ADVERTISEMENT

ಎಚ್‌ಡಿಕೆ ಸುಳ್ಳಿನ ವ್ಯಾಪಾರಿ: ಎಂ.ಡಿ. ವಿಜಯದೇವು ವಾಗ್ದಾಳಿ

ಜೆಡಿಎಸ್‌ ವರಿಷ್ಠರ ವಿರುದ್ಧ ಹರಿಹಾಯ್ದ ಬ್ಲಾಕ್‌ ಕಾಂಗ್ರೆಸ್‌ ಮುಖಂಡರು

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 4:40 IST
Last Updated 25 ಜೂನ್ 2022, 4:40 IST
ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಎಂ.ಡಿ. ವಿಜಯದೇವು ಮಾತನಾಡಿದರು. ಪಕ್ಷದ ಮುಖಂಡರು ಉಪಸ್ಥಿತರಿದ್ದರು
ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಎಂ.ಡಿ. ವಿಜಯದೇವು ಮಾತನಾಡಿದರು. ಪಕ್ಷದ ಮುಖಂಡರು ಉಪಸ್ಥಿತರಿದ್ದರು   

ಕನಕಪುರ: ‘ಎಚ್‌.ಡಿ. ಕುಮಾರಸ್ವಾಮಿ ಸುಳ್ಳು ಆಶ್ವಾಸನೆಗಳನ್ನೇ ಮನೆ ದೇವರನ್ನಾಗಿ ಮಾಡಿಕೊಂಡಿದ್ದಾರೆ. ಸುಳ್ಳು ಹೇಳುವುದನ್ನು ಬಿಟ್ಟು ಜನತೆಗೆ ಸತ್ಯ ಹೇಳಲಿ. ಇನ್ನಾದರೂ ಜನರಿಗೆ ಟೋಪಿ ಹಾಕುವುದನ್ನು ಬಿಡಬೇಕು’ ಎಂದು ಬ್ಲಾಕ್‌ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಎಂ.ಡಿ. ವಿಜಯದೇವು ಆಗ್ರಹಿಸಿದರು.

ಕುಮಾರಸ್ವಾಮಿ ಅವರು ಸಾತನೂರು ತಾಲ್ಲೂಕು ಘೋಷಣೆ ಆಗುವ ತನಕ ತಾವು ಪೇಟ ಧರಿಸುವುದಿಲ್ಲವೆಂದು ಹೇಳಿಕೆ ನೀಡಿರುವುದನ್ನು ಖಂಡಿಸಿ ತಾಲ್ಲೂಕಿನ ಉಯ್ಯಂಬಳ್ಳಿ ಗ್ರಾಮದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಘಟಕದಿಂದ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದವರು. ಇನ್ನಾದರೂ ಬಾಲಿಷ ಹೇಳಿಕೆ ಹೇಳುವುದನ್ನು ಬಿಡಬೇಕು. ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇದ್ದಾಗ ಅವರಿಗೆ ಸಾತನೂರು ತಾಲ್ಲೂಕು ಘೋಷಿಸಲು ಸಮಯವಿರಲಿಲ್ಲ. ಆಗ ಅವರಿಗೆ ಅದು ನೆನಪಿಗೆ ಬಂದಿರಲಿಲ್ಲವೇ ಎಂದು ವ್ಯಂಗ್ಯವಾಡಿದರು.

ADVERTISEMENT

ರಾಜ್ಯದಲ್ಲಿ ಜೆಡಿಎಸ್‌ ಮುಳುಗುತ್ತಿದೆ. ಮೊದಲು ಪಕ್ಷ ಉಳಿಸಿಕೊಳ್ಳಲು ಅವರು ಮನಸ್ಸು ಮಾಡಬೇಕು. ಅದನ್ನು ಬಿಟ್ಟು 2023ಕ್ಕೆ ಪಕ್ಷವೇ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತದೆ. ಆಗ ತಾವು ಸಾತನೂರನ್ನು ತಾಲ್ಲೂಕಾಗಿ ಘೋಷಿಸುತ್ತೇನೆ ಎಂದು ಕನಕಪುರ ತಾಲ್ಲೂಕಿನ ಜನರಿಗೆ ಸುಳ್ಳು ಹೇಳಿ ನಂಬಿಸಲು ಹೊರಟಿದ್ದಾರೆ ಎಂದು ಟೀಕಿಸಿದರು.

ಎಚ್‌ಡಿಕೆ ಪ್ರತಿನಿಧಿಸಿದ ಹಾರೋಹಳ್ಳಿ ತಾಲ್ಲೂಕಾಗಿ ಮೂರು ವರ್ಷಗಳೇ ಕಳೆದಿವೆ. ಇಲ್ಲಿಯವರೆಗೂ ಯಾವುದೇ ಇಲಾಖೆಯ ಕಚೇರಿ ಕಾರ್ಯಾರಂಭ ಮಾಡಿಲ್ಲ. ಮೊದಲು ಅಲ್ಲಿ ತಾಲ್ಲೂಕುಮಟ್ಟದ ಇಲಾಖೆಯ ಕಚೇರಿಯಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸುವಂತೆ ಮಾಡಬೇಕು. ನಂತರ ಸಾತನೂರನ್ನು ತಾಲ್ಲೂಕು ಕೇಂದ್ರವಾಗಿ ಘೋಷಿಸಬೇಕು ಎಂದು ಸವಾಲು ಹಾಕಿದರು.

ಚುನಾವಣೆಯನ್ನು ಮುಗಿಸಿಕೊಂಡು ಹೋದರೆ ಐದು ವರ್ಷದ ನಂತರವೇ ಅವರು ಜನರಿಗೆ ಮುಖ ತೋರಿಸುತ್ತಾರೆ. ಕನಕಪುರ ಕ್ಷೇತ್ರವನ್ನು ಮರೆತು ಎಷ್ಟು ವರ್ಷವಾಗಿದೆ ಎಂಬುದು ಅವರಿಗೆ ಗೊತ್ತು. ಮತ್ತೆ ಮರು ಪಾದಾರ್ಪಣೆ ಮಾಡುತ್ತಿರುವ ಅವರು ಜನರನ್ನು ದಿಕ್ಕುತಪ್ಪಿಸಲು ಸುಳ್ಳು ಹೇಳುತ್ತಿದ್ದಾರೆ. ಇದನ್ನು ಅವರ ಪಕ್ಷದ ಕಾರ್ಯಕರ್ತರೇ ನಂಬುವುದಿಲ್ಲ ಎಂದರು.

ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಕುಮಾರಸ್ವಾಮಿ ಸುಳ್ಳಿನ ವ್ಯಾಪಾರಿಗಳು. ಮೂಟೆಗಟ್ಟಲೆ ಸುಳ್ಳು ಹೇಳುತ್ತಾರೆ. ಲಾರಿಗಟ್ಟಲೆ ಸುಳ್ಳಿನ ಮೂಟೆಯನ್ನು ಮಾರಾಟ ಮಾಡುತ್ತಿದ್ದಾರೆ. ಒಂದು ಸುಳ್ಳು ಹೇಳುವುದು, ಇಲ್ಲವೇ ಕಣ್ಣೀರಿನ ನಾಟಕವಾಡಿ ಭಾವನಾತ್ಮಕವಾಗಿ ಜನರನ್ನು ಮರುಳು ಮಾಡುವುದು ಇವರ ಕೆಲಸವಾಗಿದೆ ಎಂದು ಲೇವಡಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್‌. ಬಸಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಉಯ್ಯಂಬಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಏಳಗಳ್ಳಿ ರವಿ ಮಾತನಾಡಿ, ‘ಕುಮಾರಸ್ವಾಮಿ ಅವರಿಗೆ ಯಾರು ಸಹಾಯ ಮಾಡಿದರೋ ಅವರನ್ನೇ ಮರೆತಿದ್ದಾರೆ. ಯಾರು ಅವರನ್ನು ನಂಬುತ್ತಾರೋ ಅವರನ್ನು ಕೈಬಿಡುತ್ತಾರೆ. ಇದು ಅವರಲ್ಲಿ ರಕ್ತಗತವಾಗಿದೆ’ ಎಂದು ದೂರಿದರು.

ಸಂಗಮದಲ್ಲಿ ಸೇತುವೆ ನಿರ್ಮಾಣ ಮಾಡುವುದಾಗಿ ಅಡಿಗಲ್ಲು ಹಾಕಿದರು. ಅದು ಏನಾಯಿತು ಎಂಬುದು ಅವರಿಗೆ ಗೊತ್ತಿದೆ. ಈ ತಾಲ್ಲೂಕಿಗೆ, ಕನಕಪುರ ಕ್ಷೇತ್ರಕ್ಕೆ ಅವರ ಕೊಡುಗೆ ಏನೆಂಬುದನ್ನು ಹೇಳಬೇಕು. ಡಿ.ಕೆ. ಶಿವಕುಮಾರ್‌, ಡಿ.ಕೆ. ಸುರೇಶ್‌ ಅವರು ಕೊಡುಗೆ ಏನೆಂಬುದನ್ನು ಅಭಿವೃದ್ಧಿ ಕೆಲಸಗಳೇ ಹೇಳುತ್ತವೆ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ರಮೇಶ್‌, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವರಾಜು, ಕಾಂಗ್ರೆಸ್‌ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.