ರಾಮನಗರ:‘ಗ್ಯಾರಂಟಿ ಯೋಜನೆಯಡಿ ಸರ್ಕಾರ ₹2ಸಾವಿರ ಕೊಟ್ಟರೂ ಜನ ಯಾಕೆ ಮೈಕ್ರೊ ಫೈನಾನ್ಸ್‌ನಲ್ಲಿ ಸಾಲ ಮಾಡುತ್ತಿದ್ದಾರೆ? ನಾನು ಮುಖ್ಯಮಂತ್ರಿಯಾಗಿದ್ದಾಗ ಫೈನಾನ್ಸ್ ಹಾವಳಿ ತಡೆಗೆ ಒಂದು ಕಾನೂನು ತಂದಿದ್ದೆ. ಅದು ಏನಾಯಿತು?’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.
ತಾಲ್ಲೂಕಿನ ದಾಸೇಗೌಡನದೊಡ್ಡಿಯಲ್ಲಿ ಶುಕ್ರವಾರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆಯಲ್ಲಿರುವ ಮೈಕ್ರೊ ಫೈನಾನ್ಸ್ ಹಾವಳಿ ವಿಷಯವನ್ನು ಸರ್ಕಾರ ಗಮನಿಸಬೇಕಲ್ಲವೇ? ಉಸ್ತುವಾರಿ ಸಚಿವರು ನೋಡಬೇಕಲ್ವಾ? ಈ ಹಾವಳಿ ಕೇವಲ ರಾಮನಗರವಷ್ಟೇ ಅಲ್ಲದೆ, ರಾಜ್ಯದ ಹಲವೆಡೆ ವ್ಯಾಪಿಸಿದೆ ಎಂದರು.
‘ನಾನು ಮುಖ್ಯಮಂತ್ರಿಯಾಗಿದ್ದಾಗ ಮೈಕ್ರೊ ಫೈನಾನ್ಸ್‌ಗೆ ಕಡಿವಾಣ ಹಾಕಲು ಮಸೂದೆ ಪಾಸ್ ಮಾಡಿ ಕಾನೂನು ಸಹ ಜಾರಿಗೆ ತಂದಿದ್ದೆ. ಅಂದಿನ ಸಹಕಾರ ಸಚಿವರನ್ನು ಕೇರಳಕ್ಕೆ ಕಳುಹಿಸಿ ಈ ಬಗ್ಗೆ ಅಧ್ಯಯನ ಮಾಡಿಸಿದ್ದೆ. ಅಲ್ಲಿ ಮೈಕ್ರೊ ಫೈನಾನ್ಸ್ ನಿಯಂತ್ರಣಕ್ಕೆ ಒಂದು ಆಯೋಗವಿದೆ. ಅಂತಹ ಒಂದು ಆಯೋಗವನ್ನು ಇಲ್ಲೂ ಸ್ಥಾಪಿಸಿ ಸಾಲ ಮರುಪಾವತಿ ಮಾಡಲಾಗದವರಿಗೆ ಕಿರುಕುಳ ತಪ್ಪಿಸಿ ಅನುಕೂಲ ಮಾಡಿಕೊಡಲು ಪ್ರಯತ್ನಿಸಿದ್ದೆ’ ಎಂದು ಹೇಳಿದರು.
ಮೈಕ್ರೊ ಫೈನಾನ್ಸ್ ಕಿರುಕುಳ ಕಾರಣಕ್ಕೆ ಈಗಾಗಲೇ ರಾಮನಗರದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಮನಗರ ಉದ್ಧಾರ ಮಾಡ್ತೀವಿ ಎನ್ನುತ್ತಿದ್ದವರು ಯಾರಾದರೂ ಹೋಗಿ ಅವರ ಸಮಸ್ಯೆ ಕೇಳಿದ್ದೀರಾ? ಯಾವ ಮಂತ್ರಿಯಾದ್ರೂ ಬಂದಿದ್ದಾರಾ. ಇದನ್ನ ಜನ ಅರ್ಥ ಮಾಡಿಕೊಳ್ಳಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.