ADVERTISEMENT

‘ಸಿಪಿವೈ ನಿದ್ದೆಗೆಡಿಸಿದ ಎಚ್‌ಡಿಕೆ ಯಶಸ್ಸು’: ಚನ್ನಪಟ್ಟಣ JDS ತಾಲ್ಲೂಕು ಘಟಕ

ಸಿ.ಪಿ. ಯೋಗೇಶ್ವರ್‌ ವಿರುದ್ಧ ಜೆಡಿಎಸ್ ಮುಖಂಡರ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2022, 5:51 IST
Last Updated 24 ಡಿಸೆಂಬರ್ 2022, 5:51 IST
ಚನ್ನಪಟ್ಟಣದ ತಾಲ್ಲೂಕು ಜೆಡಿಎಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಸಿ. ಜಯಮುತ್ತು ಮಾತನಾಡಿದರು. ಮುಖಂಡರಾದ ಕುಕ್ಕೂರುದೊಡ್ಡಿ ಜಯರಾಂ, ವಡ್ಡರಹಳ್ಳಿ ರಾಜಣ್ಣ, ಭಾನುಪ್ರಸಾದ್ ಇದ್ದರು
ಚನ್ನಪಟ್ಟಣದ ತಾಲ್ಲೂಕು ಜೆಡಿಎಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಸಿ. ಜಯಮುತ್ತು ಮಾತನಾಡಿದರು. ಮುಖಂಡರಾದ ಕುಕ್ಕೂರುದೊಡ್ಡಿ ಜಯರಾಂ, ವಡ್ಡರಹಳ್ಳಿ ರಾಜಣ್ಣ, ಭಾನುಪ್ರಸಾದ್ ಇದ್ದರು   

ಚನ್ನಪಟ್ಟಣ: ತಾಲ್ಲೂಕಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪಂಚರತ್ನ ರಥಯಾತ್ರೆಯ ಯಶಸ್ಸು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರ ನಿದ್ದೆಗೆಡಿಸಿದೆ ಎಂದು ಜೆಡಿಎಸ್ ತಾಲ್ಲೂಕು ಘಟಕ ಲೇವಡಿ ಮಾಡಿದೆ.

ಶುಕ್ರವಾರ ತಾಲ್ಲೂಕು ಜೆಡಿಎಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಸಿ. ಜಯಮುತ್ತು, ‘ಕುಮಾರಸ್ವಾಮಿ ಅವರ ಪಂಚರತ್ನ ರಥಯಾತ್ರೆಯ ಯಶಸ್ಸಿನಿಂದ ಯೋಗೇಶ್ವರ್‌ಗೆ ಆತಂಕವಾಗಿದ್ದು, ತಾಲ್ಲೂಕಿನ ಜನರ ದಿಕ್ಕು ತಪ್ಪಿಸುವ ವಿಫಲ ಯತ್ನ ನಡೆಸಿದ್ದಾರೆ’ ಎಂದು ಆರೋಪಿಸಿದರು.

ತಾಲ್ಲೂಕಿನಲ್ಲಿ ನಡೆದ ಪಂಚರತ್ನ ರಥಯಾತ್ರೆ ವೇಳೆ ಕುಮಾರಸ್ವಾಮಿ ಅವರಿಗೆ ಕ್ರೇನ್ ಮತ್ತು ಜೆಸಿಬಿ ಯಂತ್ರದ ಮೂಲಕ ಬೃಹತ್ ಹಾರಗಳನ್ನು ಹಾಕಲಾಯಿತು. ಅವುಗಳನ್ನು ಹಾಕಿದ್ದು ಅಭಿಮಾನಿಗಳ ಹಣದಿಂದಲೇ ಹೊರತು, ಬೇನಾಮಿ ಮತ್ತು ಪಾಪದ ಹಣದಿಂದ ಅಲ್ಲ. ಕುಮಾರಸ್ವಾಮಿ ಅವರ ಏಳಿಗೆ ಸಹಿಸದ ನಿಮ್ಮನ್ನು ನೋಡಿದರೆ ಮರುಕ ಉಂಟಾಗುತ್ತದೆ ಎಂದು ಲೇವಡಿ ಮಾಡಿದರು.

ADVERTISEMENT

‘ಕುಮಾರಸ್ವಾಮಿ ಅವರು ಅಂಬೇಡ್ಕರ್ ಪ್ರತಿಮೆಗೆ ಹಾರ ಹಾಕಿಲ್ಲ ಎಂದು ಹೇಳುವ ಮೂಲಕ ಪರಿಶಿಷ್ಟ ಸಮುದಾಯವನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ದಲಿತ ಸಮುದಾಯದ ಬಗ್ಗೆ ಕುಮಾರಸ್ವಾಮಿ ಅವರಿಗೆ ಎಷ್ಟು ಕಾಳಜಿ ಇದೆ ಎಂಬುದು ತಾಲ್ಲೂಕಿನ ಜನತೆಗೆ ಗೊತ್ತು. ನಿಮ್ಮಿಂದ ಅದನ್ನು ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ’ ಎಂದು ತಿರುಗೇಟು ನೀಡಿದರು.

‘20 ವರ್ಷಗಳಿಂದ ಯೋಗೇಶ್ವರ್ ಮಾಡಿರುವ ಅಭಿವೃದ್ಧಿ ಕಾರ್ಯಗಳೇನು, ತಂದಿರುವ ಅನುದಾನ ಎಷ್ಟು, ಎಷ್ಟು ಕಾರ್ಯಕರ್ತರಿಗೆ ಅಧಿಕಾರ ಮತ್ತು ಜವಾವ್ದಾರಿ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ ಅವರು, ಕುಮಾರಸ್ವಾಮಿ ಕೇವಲ ನಾಲ್ಕೂವರೆ ವರ್ಷಗಳಲ್ಲಿ ತಂದ ಅನುದಾನ ಎಷ್ಟು, ಮಾಡಿರುವ ಅಭಿವೃದ್ಧಿ ಕಾರ್ಯಗಳೇನು ಎಂಬುದರ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ’ ಎಂದು ಯೋಗೇಶ್ವರ್ ಅವರಿಗೆ ಸವಾಲು ಹಾಕಿದರು.

ಮುಖಂಡರಾದ ಕುಕ್ಕೂರುದೊಡ್ಡಿ ಜಯರಾಂ, ವಡ್ಡರಹಳ್ಳಿ ರಾಜಣ್ಣ, ಭಾನುಪ್ರಸಾದ್, ಮುದುಗೆರೆ ಗ್ರಾ.ಪಂ. ಅಧ್ಯಕ್ಷೆ ಎಂ.ಆರ್. ಬಿಂದು, ಸತೀಶ್ ಬಾಬು, ಅಭಿನಂದನ್, ಅಜಿತ್, ಸಿ.ಟಿ. ಸುಧಾಕರ್, ಪ್ರಖ್ಯಾತ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.