ADVERTISEMENT

ಚನ್ನಪಟ್ಟಣ ಕ್ಷೇತ್ರ ಬಿಡುವ ಪ್ರಶ್ನೆಯೆ ಇಲ್ಲ

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2022, 4:26 IST
Last Updated 20 ಜೂನ್ 2022, 4:26 IST
ಚನ್ನಪಟ್ಟಣ ತಾಲ್ಲೂಕಿನ ಬೈರಾಪಟ್ಟಣ ಗಾಮದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಎಚ್.ಡಿ. ಕುಮಾರಸ್ವಾಮಿ ಭಾಗವಹಿಸಿದ್ದರು. ಬಮೂಲ್ ನಿರ್ದೇಶಕ ಜಯಮುತ್ತು, ಬಮೂಲ್ ವ್ಯವಸ್ಥಾಪಕ ನಿರ್ದೇಶಕ ಎಸ್.ಟಿ.ಸುರೇಶ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು ಇದ್ದರು
ಚನ್ನಪಟ್ಟಣ ತಾಲ್ಲೂಕಿನ ಬೈರಾಪಟ್ಟಣ ಗಾಮದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಎಚ್.ಡಿ. ಕುಮಾರಸ್ವಾಮಿ ಭಾಗವಹಿಸಿದ್ದರು. ಬಮೂಲ್ ನಿರ್ದೇಶಕ ಜಯಮುತ್ತು, ಬಮೂಲ್ ವ್ಯವಸ್ಥಾಪಕ ನಿರ್ದೇಶಕ ಎಸ್.ಟಿ.ಸುರೇಶ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು ಇದ್ದರು   

ಚನ್ನಪಟ್ಟಣ: ಚನ್ನಪಟ್ಟಣ ಕ್ಷೇತ್ರ ಬಿಟ್ಟು ಬೇರೆಡೆ ಸ್ಪರ್ಧಿಸುವ ಪ್ರಶ್ನೆಯೆ ಇಲ್ಲ. ಯಾವುದೇ ಕಾರಣಕ್ಕೂ ಚನ್ನಪಟ್ಟಣ ಕ್ಷೇತ್ರ ಬಿಡುವುದಿಲ್ಲ ಎಂದು ಶಾಸಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಬಮೂಲ್ ಕಲ್ಯಾಣ ಟ್ರಸ್ಟ್ ವತಿಯಿಂದ ತಾಲ್ಲೂಕಿನ ಬೈರಾಪಟ್ಟಣ ಗಾಮದ ಹಾಲು ಶಿಥಲೀಕರಣ ಕೇಂದ್ರದ ಆವರಣದಲ್ಲಿ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ ಹಾsಗೂ ಅರ್ಹ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ ಕಾರ್ಯಕ್ರಮದಲ್ಲಿ
ಮಾತನಾಡಿದರು.

‘ಕ್ಷೇತ್ರ ಬದಲಾವಣೆ ವಿಚಾರದ ಪ್ರಶ್ನೆಯೇ ಇಲ್ಲ. ನನ್ನದೇನು ಟೂರಿಂಗ್ ಟಾಕೀಸ್ ಅಲ್ಲ’ ಎಂದು ಖಡಕ್ಕಾಗಿ ನುಡಿದ ಕುಮಾರಸ್ವಾಮಿ, ‘ಕಳೆದ ಬಾರಿ ರಾಮನಗರ ಹಾಗೂ ಚನ್ನಪಟ್ಟಣ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆ. ಚನ್ನಪಟ್ಟಣದ ಕಾರ್ಯಕರ್ತರ ನೋವಿಗಾಗಿ ಸ್ಪರ್ಧಿಸಿದೆ. ರಾಮನಗರ ಕ್ಷೇತ್ರ ನನ್ನ ಕರ್ಮಭೂಮಿ. ರಾಮನಗರ ಮಾತ್ರವಲ್ಲ ಇಡೀ ಜಿಲ್ಲೆಯೇ ನನ್ನ ಕರ್ಮಭೂಮಿ. ರಾಮನಗರ ಜನತೆ ಒಪ್ಪಿಗೆ ಪಡೆದು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆ. ಅನಿವಾರ್ಯವಾಗಿ ರಾಜೀನಾಮೆ ನೀಡಿ ಚನ್ನಪಟ್ಟಣ ಉಳಿಸಿಕೊಂಡಿದ್ದೆ. ಮುಂದೆ ಚನ್ನಪಟ್ಟಣ ಕ್ಷೇತ್ರದಲ್ಲಿ ಮುಂದುವರಿಯುತ್ತೇನೆ. ಇಲ್ಲಿ ಮುಂದುವರಿಯಲು ನನಗೆ ಯಾವುದೇ ಅಂಜಿಕೆ ಇಲ್ಲ’ ಎಂದು ತಿಳಿಸಿದರು.

ADVERTISEMENT

‘ಕೇಂದ್ರದ ಚುನಾವಣಾ ಆಯೋಗ ಎರಡು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಕಾನೂನು ತರಲು ಹೊರಟಿದೆ. ಎರಡು ಕ್ಷೇತ್ರದಲ್ಲಿ ನಿಂತಲ್ಲಿ ₹ 5 ಲಕ್ಷ ದಂಡ ಹಾಕುವ ಕಾನೂನು ತರಲು ಹೊರಟಿದೆ. ಈ ಕಾನೂನು ಜಾರಿಯಾದರೆ ಒಳ್ಳೆಯ ಬೆಳವಣಿಗೆ. ಈ ಕಾನೂನು ತಂದರೆ ನನ್ನ ಸ್ವಾಗತವಿದೆ’ ಎಂದು
ಹೇಳಿದರು.

‘ಇಡೀ ರಾಜ್ಯದಲ್ಲಿ ಹಳ್ಳಿ ಹಳ್ಳಿಗಳಲ್ಲಿ ವಾಸ್ತವ್ಯ ಮಾಡುತ್ತೇನೆ. ಪಂಚರತ್ನ ಯೋಜನೆ ಅನುಷ್ಠಾನಕ್ಕೆ ತರಲು ನಾಡಿನ ಜನತೆ ಆಶೀರ್ವಾದ ಪಡೆಯಲು ಸವಾಲು ಸ್ವೀಕರಿಸಿ ಹೊರಟಿದ್ದೇನೆ. ಚುನಾವಣೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ನಮ್ಮ ಕುಟುಂಬದಲ್ಲಿ ಎಲ್ಲರೂ ಸೋತು ಗೆದ್ದಿದ್ದೇವೆ. ಸೋತ ತಕ್ಷಣ ಹೆದರಿ ಕುಳಿತುಕೊಂಡಿರಲಿಲ್ಲ. ನಾವು ಕಾರ್ಯಕರ್ತರು, ಜನರ ಮಧ್ಯೆ ಕೆಲಸ ಮಾಡಿಕೊಂಡು ಬಂದಿದ್ದೇವೆ. ಈಗಲೂ ನಮ್ಮ ಮುಂದೆ ಹೆಚ್ಚಿನ ಸ್ಥಾನ ಗೆಲ್ಲುವ ಸವಾಲಿದೆ’ ಎಂದು
ತಿಳಿಸಿದರು.

‘ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಇದಕ್ಕಾಗಿ ಎಷ್ಟೇ ಅಡಚಣೆ ಮಾಡಲಿ, ನಮ್ಮ ಪಕ್ಷವನ್ನು ಸರ್ವನಾಶ ಮಾಡುವ ಹುನ್ನಾರ ನಡೆಸಲಿ. ಅದೆಲ್ಲವನ್ನು ಮೆಟ್ಟಿ ನಿಂತು ನಮ್ಮ ಪಕ್ಷಕ್ಕೆ ಶಕ್ತಿ ತುಂಬುವ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಬಿಜೆಪಿಯ ‘ಬಿ’ ಟೀಮ್ ಯಾರೆಂದು ಈಗ ನಿರೂಪಿತವಾಗಿದೆ. ಜನಗಳ ಮುಂದೆ ಬಿ ಟೀಮ್, ಸಿ ಟೀಮ್, ಇ ಟೀಮ್ ಎಲ್ಲಾ ವಿಷಯ ಚರ್ಚೆ ಮಾಡುತ್ತೇನೆ’ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಮೂಲ್ ನಿರ್ದೇಶಕ ಜಯಮುತ್ತು, ಬಮೂಲ್ ವ್ಯವಸ್ಥಾಪಕ ನಿರ್ದೇಶಕ ಎಸ್.ಟಿ.ಸುರೇಶ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು, ಜೆಡಿಎಸ್ ಮುಖಂಡ ರಾದ ಹಾಪ್ ಕಾಮ್ಸ್ ದೇವರಾಜು, ಗೋವಿಂದಹಳ್ಳಿ ನಾಗರಾಜು, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಮಾಗನೂರು ಗಂಗರಾಜು, ಜೆಡಿಎಸ್ ಮುಖಂಡರುಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.