ಮಾಗಡಿ: ತಾಲ್ಲೂಕಿನ ಮಾಡಬಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ನಡೆದ ಜನಸಂಪರ್ಕ ಸಭೆಗೆ ಶಾಸಕ ಎಚ್.ಸಿ.ಬಾಲಕೃಷ್ಣ ಹಾಜರಾಗಿ ಜನರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ದೊರಕಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜೆಜೆಎಂ ಯೋಜನೆಯನ್ನು ಕೂಡಲೇ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಂಚನಬೆಲೆ ನೀರನ್ನು ಒಂದು ವರ್ಷದ ಒಳಗೆ ಎಲ್ಲಾ ಗ್ರಾಮಗಳಿಗೆ ಒದಗಿಸಲಾಗುವುದು ಎಂದರು.
ಕಾಡುಗೊಲ್ಲರ ಹಟ್ಟಿ, ತಾಂಡಾ, ಕಾಲೊನಿ, ಹಾಡಿಗಳನ್ನು ಗ್ರಾಮ ಠಾಣಾಗಳನ್ನಾಗಿಸಲು ಅವಧಿ ವಿಸ್ತರಿಸಲು ಕೃಷಿ ಸಚಿವರಲ್ಲಿ ಮನವಿ ಮಾಡಿದ್ದೇನೆ ಎಂದರು.
ನಾನು ರೈತರ ಮಗ. ಪ್ರತಿನಿತ್ಯ ರೈತರ ಸಂಪರ್ಕದಲ್ಲಿದ್ದೇನೆ. ರೈತರ ಋಣ ತೀರಿಸಲು ಮತ್ತು ಅವರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಮಂಚನಬೆಲೆ ಬಳಿ 250 ಎಕರೆ ಅರಣ್ಯ ಪ್ರದೇಶದಲ್ಲಿ ಸಸಿ ನೆಟ್ಟು ಸಸ್ಯ ಉದ್ಯಾನ ನಿರ್ಮಿಸುವಂತೆ ಕುಂಬಳಗೋಡು ವಲಯ ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಮಾಡಬಾಳ್ ಹೋಬಳಿಯಲ್ಲಿ ಇರುಳಿಗ, ಸೋಲಿಗ, ಮೇದ, ಕಾಡುಗೊಲ್ಲ, ಶಿಳ್ಳೇಕ್ಯಾತ ಇತರೆ ಬುಡಕಟ್ಟು ಜಾತಿಗಳಿವೆ. ಜೋಡುಗಟ್ಟೆಯ ಗಿರಿ ಜನರ ವಸತಿ ಶಾಲೆಗೆ ನಿವೇಶನ ನೀಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದೇನೆ. ಜತೆಗೆ ವಸತಿ ಶಾಲೆ ಕಟ್ಟಿಸಲು ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಬಸವೇನಹಳ್ಳಿ ಕಾಡುಗೊಲ್ಲರ ಹಟ್ಟಿಯ ಸಮಸ್ಯೆಗಳನ್ನು ಆಲಿಸಿದ ಶಾಸಕರು ಮಾಸಾಶನ ಹಾಗೂ ಜಾತಿ ಪ್ರಮಾಣ ಪತ್ರ ನೀಡುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ನಾಗರತ್ನಮ್ಮ ಚಂದ್ರೇಗೌಡ, ಪವಿತ್ರಾ ಕಾಂತರಾಜು, ಎಂ.ಸಿ.ರಾಜಣ್ಣ, ರಂಗಸ್ವಾಮಿ, ನರೇಂದ್ರ, ಚಂದ್ರ, ವಿಜಯಕುಮಾರ್ ಹೊನ್ನಾಳಿ, ಸುರೇಶ್, ರಾಜೀವ್, ಕೆಂಪೇಗೌಡ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.