ADVERTISEMENT

ಪ್ರೌಢಶಾಲಾ ಕಟ್ಟಡ ನಿರ್ಮಾಣ ಅಪೂರ್ಣ: ₹ 96 ಲಕ್ಷ ಅನುದಾನ ನಿಗದಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 2:47 IST
Last Updated 27 ಏಪ್ರಿಲ್ 2021, 2:47 IST
ಮಾಗಡಿ ಪಟ್ಟಣದಲ್ಲಿ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಕಟ್ಟಡದ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ
ಮಾಗಡಿ ಪಟ್ಟಣದಲ್ಲಿ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಕಟ್ಟಡದ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ   

ಮಾಗಡಿ: ಪಟ್ಟಣದ ಜಿಕೆಬಿಎಂಎಸ್‌ ಆವರಣದಲ್ಲಿ ಅರ್ಧಕ್ಕೆ ನಿಂತಿರುವ ಸರ್ಕಾರಿ ಬಾಲಕಿಯರ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

ಎರಡು ವರ್ಷಗಳ ಹಿಂದೆ ₹ 96 ಲಕ್ಷ ವೆಚ್ಚದಲ್ಲಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ನೂತನ ಕಟ್ಟಡ ಕಟ್ಟಲು ಆರಂಭಿಸಲಾಯಿತು. ನೆಲಹಂತದ ಕಟ್ಟಡ ಕಾಮಗಾರಿ ನಡೆಯಿತು.

ಒಟ್ಟು 6 ಕೊಠಡಿಗಳನ್ನು ಕಟ್ಟಿಸಬೇಕಿದೆ. ಕಟ್ಟಡ ಕಾಮಗಾರಿ ನಿಲ್ಲಿಸಲಾಗಿದೆ. ಅರ್ಧಕ್ಕೆ ನಿರ್ಮಾಣವಾಗಿರುವ ಶಾಲಾ ಕಟ್ಟಡದಲ್ಲಿ ಬಿಡಾಡಿ ದನಕರುಗಳು, ನಾಯಿಗಳು ಮಲಗುತ್ತಿವೆ. ಕಟ್ಟಡ ಕಾಮಗಾರಿಗೆ ಬಳಸಬೇಕಿದ್ದ ಸಿಮೆಂಟ್‌ ಗಟ್ಟಿಯಾಗಿದೆ. ಕಬ್ಬಿಣದ ಸರಳುಗಳು ತುಕ್ಕು ಹಿಡಿದಿವೆ ಎಂದು ದೂರಿದ್ದಾರೆ.

ADVERTISEMENT

ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಟ್ಟಡಕ್ಕೆ ಬಳಸಬೇಕಿದ್ದ ಪರಿಕರಗಳು ನಷ್ಟವಾಗಿವೆ. ಕಟ್ಟಡ ನಿರ್ಮಿಸಲು ಪ್ರಾಮಾಣಿಕವಾಗಿ ಶ್ರಮಿಸಿದ್ದ ಬಿಇಒ ಅವರನ್ನು ರಾಜಕೀಯ ಮಾಡಿ ವರ್ಗಾವಣೆ ಮಾಡಿಸಲಾಯಿತು. ಗುತ್ತಿಗೆದಾರನನ್ನು ಕೇಳುವವರೆ ಇಲ್ಲದಂತಾಗಿ ಶಾಲಾ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿದೆ ಎಂದು ಆರೋಪಿಸಿದ್ದಾರೆ.

‘10ನೇ ತರಗತಿ ಬಾಲಕಿಯರಿಗೆ ಶೌಚಾಲಯವಿಲ್ಲ. ನಮ್ಮ ಮಕ್ಕಳು ಮನೆಯಲ್ಲಿ ನಿತ್ಯಕರ್ಮ ಮುಗಿಸಿಕೊಂಡು ಶಾಲೆಗೆ ಬಂದವರು ಸಂಜೆ ಮತ್ತೆ ಮನೆಗೆ ಬಂದ ನಂತರ ನಿತ್ಯಕರ್ಮ ಮಾಡಬೇಕಿದೆ. ಡಿಡಿಪಿಐ ಮತ್ತು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌.ಎನ್‌.ಅಶೋಕ್‌ ಮತ್ತು ಶಾಸಕ ಎ.ಮಂಜುನಾಥ ಪ್ರೌಢಶಾಲೆ ಕಟ್ಟಡ ಪೂರ್ಣಗೊಳಿಸಲು ಮುಂದಾಗಬೇಕಿದೆ’ ಎಂದುಪೋಷಕ ಶಂಕರ್‌
ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.