲಿಸಿದರೆ ಪೊಲೀಸರು ಠಾಣೆಗೆ ಟೋಯಿಂಗ್ ಮಾಡಿಕೊಂಡು ಹೋಗಬೇಕು. ಇಲ್ಲದಿದ್ದರೆ ಚಕ್ರವನ್ನು ಲಾಕ್ ಮಾಡಬೇಕು. ಚಾಲಕ ಬಂದಾಗ ದಂಡ ವಿಧಿಸಬೇಕು. ಆಗ ಮತ್ತೊಮ್ಮೆ ತಪ್ಪು ಮಾಡುವುದಿಲ್ಲ. ದಂಡದ ಬಿಸಿ ಮಟ್ಟದ ಹೊರತು ಜನ ಬುದ್ಧಿ ಕಲಿಯುವುದಿಲ್ಲ. ಪೊಲೀಸರು ಆದಷ್ಟು ಬೇಗ ಇಂತಹ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಾಲೇಜು ವಿದ್ಯಾರ್ಥಿಗಳಾದ ಅಕ್ಷತಾ ವೀರೇಶ್ ನಟರಾಜ್ ಪ್ರಕಾಶ್ ಒತ್ತಾಯಿಸಿದರು.

ಪಟ್ಟಣದಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಸಂಚಾರ ದಟ್ಟಣೆ ಸಾಮಾನ್ಯವಾಗಿದೆ. ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಪಟ್ಟಣದಲ್ಲಿ ಬಸ್‌ಗಳು ಭಾರಿ ವಾಹನಗಳು ಹೆಚ್ಚಾಗಿ ಸಂಚರಿಸುತ್ತವೆ. ಆದರೆ ಪಟ್ಟಣದಲ್ಲಿ ದೊಡ್ಡ ಹಾಗೂ ಸಣ್ಣ ವಾಹನಗಳ ನಿಲುಗಡೆಗೂ ಸ್ಥಳವಿಲ್ಲ. ಇನ್ನಾದರೂ ಈ ಪಾರ್ಕಿಂಗ್‌ಗಾಗಿ ಸ್ಥಳ ನಿಗದಿ ಮಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.
– ನಾಗರಾಜು ಸಾಮಾಜಿಕ ಕಾರ್ಯಕರ್ತ ಹಾರೋಹಳ್ಳಿ
ಪಾದಚಾರಿಗಳಿಗೆ ಜಾಗವಿಲ್ಲ ಬಸ್ ನಿಲ್ದಾಣ ಸೇರಿದಂತೆ ಪಟ್ಟಣದ ಮುಖ್ಯರಸ್ತೆಗಳ ಪಾದಚಾರಿ ಮಾರ್ಗಗಗಳು ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳ ಪಾರ್ಕಿಂಗ್ ಸ್ಥಳವಾಗಿ ಮಾರ್ಪಟ್ಟಿವೆ. ರಸ್ತೆ ಮತ್ತು ಫುಟ್‌ಪಾತ್‌ನಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುವುದರಿಂದ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದರಿಂದ ಅಪಘಾತಗಳೂ ಸಂಭವಿಸುತ್ತಿವೆ. ಪೊಲೀಸರು ಇದಕ್ಕೆ ಕಡಿವಾಣ ಹಾಕಬೇಕು
– ಶಿವು ಬನ್ನಿಕುಪ್ಪೆ ಹಾರೋಹಳ್ಳಿ ತಾಲ್ಲೂಕು
ಪಾರ್ಕಿಂಗ್ ಸಮಸ್ಯೆ ಸೇರಿದಂತೆ ವಿವಿಧ ರೀತಿಯ ಸಂಚಾರ ಸಮಸ್ಯೆಗಳಿಗೆ ದಂಡಾಸ್ತ್ರವೊಂದೇ ಪರಿಹಾರ. ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ತೊಂದರೆಯಾಗದಂತೆ ವಾಹನ ನಿಲುಗಡೆ ಮಾಡಿದರೆ ಸಮಸ್ಯೆಯಾಗುವುದಿಲ್ಲ. ಆದರೆ ಜನದಟ್ಟಣೆ ಇರುವ ರಸ್ತೆಗಳಲ್ಲೂ ಬೇಕಾಬಿಟ್ಟಿಯಾಗಿ ನಿಲ್ಲಿಸುತ್ತಾರೆ. ಪೊಲೀಸರು ಅಂತಹ ಸವಾರರಿಗೆ ದಂಡ ವಿಧಿಸಬೇಕು. ಇಲ್ಲದಿದ್ದರೆ ಚಾಲಕರು ಮತ್ತು ಸವಾರರು ಬುದ್ದಿ ಕಲಿಯುವುದಿಲ್ಲ.
– ಬಾನುಪ್ರಕಾಶ್ ಹಾರೋಹಳ್ಳಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.