
ಹಾರೋಹಳ್ಳಿ: ವಿದ್ಯಾರ್ಥಿಗಳು ಯಾವುದೇ ಆಸೆಗೆ ಒಳಗಾಗದೆ, ವಿದ್ಯಾರ್ಥಿ ಜೀವನದಲ್ಲೇ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದು ಡಿವೈಎಸ್‌ಪಿ ಶ್ರೀನಿವಾಸ್ ಹೇಳಿದರು.
ಹಾರೋಹಳ್ಳಿಯ ಗ್ರಾಮಾಂತರ ಪ್ರೌಢಶಾಲೆಯಲ್ಲಿ ದಲಿತಸೇನೆ (ಆರ್.ವಿ) ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವ ಪೀಳಿಗೆ ಮೊಬೈಲ್ ಗೀಳಿಗೆ ಒಳಗಾಗಿದೆ ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯದೂ ಇದೆ ಕೆಟ್ಟದೂ ಇದೆ. ಒಳ್ಳೆಯದನ್ನು ಮಾತ್ರ ತೆಗೆದುಕೊಂಡು ಕೆಟ್ಟದ್ದನ್ನು ಬಿಡಬೇಕು ಎಂದರು.
ಈಗಿನ ಶ್ರಮ ಮುಂದೆ ಆಸರೆ. ವಿದ್ಯಾರ್ಥಿಗಳು ಇಂದಿನಿಂದಲೇ ಶ್ರಮವಹಿಸಿ ಕಲಿತರೆ ಜೀವನ ಎಂಬ ಪರೀಕ್ಷೆಯಲ್ಲಿ ಶ್ರಮಪಡುವ ಅನಿವಾರ್ಯತೆ ಇರುವುದಿಲ್ಲ. ವಿದ್ಯಾರ್ಥಿಗಳು ಜೀವನದಲ್ಲಿ ಏನಾದರೂ ಸಾಧಿಸಬೇಕು ಇಂದಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದನ್ನು ರೂಢಿಸಿಕೊಳ್ಳಬೇಕು ಎಂದರು.
ದಲಿತ ಸೇನೆ ರಾಜ್ಯಾಧ್ಯಕ್ಷ ಜಗನ್ನಾಥ್ ಮಾತನಾಡಿ, ವಿದ್ಯಾರ್ಥಿಗಳು ಇತಿಹಾಸ ಅರಿಯುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು. ಸಮಾಜ ಬದಲಿಸುವ ಶಕ್ತಿ ವಿದ್ಯಾರ್ಥಿಗಳಿಗೆ ಇದೆ. ಸಂವಿಧಾನ ಸಂಪೂರ್ಣವಾಗಿ ಜಾರಿಯಾದರೆ ಎಲ್ಲದರಲ್ಲಿಯೂ ಸಮಾನತೆ ಇರಲಿದೆ. ದೇಶದ ಸಂಪತ್ತು ಕೇವಲ 80ಮಂದಿ ಕೈಯಲ್ಲಿದೆ. ಆ ಸಂಪತ್ತು ಸಮಾನವಾಗಿ ಹಂಚಿಕೆಯಾಗಬೇಕು ಎಂದು ಹೇಳಿದರು.
ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಚಂದ್ರು ಮಾತನಾಡಿ, ಇಂದಿನ ಯುವ ಪೀಳಿಗೆ ಮೊಬೈಲ್ ಗೀಳಿಗೆ ಒಳಗಾಗಿದೆ. ತಂದೆ ತಾಯಿಯಂದಿರು ಉತ್ತಮ ಭವಿಷ್ಯ ಕಟ್ಟುವ ನಿಟ್ಟಿನಲ್ಲಿ ಯೋಚಿಸುತ್ತಿರುತ್ತಾರೆ. ಗುಣಮಟ್ಟದ ಶಿಕ್ಷಣ ಬಹಳ ಮುಖ್ಯ ಎಂದರು.
200 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಡಿವೈಎಸ್‌ಪಿ ಶ್ರೀನಿವಾಸ್, ಹಿರಿಯ ಪರ್ತಕರ್ತ ಸುರೇಶ್ ಅವರನ್ನು ಸನ್ಮಾನಿಸಲಾಯಿತು. ಮಲ್ಲೇಶ್, ಲೋಕೇಶ್, ಮುರಳೀಧರ್, ಅಶೋಕ್ ಕುಮಾರ್, ದಂಡುಹುಚ್ಚಯ್ಯ, ಚಂದ್ರಹಾಸ, ಯೋಗಾನಂದ, ಮೋಹನ್, ಕೃಷ್ಣಪ್ಪ, ಅಭಿಲಾಶ, ಆನಂದ್, ರಾಮಚಂದ್ರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.