ಚನ್ನಪಟ್ಟಣ: ಈ ವರ್ಷ ಮುಂಗಾರಿನ ಆರಂಭದಲ್ಲೇ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ತಾಲ್ಲೂಕಿನ ಜೀವನಾಡಿ ಇಗ್ಗಲೂರು ಬಳಿಯ ಎಚ್.ಡಿ.ದೇವೇಗೌಡ ಬ್ಯಾರೇಜ್ ಸಂಪೂರ್ಣ ತುಂಬಿದ್ದರೂ ತಾಲ್ಲೂಕಿನ ಕೆರೆಗಳು ಮಾತ್ರ ನೀರಿಲ್ಲದೆ ಬಣಗುಡುತ್ತಿವೆ.
ತಾಲ್ಲೂಕಿನಲ್ಲಿ ಈ ವರ್ಷದ ಆರಂಭದಲ್ಲಿ ಉತ್ತಮ ಮಳೆ ಬಾರದಿದ್ದರೂ, ಅಕ್ಕಪಕ್ಕದ ಜಿಲ್ಲೆಗಳಲ್ಲಿ ಬಿದ್ದ ಮಳೆಗೆ ಶಿಂಷಾ ನದಿಯಲ್ಲಿ ಹರಿದ ಹೆಚ್ಚುವರಿ ನೀರಿನಿಂದ ಎಚ್.ಡಿ.ದೇವೇಗೌಡ ಬ್ಯಾರೇಜ್ ಸಂಪೂರ್ಣ ತುಂಬಿ ತುಳುಕುತ್ತಿದೆ. ಆದರೆ, ನೀರನ್ನು ತಾಲ್ಲೂಕಿನ ಕೆರೆಗಳಿಗೆ ಹರಿಸದ ಕಾರಣ ಈ ಭಾಗದ ರೈತರು ಮಾತ್ರ ಬ್ಯಾರೇಜ್ ತುಂಬಿರುವುದಕ್ಕೆ ಸಂತಸಪಡುವ ಬದಲಾಗಿ ಬೇಸರ ವ್ಯಕ್ತಪಡಿಸುವಂತಾಗಿದೆ.
ದೇವೇಗೌಡ ಬ್ಯಾರೇಜ್‌ನಿಂದ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಲು ಗರಕಹಳ್ಳಿ ಏತ ನೀರಾವರಿ ಹಾಗೂ ಕಣ್ವ ಏತ ನೀರಾವರಿ ಯೋಜನೆ ಕಾರ್ಯನಿರ್ವಹಿಸುತ್ತಿವೆ. ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಲು ಪೈಪ್‌ಲೈನ್ ಅಳವಡಿಸಲಾಗಿದೆ. ಈ ಯೋಜನೆಗಳ ಮೂಲಕ ಸುಮಾರು ಹತ್ತು ವರ್ಷಗಳಿಂದ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಆದರೆ, ಈ ವರ್ಷ ತಾಲ್ಲೂಕಿನ ಕೆರೆಗಳಿಗೆ ಮಾತ್ರ ಅಧಿಕಾರಿಗಳು ನೀರು ಹರಿಸುವ ಕೆಲಸ ಮಾಡುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
0.18 ಟಿಎಂಸಿ ಅಡಿ ನೀರು ಸಾಮಾರ್ಥ್ಯದ ಬ್ಯಾರೇಜ್ 18 ಅಡಿ ಎತ್ತರ ಇದೆ. ಸದ್ಯ ಬ್ಯಾರೇಜ್‌ನಲ್ಲಿ ಸಂಪೂರ್ಣ 0.18 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಎರಡು ಏತ ನೀರಾವರಿ ಯೋಜನೆ ವತಿಯಿಂದ ತಾಲ್ಲೂಕಿನ 123 ಕೆರೆಗಳಿಗೆ ನೀರು ಹರಿಸುವ ಪೈಪ್‌ಲೈನ್ ವ್ಯವಸ್ಥೆ ಇದೆ. ಆದರೆ, ಈ ವರ್ಷ ತಾಲ್ಲೂಕಿನ ಕೆಲವು ಕೆರೆಗಳಿಗೆ ಮಾತ್ರ ನೀರು ಹರಿಸಲಾಗಿದೆ. ಬಹತೇಕ ಕೆರೆಗಳು ಇನ್ನು ಖಾಲಿಯಾಗಿಯೇ ಇವೆ ಎಂಬುದು ರೈತ ಮುಖಂಡರಾದ ತಿಮ್ಮಯ್ಯ, ಕೃಷ್ಣೇಗೌಡ, ರಾಜಣ್ಣ ಅವರ ಆರೋಪವಾಗಿದೆ.
ಕಳೆದ ಮೂರು ವರ್ಷಗಳ ಹಿಂದೆ ತಾಲ್ಲೂಕಿನ ಎಲ್ಲಾ ಕೆರೆಗಳು ತುಂಬಿ ಕೋಡಿ ಹರಿದಿದ್ದವು. ಮಳೆಯ ತೀವ್ರತೆಯಿಂದಾಗಿ ಕೆಲವು ಕೆರೆಗಳ ಅಚ್ಚುಕಟ್ಟು ಪ್ರದೇಶ ನೀರಿನಲ್ಲಿ ಮುಳುಗಿ ಹೋಗಿತ್ತು. ರೈತರು ಬೆಳೆದ ಬೆಳೆಗಳು ನೀರು ಪಾಲಾಗಿದ್ದವು. ಆದರೆ, ಕಳೆದ ಎರಡು ವರ್ಷದಿಂದ ಸೂಕ್ತ ಪ್ರಮಾಣದ ಮಳೆ ಇಲ್ಲದೆ ಕೆರೆಯಂಗಳ ಜಾನುವಾರುಗಳ ಮೇವಿನ ತಾಣಗಳಾಗಿವೆ. ಜೊತೆಗೆ ಕ್ರಿಕೆಟ್ ಪ್ರಿಯರ ಆಟದ ಅಂಗಳಗಳಾಗಿ ಮಾರ್ಪಾಡಾಗಿವೆ. ಅಧಿಕಾರಿಗಳು ಕೆರೆಗಳಿಗೆ ನೀರು ಹರಿಸುವ ಮನಸ್ಸು ಮಾಡುತ್ತಿಲ್ಲ ಎಂಬುದು ರೈತರ ಆರೋಪವಾಗಿದೆ.
ಆದರೆ, ಇದಕ್ಕೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನೀಡುವ ಉತ್ತರವೇ ಬೇರೆ. ಕಳೆದ ಕೆಲವು ದಿನಗಳಿಂದ ತಾಲ್ಲೂಕಿನ ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೀರು ಹರಿಸಲಾಗುತ್ತಿದೆ. ಗರಕಹಳ್ಳಿ ಏತ ನೀರಾವರಿ ಯೋಜನೆಯ ಆರು ಮೋಟಾರ್‌ಗಳಲ್ಲಿ ಕೆಲವು ರಿಪೇರಿಗೆ ಬಂದಿವೆ. ಸುಸ್ಥಿತಿಯಲ್ಲಿರುವ ಮೋಟಾರ್‌ಗಳನ್ನು ಚಾಲನೆ ಮಾಡಲಾಗಿದೆ. ಈಗಾಗಲೇ ತಾಲ್ಲೂಕಿನ ಸುಮಾರು 30ಕ್ಕೂ ಹೆಚ್ಚು ಕೆರೆಗಳಿಗೆ ನೀರು ಹರಿಸಲಾಗುತ್ತಿದೆ ಎನ್ನುತ್ತಾರೆ.
ಬ್ಯಾರೇಜ್ ತುಂಬಿರುವುದರಿಂದ ಆ ನೀರನ್ನು ವ್ಯರ್ಥವಾಗಿ ನದಿಗೆ ಹರಿಸುವ ಬದಲು ತಾಲ್ಲೂಕಿನ ಎಲ್ಲಾ ಕೆರೆಗಳಿಗೂ ಹರಿಸಿ ತುಂಬಿಸಿದರೆ ತಾಲ್ಲೂಕಿನಲ್ಲಿ ಅಂತರ್ಜಲ ಹೆಚ್ಚುವ ಜೊತೆಗೆ ತಾಲ್ಲೂಕಿನ ಕೃಷಿ ಚಟುವಟಿಕೆಗಳಿಗೂ ಅನುಕೂಲವಾಗುತ್ತದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈಗಾಗಲೇ 30 ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಮೋಟಾರ್‌ಗಳನ್ನು ಸರ್ವಿಸ್ ಮಾಡುತ್ತಿದ್ದು ಹಂತಹಂತವಾಗಿ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಯಲಿದೆ.ಸುರೇಶ್ ಎಇಇ ದೇವೇಗೌಡ ಬ್ಯಾರೇಜ್ ಇಗ್ಗಲೂರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.