ADVERTISEMENT

ಹಾರೋಹಳ್ಳಿ | ನಿರ್ವಹಣೆ ಕೊರತೆ: ದುರಸ್ತಿಗೆ ಕಾದಿವೆ ಶುದ್ದ ಕುಡಿಯುವ ನೀರಿನ ಘಟಕ

ದುರಸ್ತಿಗೆ ಸ್ಥಳೀಯ ಆಡಳಿತಗಳ ನಿರ್ಲಕ್ಷ್ಯ; ಶುದ್ಧ ಕುಡಿಯುವ ನೀರಿಗೆ ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 6:24 IST
Last Updated 6 ಅಕ್ಟೋಬರ್ 2025, 6:24 IST
ದುರಸ್ತಿಗೆ ಕಾದಿರುವ ಹಾರೋಹಳ್ಳಿ ತಾಲ್ಲೂಕಿನ ತೋಕಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳಗೆರೆ ಗ್ರಾಮದ ಶುದ್ಧ ನೀರಿನ ಘಟಕ
ದುರಸ್ತಿಗೆ ಕಾದಿರುವ ಹಾರೋಹಳ್ಳಿ ತಾಲ್ಲೂಕಿನ ತೋಕಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳಗೆರೆ ಗ್ರಾಮದ ಶುದ್ಧ ನೀರಿನ ಘಟಕ   

ಹಾರೋಹಳ್ಳಿ: ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ತಾಲ್ಲೂಕಿನಾದ್ಯಂತ ಸ್ಥಾಪಿಸಲಾದ  ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿ ಹಾಗೂ ಸೂಕ್ತ ನಿರ್ವಹಣೆ ಕಾಣದೆ ಪಾಳು ಬಿದ್ದಿವೆ. ಹಲವು ಘಟಕಗಳ ಯಂತ್ರಗಳು ತುಕ್ಕು ಹಿಡಿದಿವೆ.

ಕೆಲ ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದ ಹಲವು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಘಟಕಗಳನ್ನು ಸ್ಥಾಪಿಸಲಾಗಿತ್ತು. ಜನರು ಈ ಘಟಕಗಳಿಗೆ 1₹ ಮತ್ತು ₹5 ನಾಣ್ಯ ಹಾಕಿದರೆ 10 ಲೀಟರ್‌ನಿಂದ 20 ಲೀಟರ್‌ ಶುದ್ಧ ನೀರು ಪಡೆಯಲು ಅವಕಾಶ ಕಲ್ಪಿಸಲಾಗಿತ್ತು.

50ಕ್ಕೂ ಹೆಚ್ಚು ಘಟಕ: ತಾಲೂಕಿನಲ್ಲಿ 11 ಗ್ರಾಮ ಪಂಚಾಯಿತಿಗಳು ಹಾಗೂ ಒಂದು ಪಟ್ಟಣ ಪಂಚಾಯಿತಿಗಳನ್ನು ಹೊಂದಿವೆ. ತಾಲ್ಲೂಕಿನಲ್ಲಿ 150ಕ್ಕೂ ಹೆಚ್ಚು ಶುದ್ಧ ನೀರಿನ ಘಟಕಗಳಿದ್ದು, ಅವುಗಳ ಪೈಕಿ 50ಕ್ಕೂ ಹೆಚ್ಚು ಘಟಕಗಳು ದುರಸ್ತಿಗಾಗಿ ಕಾದಿವೆ.

ADVERTISEMENT

ಆರಂಭದಲ್ಲಿ ಚನ್ನಾಗಿಯೇ ನಡೆಯುತ್ತಿದ್ದ ಘಟಕಗಳು ಕ್ರಮೇಣ ನಿರ್ಲಕ್ಷ್ಯಕ್ಕೆ ಒಳಗಾದವು. ಸರಿಯಾದ ನೀರಿನ ಮೂಲ ಇಲ್ಲದಿದ್ದರಿಂದ ಹಲವು ಘಟಕಗಳು ಸ್ಥಗಿತಗೊಂಡು ವರ್ಷಗಳೇ ಕಳೆದಿದೆ. ಈ ಪೈಕಿ ಕೆಲವು ಮಾತ್ರ ದುರಸ್ತಿ ಕಂಡಿವೆ. ಉಳಿದವು ಉದ್ಘಾಟನೆಯಾಗಿ ವರ್ಷಗಳಾದರೂ ತಾಂತ್ರಿಕ ದೋಷದಿಂದ ಕಾರ್ಯನಿರ್ವಹಿಸದೇ ತುಕ್ಕು ಹಿಡಿದಿವೆ.

ಸಿಎಸ್‌ಆರ್‌ ಸಾಥ್: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಎಲ್), ಡಿಕೆಎಸ್ ಟ್ರಸ್ಟ್ ವಿವಿಧ ಕಾರ್ಖಾನೆ ಹಾಗೂ ಕಂಪನಿಗಳ ಸಿಎಸ್ಆರ್ ಅನುದಾನದಲ್ಲಿ ಈ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಗ್ರಾಮಗಳಲ್ಲಿ ಅಳವಡಿಸಲಾಗಿದೆ.

ಈ ಪೈಕಿ ತಾಲ್ಲೂಕಿನ ಹಲವು ಶುದ್ಧ ನೀರಿನ ಘಟಕಗಳು ನಿರ್ವಹಣೆ ಕೊರತೆಯಿಂದ ಕೆಟ್ಟು ಹೋಗಿ ಯಂತ್ರೋಪಕರಣಗಳು ತುಕ್ಕು ಹಿಡಿದಿವೆ. ಘಟಕಗಳನ್ನು ಅಳವಡಿಸಲು ಕಂಪನಿಗಳು ತೋರಿದ ಉತ್ಸಾಹ, ಅವುಗಳ ನಿರ್ವಹಣೆ ಮತ್ತು ದುರಸ್ತಿಗೆ ಮಾತ್ರ ತೋರಲಿಲ್ಲ.

ದುರಸ್ತಿ ಮಾಡುವವರು ಯಾರು?: ನಿರ್ವಹಣೆ ಕೊರೆತೆಯಿಂದಾಗಿ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿವೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮೀಣ ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ ಎಂದು ದೂರುತ್ತಾರೆ ಸ್ಥಳೀಯರು.

ಹೆಸರಿಗಷ್ಟೇ ಶುದ್ಧ ನೀರಿನ ಘಟಕಗಳಿವೆ. ಅಲ್ಲಿ ನೀರು ಬರುತ್ತಿಲ್ಲ. ಪ್ರತಿ ಗ್ರಾಮದಲ್ಲೂ ಇಂತಹದ್ದೇ ಪರಿಸ್ಥಿತಿ ಇದೆ. ದುರಸ್ತಿ ಮಾಡುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಇಲ್ಲವಾಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಸಿಗಬೇಕಾದರೆ ಈ ಘಟಕಗಳು ದುರಸ್ತಿಗೊಳ್ಳಬೇಕಿದೆ ಎಂದು ಒತ್ತಾಯಿಸಿದರು.

ಅಧಿಕಾರಿಗಳ ನಿರ್ಲಕ್ಷ್ಯ: ಶುದ್ಧ ಕುಡಿಯುವ ನೀರಿನ ಘಟಕವೊಂದರ ಸ್ಥಾಪನೆಗೆ ಅಂದಾಜು ₹12 ಲಕ್ಷದಿಂದ ₹15 ಲಕ್ಷ  ವೆಚ್ಚವಾಗಿದೆ. ಸಣ್ಣಪುಟ್ಟ ಸಮಸ್ಯೆಗಳು ಕಾಣಿಸಿಕೊಂಡಾಗ ಸ್ಥಳೀಯ ಪಂಚಾಯಿತಿಯವರು ದುರಸ್ತಿ ಮಾಡುತ್ತಿದ್ದರು. ನಂತರ ಅವರು ಸಹ ಇತ್ತ ತಲೆ ಹಾಕುವುದನ್ನು ಬಿಟ್ಟರು. ಇದರಿಂದಾಗಿ ಅವು ಪಾಳು ಬಿದ್ದವು ಎಂದು ಸ್ಥಳೀಯರು ಆರೋಪಿಸಿದರು.

ಕೆಲವು ಗ್ರಾಮಗಳಲ್ಲಿ ನೀರಿನ ಘಟಕಗಳು ಸ್ಥಾಪಿಸಿದ ಕೆಲವೇ ತಿಂಗಳುಗಳಲ್ಲಿ ಅವು ನಿರ್ವಹಣೆ ಕಾಣದೆ ಸ್ಥಗಿತಗೊಂಡವು. ಯಾರೂ ಗಮನ ಹರಿಸದಿದ್ದರಿಂದ ಅವುಗಳ ಸುತ್ತ ಗಿಡಗಂಟಿಗಳು ಬೆಳೆದು ನಿಂತು, ನನೆಗುದಿಗೆ ಬಿದ್ದವೆ. ಇದರಿಂದಾಗಿ ನಾವು ಪಕ್ಕದ ಅಥವಾ ಖಾಸಗಿಯವರಿಂದ ಶುದ್ಧ ಕುಡಿಯುವ ನೀರು ಖರೀದಿಸಬೇಕಾಗಿದೆ ಎಂದು ಅಳಲು ತೋಡಿಕೊಂಡರು.

ಮನವಿಗೆ ಸ್ಪಂದಿಸುವವರೇ ಇಲ್ಲ; ಅಧಿಕಾರಿಗಳ ವಿರುದ್ಧ ಜನಾಕ್ರೋಶ

ಹಳ್ಳಿಗಳ ಜನರಿಗೆ ಶುದ್ಧವಾದ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಸ್ಥಾಪಿಸಿರುವ ನೀರಿನ ಘಟಕಗಳು ವಿವಿಧ ಕಾರಣಕ್ಕೆ ಸ್ಥಗಿತಗೊಂಡಿರುವ ಕುರಿತು ಸ್ಥಳೀಯ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸಿಲ್ಲ. ಇದೇ ಕಾರಣಕ್ಕೆ ಅವು ಪಾಳುಬಿದ್ದ ಸ್ಥಿತಿಗೆ ತಲುಪಿವೆ ಎಂಬ ಜನಾಕ್ರೋಶವೂ ವ್ಯಕ್ತವಾಗಿದೆ. ಪಂಚಾಯಿತಿ ಅಧಿಕಾರಿಗಳು ಸೇರಿದಂತೆ ವಿವಿಧ ಹಂತದ ಜನಪ್ರತಿನಿಧಿಗಳಿಗೆ ಮನವಿ ಮಾಡಿರುವ ಜನ ಕಡೆಗೆ ಬೇಸತ್ತು ಸುಮ್ಮನಾಗಿದ್ದಾರೆ. ಪಂಚಾಯಿತಿ ಅಧಿಕಾರಿಗಳು ಘಟಕಗಳ ದುರಸ್ತಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳುತ್ತಾರೆ. ಕುಡಿಯುವ ನೀರು ಮತ್ತು ಗ್ರಾಮೀಣ ನೈರ್ಮಲ್ಯ ಇಲಾಖೆಗೆ ಅಧಿಕಾರಿಗಳಿಗೆ ಕೇಳಿದರೆ ಗ್ರಾಮ ಪಂಚಾಯಿತಿ ನಿರ್ವಹಣೆ ಮಾಡಲಿದೆ ಎಂದು ಹೇಳುತ್ತಾರೆ. ಆಗ ಪಂಚಾಯಿತಿಯವರು ಏಜೆನ್ಸಿ ನಿರ್ವಹಣೆ ಮಾಡಲಿದೆ ಎಂದು ಒಬ್ಬರ ಮೇಲೊಬ್ಬರು ಹಾಕಿಕೊಂಡು ಕಾಲಹರಣ ಮಾಡುತ್ತಲೇ ಬಂದಿದ್ದಾರೆ ಎಂದು ಮರಳವಾಡಿ ನಿವಾಸಿ  ಶಿವಾಜಿ ಅವರು ಅಧಿಕಾರಿಗಳ ನಡೆ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ತಾಲೂಕಿನ ಜಕ್ಕಸಂದ್ರ ಕಾಳೇಗೌಡನ ದೊಡ್ಡಿ ಎಬ್ಬಿದಮೆಟ್ಟಿಲು ಲಿಂಗನಾಪುರ ಮರಳವಾಡಿ 1ನೇ ಮತ್ತು 2ನೇ ಬ್ಲಾಕ್ ಮಲ್ಲಿಗೆಮೆಟ್ಟಿಲು ಬಳಗೆರೆ ಹಾರೋಹಳ್ಳಿ ಪಟ್ಟಣ ವ್ಯಾಪ್ತಿ ಹೀಗೆ ಕೆಲವು ಕಡೆ ಘಟನೆಗಳು ರಿಪೇರಿಗೆ ಬಂದು ಎರಡ್ಮೂರು ವರ್ಷಗಳಾದರೂ ದುರಸ್ತಿ ಕಂಡಿಲ್ಲ ಎಂದು ಈ ಭಾಗದ ಸ್ಥಳೀಯರು ಬೇಸರ ತೋಡಿಕೊಂಡರು.

ಗ್ರಾಮಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿ ಕಾಣದ ಪಾಳುಬಿದ್ದಿರುವ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಬಳಿ ಮಾಹಿತಿ ಪಡೆದು ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು
–ಅಪೂರ್ವ ಕುಲಕರ್ಣಿ, ಕಾರ್ಯನಿರ್ವಾಹಕ ಅಧಿಕಾರಿ ಹಾರೋಹಳ್ಳಿ ತಾಲ್ಲೂಕು ಪಂಚಾಯಿತಿ
ಜನರ ಅನುಕೂಲಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಡಿಕೆಶಿ ಚಾರಿಟೇಬಲ್‌ ಟ್ರಸ್ಟ್‌ ಮತ್ತು ಸರ್ಕಾರದಿಂದ ನಿರ್ಮಿಸಿದ ನೀರಿನ ಘಟಕಗಳು ಕೆಲವು ತಿಂಗಳಷ್ಟೇ ಕೆಲಸ ಮಾಡಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪಾಳುಬಿದ್ದಿವೆ
–ಸಂದೀಪ್, ಗುತ್ತಲಹುಣಸೆ ನಿವಾಸಿ
ನೀರಿನ ಘಟಕಗಳನ್ನು ರಿಪೇರಿ ಮಾಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾರೂ ಸ್ಪಂದಿಸಿಲ್ಲ. ಇದರಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಯಂತ್ರೋಪಕರಣಗಳು ತುಕ್ಕು ಹಿಡಿದಿವೆ. ಈಗಲಾದರೂ ದುರಸ್ತಿ ಮಾಡಲಿ
–ಸಾಗರ್, ಬೈರೇಗೌಡನ ದೊಡ್ಡಿ ನಿವಾಸಿ
ಹಾರೋಹಳ್ಳಿ ತಾಲ್ಲೂಕಿನ ಮಲ್ಲಿಗೆಮೆಟ್ಲು ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಕೆಟ್ಟು ಬಂದ್ ಆಗಿದೆ
ಹಾರೋಹಳ್ಳಿ ತಾಲ್ಲೂಕಿನ ಮರಳವಾಡಿ ಪಟ್ಟಣದಲ್ಲಿ ಶುದ್ಧ ನೀರಿನ ಘಟಕ ಕೆಟ್ಟು ಹೋಗಿರುವುದು
ಯಲಚವಾಡಿ ಗ್ರಾಮ ಪಂಚಾಯಿತಿಯ ಲಿಂಗನಾಪುರ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ನಾಮಕಾವಸ್ಥೆ ತಲುಪಿದೆ
ಹಾರೋಹಳ್ಳಿ ತಾಲ್ಲೂಕಿನ ಚೀಲೂರು ಗ್ರಾಮ ಪಂಚಾಯಿತಿಯ ಕಾಳೇಗೌಡನದೊಡ್ಡಿ ಗ್ರಾಮದಲ್ಲಿ ಕೆಟ್ಟು ಹೋಗಿರುವ ಶುದ್ಧ ನೀರಿನ ಘಟಕ
ಹಾರೋಹಳ್ಳಿ ತಾಲ್ಲೂಕಿನ ವಡೇರಹಳ್ಳಿ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ನಿರ್ಮಾಣ ಕೆಲಸ ಅಪೂರ್ಣಗೊಂಡಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.