ADVERTISEMENT

ವೆಸ್ಟೆಂಡ್‌ ಹೋಟೆಲ್‌ನಲ್ಲಿ ಕುಮಾರಸ್ವಾಮಿ ರಾಸಲೀಲೆ: ಯೋಗೇಶ್ವರ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2022, 14:39 IST
Last Updated 14 ಮಾರ್ಚ್ 2022, 14:39 IST
ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌
ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌   

ರಾಮನಗರ: 'ಎಚ್.ಡಿ.ಕುಮಾರಸ್ವಾಮಿ 14 ತಿಂಗಳ ಕಾಲ ಮುಖ್ಯಮಂತ್ರಿ ಆಗಿದ್ದಾಗ ಚನ್ನಪಟ್ಟಣಕ್ಕೆ ಬರಲೇ ಇಲ್ಲ. ವೆಸ್ಟೆಂಡ್‌ ಹೋಟೆಲ್‌ನಲ್ಲಿ ರಾಸಲೀಲೆ ಆಡಿಕೊಂಡಿದ್ದು, ಈಗ ಜನರ ಮುಂದೆ ಕಣ್ಣೊರೆಸುವುದು ಶೋಭೆ ಅಲ್ಲ' ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ವಾಗ್ದಾಳಿ ನಡೆಸಿದರು.

ಚನ್ನಪಟ್ಟಣದಲ್ಲಿ ಸೋಮವಾರ ಪತ್ರಕರ್ತರ ಜೊತೆ ಅವರು ಮಾತನಾಡಿದರು. 'ಕುಮಾರಸ್ವಾಮಿಯ ವಿಚಾರ ಇಡೀ ಕರ್ನಾಟಕದ ಜನರಿಗೆ ಗೊತ್ತಿದೆ. ಈ ವಿಚಾರವನ್ನು ನನ್ನ ಬಾಯಿಂದ ಕೇಳಬೇಡಿ. ಹೋಟೆಲ್‌ನಲ್ಲಿ ಕಳೆದ ಸಮಯದಲ್ಲಿ ದಿನಕ್ಕೆ ಕೇವಲ ಒಂದು ಗಂಟೆ ಸಮಯ ಕೊಟ್ಟಿದ್ದರೆ ನಮ್ಮ ತಾಲ್ಲೂಕಿನ, ಜಿಲ್ಲೆಯ ಸಮಸ್ಯೆ ಬಗೆಹರಿಯುತ್ತಿತ್ತು. ಆವಯ್ಯ ಹಾಗೆ ಮಾಡಲಿಲ್ಲ. ಹೋಟೆಲ್‌ನಲ್ಲಿ ಇದ್ದಾಗ ಯಾವ ಮಂತ್ರಿ, ಶಾಸಕರನ್ನೂ ಭೇಟಿ ಆಗುತ್ತಿರಲಿಲ್ಲ' ಎಂದು ಟೀಕಿಸಿದರು.

'ಈ ಹಿಂದಿನ ಚುನಾವಣೆಯಲ್ಲಿ ನಾನು ನಿನ್ನ ಹೆಂಡತಿಯನ್ನು ಸೋಲಿಸಿದ್ದೆ. ನಿನ್ನ ವಿರುದ್ಧ ಸೋತಿದ್ದೆ. 2023ರ ಚುನಾವಣೆಯಲ್ಲಿ ನಾನು–ನೀನು ಮತ್ತೆ ಮುಖಾಮುಖಿ ಆಗುತ್ತೇವೆ. ಯಾಕಿಷ್ಟು ಕೀಳು ಮಟ್ಟದ ರಾಜಕಾರಣಕ್ಕೆ ಇಳಿದಿದ್ದೀಯೋ ಗೊತ್ತಿಲ್ಲ' ಎಂದು ಟೀಕಿಸಿದರು. 'ಕುಮಾರಸ್ವಾಮಿ ಮತ್ತು ನನ್ನನ್ನು ಒಟ್ಟಿಗೆ ಕೂರಿಸಿದರೆ, ವೈಯಕ್ತಿಕ ಮತ್ತು ಸಾರ್ವಜನಿಕ ವಿಚಾರದ ಬಗ್ಗೆ ನೇರವಾಗಿ ಚರ್ಚೆಗೆ ಸಿದ್ಧನಿದ್ದೇನೆ' ಎಂದು ಸವಾಲು ಹಾಕಿದರು.

ADVERTISEMENT

'ನಾನು ತಾಲ್ಲೂಕಿನಲ್ಲಿ ಯಾರ ಜಮೀನನ್ನೂ ಹೊಡೆದಿಲ್ಲ. ಆದರೆ ಕುಮಾರಸ್ವಾಮಿ ಮೇಲೆ ಆ ಆಪಾದನೆ ಇದೆ. ಬಿಡದಿಯಲ್ಲಿ ಬಂಗಲೆ ಕಟ್ಟಿದ್ದಾನಲ್ಲ, ಅದು ದಲಿತರ ಜಮೀನು ಎಂಬ ಆಪಾದನೆ ಇದೆ. ಅವನೊಬ್ಬ ನಯವಂಚಕ, ಅಪ್ರಬುದ್ಧ ರಾಜಕಾರಣಿ' ಎಂದು ಟೀಕಿಸಿದರು.

ಬಿಜೆಪಿ ನಾಯಕರಿಗೆ ಬುದ್ದಿ ಇಲ್ಲ: 'ಕುಮಾರಸ್ವಾಮಿಗೆ ನಮ್ಮ ಪಕ್ಷದವರೇ ರಾಜಕೀಯವಾಗಿ ಬೆಂಬಲ ನೀಡುತ್ತಿದ್ದಾರೆ. ನಮ್ಮ ಪಕ್ಷದ ನಾಯಕರಿಗೆ ಬುದ್ಧಿ ಇಲ್ಲ. ಅವನನ್ನು ಓಲೈಸುತ್ತಾರೆ. ಇದರಿಂದ ಬಿಜೆಪಿಗೇ ನಷ್ಟ' ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

'ಜೆಡಿಎಸ್ ಜೊತೆ ಹೊಂದಾಣಿಕೆಯ ಪ್ರಶ್ನೆ ಇಲ್ಲ. ನಮಗೆ ಅಂತಹ ಅನಿವಾರ್ಯತೆ ಇಲ್ಲ. ಈ ಬಗ್ಗೆ ಅರುಣ್‌ ಸಿಂಗ್‌ ಅವರೇ ಸ್ಪಷ್ಟಪಡಿಸಿದ್ದಾರೆ. ಜೆಡಿಎಸ್ ಇವತ್ತು ನೆಲ ಕಚ್ಚಿದ್ದು, ಅವರಿಗೆ ರಾಜಕೀಯ ಅಸ್ತಿತ್ವ ಇಲ್ಲ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಸ್ವತಂತ್ರವಾಗಿ ಬೆಳೆಯಬೇಕು ಎಂದರೆ ಸ್ವತಂತ್ರವಾಗಿ ಇರಬೇಕು. ಜೆಡಿಎಸ್ ಜೊತೆಗೆ ಕೈ ಜೋಡಿಸಬಾರದು. ಕುಮಾರಸ್ವಾಮಿಗೆ ಮತ್ತೆ ಶಕ್ತಿ ಕೊಟ್ಟರೆ ಈ ಹಿಂದೆ ವಿಧಾನಸೌಧದ ಮುಂದೆ ಎಡಪಕ್ಷಗಳನ್ನು ಕರೆತಂದು ಮಾಡಿದಂತೆ ಮತ್ತೇ ಘಟಬಂಧನ್‌ ಮಾಡುತ್ತಾರೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.