
ರಾಮನಗರದ ಎಂ.ಎಚ್. ಕಾಲೇಜು ಸಭಾಂಗಣದಲ್ಲಿ ‘ನಮ್ಮವರು’ ಬಳಗ ಶನಿವಾರ ಹಮ್ಮಿಕೊಂಡಿದ್ದ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ’ ಪುಸ್ತಕವನ್ನು ಅನ್ನದಾನೇಶ್ವರನಾಥ ಸ್ವಾಮೀಜಿ, ಶಹಬಾಜ್ ಅಲಿ ಷಾ ಚಿಸ್ತಿ, ಘನ ಸ್ಯಾಮ್‌ಸನ್, ಭಂತೆ ಭೋಧಿದತ್ತ ಥೇರೊ, ಸಾಹಿತಿ ಡಾ. ಕೆ. ಷರೀಫಾ ಹಾಗೂ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಜನಾರ್ಪಣೆ ಮಾಡಿದರು.
ರಾಮನಗರ: ಜಾತಿ ಮತ್ತು ಧರ್ಮ ದ್ವೇಷ ಬದಿಗಿಟ್ಟು ಸೌಹಾರ್ದ ಭಾರತವನ್ನು ಕಟ್ಟಬೇಕಿದೆ. ದ್ವೇಷದ ಮಾತಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ದ್ವೇಷ ಭಾಷಣ ತಡೆ ಮಸೂದೆ ಜಾರಿಗೆ ತರಲು ಮುಂದಾಗಿದೆ. ಆದರೆ, ಧರ್ಮ ದ್ವೇಷವನ್ನೇ ರಾಜಕಾರಣ ಮಾಡಿಕೊಂಡಿರುವವರಿಗೆ ಇದನ್ನು ಸಹಿಸಲಾಗುತ್ತಿಲ್ಲ ಎಂದು ಸಾಹಿತಿ ಡಾ. ಕೆ. ಷರೀಫಾ ಅಭಿಪ್ರಾಯಪಟ್ಟರು.
ನಗರದ ಎಂ.ಎಚ್. ಕಾಲೇಜು ಸಭಾಂಗಣದಲ್ಲಿ ‘ನಮ್ಮವರು’ ಬಳಗ ಶನಿವಾರ ಹಮ್ಮಿಕೊಂಡಿದ್ದ ಡಾ. ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ’ ಪುಸ್ತಕ ಜನಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕೂ ಮುಂಚೆ ಬ್ರಿಟಿಷರು ದೇಶದ ಸಂಪತ್ತು ದೋಚುತ್ತಿದ್ದರು. ಈಗ ಕಾರ್ಪೊರೇಟ್ ಜಗತ್ತು ಆ ಕೆಲಸ ಮಾಡುತ್ತಿದೆ ಎಂದರು.
ದ್ವೇಷದ ಬದಲು ಸೌಹಾರ್ದದ ಮಾತುಗಳು ಎಲ್ಲೆಡೆ ಅನುರಣಿಸಬೇಕಿದೆ. ಇವರು ನಮ್ಮವರು, ಅವರು ನಿಮ್ಮವರು ಎಂದು ವಿಭಜಿಸಿ ನೋಡುವ ಕಾಲಘಟ್ಟದಲ್ಲಿ ನಾವಿದ್ದೇವೆ. ಪ್ರಜಾಪ್ರಭುತ್ವದ ನೆರಳಿನಲ್ಲಿರುವ ಈ ಅಜಗಜಾಂತರ ಅಸಮಾನತೆ ತೊಲಗಬೇಕಿದೆ ಎಂದು ಹೇಳಿದರು.
ಹೀನ ಅಪರಾಧ ಎಸಗಿದವರು ಜೈಲಿಂದ ಬಿಡುಗಡೆಯಾದರೆ ಹಾರ ಹಾಕಿ ಮೆರವಣಿಗೆ ಮಾಡಲಾಗುತ್ತಿದೆ. ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಆಕೆ ಕುಟುಂಬದವರನ್ನು ಕೊಲೆ ಮಾಡಿದ ಪ್ರಕರಣದ 11 ಅಪರಾಧಿಗಳನ್ನು ಗುಜರಾತ್ ಸರ್ಕಾರ ಸನ್ನಡತೆ ಆಧಾರದ ಬಿಡುಗಡೆ ಮಾಡಿದ್ದು ಕೋಮು ವ್ಯವಸ್ಥೆ ಯಾವ ಮಟ್ಟಕ್ಕೆ ತಲುಪಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾನವ ಧರ್ಮವೇ ನಿಜವಾದ ಧರ್ಮ. ಅದಕ್ಕೆ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ ಸೇರಿದಂತೆ ವಿವಿಧ ಧರ್ಮಗಳ ರೂಪ ನೀಡಲಾಗಿದೆ. ಒಬ್ಬನೇ ಆಗಿರುವ ಭಗವಂತನನ್ನು ನಮ್ಮ ಭಾವಕ್ಕೆ ತಕ್ಕಂತೆ ಕರೆಯುತ್ತಿದ್ದೇವೆ. ಭೂಮಿ ಮೇಲಿರುವುದು ಧರ್ಮ ಮತ್ತು ಅಧರ್ಮವಷ್ಟೆ. ಮಾನವ ಧರ್ಮವನ್ನು ರಕ್ಷಿಸಿದರೆ, ಅದು ಎಲ್ಲರನ್ನೂ ರಕ್ಷಿಸುತ್ತದೆ. ಆ ನಿಟ್ಟಿನಲ್ಲಿ ಬೇಕಾದುದನ್ನು ತಿಳಿಯುತ್ತಾ, ಬೇಡವಾದುದನ್ನು ಕಳೆಯುತ್ತಾ, ಅಗತ್ಯವಿರುವುದನ್ನು ಉಳಿಸುತ್ತಾ ಸೌಹಾರ್ದ ಭಾರತ ಕಟ್ಟಬೇಕು ಎಂದು ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ಸಲಹೆ ನೀಡಿದರು.
ಕೋಮುಶಕ್ತಿಗಳು ಪ್ರಜಾಪ್ರಭುತ್ವದ ಎಲ್ಲಾ ಅಂಗಗಳನ್ನು ಹೊಕ್ಕಿ ರಾರಾಜಿಸುತ್ತಿವೆ. ಕೆಲ ಮಾಧ್ಯಮಗಳು ಸಹ ಕೋಮು ಕ್ರಿಮಿಗೆ ಬಲಿಯಾಗಿ, ಧರ್ಮ ಮತ್ತು ಜಾತಿಗಳ ನಡುವೆ ದ್ವೇಷ ಬಿತ್ತುವ ಕೆಲಸದಲ್ಲಿ ತೊಡಗಿವೆ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಬೇಸರ ವ್ಯಕ್ತಪಡಿಸಿದರು.
‘ನಾವೀಗ ಧುರಿತ ಕಾಲದಲ್ಲಿದ್ದೇವೆ. ಯುವ ತಲೆಮಾರುಗಳಲ್ಲಿ ಮನೆ ಮಾಡುತ್ತಿರುವ ಕೋಮುವಾದ ಹೊಗಬೇಕಾದರೆ, ನಮ್ಮ ನೆಲದ ಅಸ್ಮಿತೆಯಾದ ಸೌಹಾರ್ದವನ್ನು ಹೆಚ್ಚು ಪ್ರಚುರಪಡಿಸಬೇಕಿದೆ’ ಎಂದು ‘ನಮ್ಮವರು’ ಬಳಗದ ಡಾ. ಎಚ್.ಡಿ. ಉಮಾಶಂಕರ್ ಅಭಿಪ್ರಾಯಪಟ್ಟರು.
ಕಂದಾಯ ನಿರೀಕ್ಷಕ, ನಮ್ಮವರು ಬಳಗದ ಆರ್. ನಾಗರಾಜು ಅತಿಥಿಗಳನ್ನು ಸ್ವಾಗತಿಸಿದರು. ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತೆ ಪದ್ಮರೇಖಾ ನಿರೂಪಣೆ ಮಾಡಿದರು. ಬ್ಯಾಡರಹಳ್ಳಿ ಶಿವಕುಮಾರ್ ಸೌಹಾರ್ದ ಗೀತೆ ಹಾಡಿದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕುಂಬಾಪುರ ವಿ. ಬಾಬು, ಡಾ. ಅಂಕನಹಳ್ಳಿ ಪಾರ್ಥ, ಕೃಷ್ಣ, ಮಾರಣ್ಣ, ನಾಗೇಶ್, ಮೊಸೆಸ್, ಪಿಯು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೊತ್ತಿಪುರ ಶಿವಣ್ಣ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್, ರೈತ ಮುಖಂಡ ಸಿ. ಪುಟ್ಟಸ್ವಾಮಿ, ಜಾನಪದ ವಿದ್ವಾಂಸ ಡಾ. ಎಂ. ಬೈರೇಗೌಡ, ದಲಿತ ಸಂಘಟನೆಗಳ ಒಕ್ಕೂಟದ ಶಿವಕುಮಾರ ಸ್ವಾಮಿ, ಶಿವಶಂಕರ್, ಹರೀಶ್ ಬಾಲು, ದೊಡ್ಡಿ ಸೂರಿ ಹಾಗೂ ಇತರರು ಇದ್ದರು.
ಜಾತಿ ಮತ್ತು ಧರ್ಮ ಮನೆಗಷ್ಟೇ ಸೀಮಿತವಾಗಬೇಕು. ಹೊರಗೆ ಬಂದಾಗ ನಮ್ಮದು ಮಾನವ ಧರ್ಮ ಮತ್ತು ಜಾತಿಯಾಗಬೇಕು. ದೇವರು ತನ್ನ ಸ್ವರೂಪದಲ್ಲಿ ಮನುಷ್ಯನನ್ನು ಸೃಷ್ಟಿಸಿದ್ದಾನೆ. ಕರುಣೆ ಪ್ರೀತಿ ಅಹಿಂಸೆ ರೂಪದಲ್ಲಿ ನೆಲೆಸಿದ್ದಾನೆ– ಘನ ಸ್ಯಾಮ್‌ಸನ್ ಕ್ರೈಸ್ತ ಸಭಾ ಪಾಲಕರು ರಾಮನಗರ–ಚನ್ನಪಟ್ಟಣ
ಮನಸ್ಸಿನಲ್ಲಿರುವ ಕೆಟ್ಟ ಗುಣಗಳನ್ನು ನಾವು ವಿರೋಧಿಸಿದರೆ ಬೇರೆಯವರನ್ನು ದ್ವೇಷಿಸುವ ಪ್ರಮೇಯವೇ ಬರುವುದಿಲ್ಲ. ಭೂಮಿ ಮೇಲಿರುವವರೆಲ್ಲರೂ ನಮ್ಮವರೇ. ಎಲ್ಲಾ ಧರ್ಮಗಳ ಸಾರವೂ ಒಂದೇ ಎಂಬ ಅರಿವು ಎಲ್ಲರಲ್ಲೂ ಮೂಡಲಿ– ಭಂತೆ ಬೋಧಿದತ್ತ ಥೇರೊ ಮುಖ್ಯಸ್ಥರು ನಳಂದ ವಿಶ್ವವಿದ್ಯಾಲಯ ಚಾಮರಾಜನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.