ADVERTISEMENT

ರಾಮನಗರ: ಹಿಪ್ಪುನೇರಳೆಗೆ ಬಸವನ ಹುಳು ಬಾಧೆ

ಶೀತಮಯ ವಾತಾವರಣದಲ್ಲಿ ಬೆಳೆ ಕಾಡುವ ಆಫ್ರಿಕಾದ ದೈತ್ಯ ಹುಳು; ಬೆಳೆ ತಿನ್ನುವ ಹುಳುಗಳಿಂದ ರೈತರು ಕಂಗಾಲು

ಓದೇಶ ಸಕಲೇಶಪುರ
Published 30 ಅಕ್ಟೋಬರ್ 2025, 2:16 IST
Last Updated 30 ಅಕ್ಟೋಬರ್ 2025, 2:16 IST
ಹಿಪ್ಪುನೇರಳೆ ಬೆಳೆ ಬಾಧಿಸುತ್ತಿರುವ ಆಫ್ರಿಕನ್ ದೈತ್ಯ ಬಸವನಹುಳು
ಹಿಪ್ಪುನೇರಳೆ ಬೆಳೆ ಬಾಧಿಸುತ್ತಿರುವ ಆಫ್ರಿಕನ್ ದೈತ್ಯ ಬಸವನಹುಳು   

ರಾಮನಗರ: ‘ಮಳೆ ನಿಂತರೂ ಮರದ ಹನಿ ನಿಲ್ಲದು’ ಎಂಬ ಮಾತಿನಂತೆ, ಮಳೆಗಾಲ ಕಳೆದರೂ ಮಳೆ ಮಾತ್ರ ನಿಂತಿಲ್ಲ. ನಿರಂತರವಾಗಿ ದಿನಕ್ಕೆ ಒಂದೆರಡು ಬಾರಿಯಾದರೂ ವರುಣ ಕೃಪೆಯಾಗುತ್ತಲೇ ಇದೆ. ಈ ಹವಾಮಾನ ವೈಪರೀತ್ಯವು ಜಿಲ್ಲೆಯ ಪ್ರಮುಖ ಬೆಳೆಯಾದ ರೇಷ್ಮೆಗೆ ಕಂಟಕವಾಗಿ ಪರಿಣಮಿಸಿದೆ.

ಶೀತದ ಕಾರಣಕ್ಕೆಹಿಪ್ಪುನೇರಳೆ ಬೆಳೆಗೆ ಶಂಕಾಕಾರದ ಆಫ್ರಿಕಾದ ದೈತ್ಯ ಬಸವನ ಹುಳುಗಳು ಬಾಧಿಸತೊಡಗಿವೆ. ಗಿಡದ ಮೇಲೇರುವ ಈ ಬೆಳೆಗಳು ನಿಧಾನವಾಗಿ ಬೆಳೆಗಳನ್ನು ತಿನ್ನುತ್ತಾ ಹಾನಿ ಮಾಡುತ್ತಿವೆ. ಒಂದೆಡೆ ರೇಷ್ಮೆಗೆ ಉತ್ತಮ ಬೆಲೆ ಸಿಗುತ್ತಿರುವ ಸಮಾಧಾನದಲ್ಲಿರುವ ರೈತರು, ಬೆಳೆಯನ್ನು ಕಾಡುತ್ತಿರುವ ಬಸವನ ಹುಳುವಿನಿಂದಾಗಿ ಚಿಂತಾಕ್ರಾಂತರಾಗಿದ್ದಾರೆ.

ಶೈತ್ಯಾಂಶ ಕಾರಣ: ‘ಸುಮಾರು 15 ವರ್ಷಗಳ ಹಿಂದೆಯೇ ದೈತ್ಯಾಕಾರದ ಬಸವನ ಹುಳು ಹಿಪ್ಪುನೇರಳೆ ತೋಟಕ್ಕೆ ಲಗ್ಗೆ ಇಟ್ಟು ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದ್ದವು. ಬೆಳೆ ಬಾಧಿಸುವ ವಿದೇಶಿ ಪೀಡೆಯಾಗಿರುವ ಈ ಹುಳುಗಳು ನಿರಂತರ ಮಳೆಯ ಶೈತ್ಯಾಂಶದ ವಾತಾವರಣವಿದ್ದಾಗ ಬರುತ್ತವೆ’ ಎಂದು ಚನ್ನಪಟ್ಟಣದ ರೇಷ್ಮೆ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಕೆ.ಎಸ್. ಕುಮಾರ ಸುಬ್ರಹ್ಮಣ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಶುಷ್ಕ ಮತ್ತು ಹೆಚ್ಚಿನ ಉಷ್ಣಾಂಶವಿರುವ ಋತುವಿನಲ್ಲಿ ಸುಪ್ತಾವಸ್ಥೆಗೆ ತೆರಳುವ ಶಕ್ತಿ ಈ ಹುಳುಗಳಿಗೆ ಇದೆ. ಸುಲಭವಾಗಿ ಮರವನ್ನು ಏರಬಲ್ಲ ಇವು ಹಸಿರಾಗಿ ಇರುವುದನ್ನೆಲ್ಲಾ ತಿನ್ನಬಲ್ಲವು. ನೀರಾವರಿಯ ಹಿಪ್ಪುನೇರಳೆ ತೋಟದಲ್ಲಿನ ನಿತ್ಯ ಹಸಿರು ಇವುಗಳ ಬೆಳವಣಿಗೆಗೆ ಪೂರಕವಾಗಿವೆ’ ಎಂದು ಅಭಿಪ್ರಾಯಪಟ್ಟರು.

ಭಕ್ಷಿಸುವ ಕೆಂಬೂತ: ‘ಕೆಂಬೂತ ಪಕ್ಷಿ ಮಾತ್ರ ಈ ಹುಳುಗಳನ್ನು ಭಕ್ಷಿಸುತ್ತದೆ. ಉಳಿದಂತೆ ಯಾವೂ ಪಕ್ಷಿಗಳೂ ತಿನ್ನುವುದಿಲ್ಲ. ಈ ಹುಳುಗಳ ಜೈವಿಕ ನಿಯಂತ್ರಣದ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ. ಅದಕ್ಕೂ ಮುಂಚೆ ಬೆಳೆ ರಕ್ಷಣೆಗೆ ಅಗತ್ಯವಿರುವ ತುರ್ತು ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಇಲಾಖೆ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ’ ಎಂದು ಹೇಳಿದರು.

‘ಸದ್ಯ ಹುಳುಗಳ ನಿಯಂತ್ರಣಕ್ಕೆ ಮಾರುಕಟ್ಟೆಯಲ್ಲಿ ಸಿಗುವ ಮೆಟಾಲ್ಡಿಹೈಡ್ (ಶೇ 2.5) ಹರಳುಗಳನ್ನು ಎಕರೆಗೆ 2ರಿಂದ 3 ಕೆ.ಜಿ ಬಳಸಿ ಹುಳುಗಳನ್ನು ನಾಶ ಮಾಡಬಹುದು. ಇದು ಸಾಕು ಹಾಗೂ ಕಾಡುಪ್ರಾಣಿಗಳಿಗೆ ಸುರಕ್ಷಿತವಲ್ಲ ಎಂಬುದು ಗಮನದಲ್ಲಿರಬೇಕು. ಸ್ನೈಲ್ ಕಿಲ್ ಅನ್ನು ಮುಂಜಾಗ್ರತಾ ಕ್ರಮಗಳೊಂದಿಗೆ ಬಳಸಬೇಕು’ ಎಂದು ಸಲಹೆ ನೀಡಿದರು.

‘ಫೆರ್ರಿಕ್ ಫಾಸ್ಫೇಟ್ ಸುರಕ್ಷಿತವಾದ ಔಷಧವಾಗಿದ್ದು ಶೇ 1ರಷ್ಟು ಸಿಂಪರಣೆ ಮಾಡಬೇಕು. ಬೇವಿನ ಎಣ್ಣೆ, ಬೆಳ್ಳುಳ್ಳಿ ಕಷಾಯ ಹಾಗೂ ಹೊಗೆಸೊಪ್ಪಿನ ಕಷಾಯ ಸಿಂಪಡಣೆ ಹುಳುಗಳನ್ನು ವಿಕರ್ಷಕಗಳಾಗಿಸುತ್ತವೆ. ಹೊಗೆಸೊಪ್ಪಿನ ಕಷಾಯವನ್ನಷ್ಟೇ ಸಿಂಪಡಿಸಿದರೆ ಅದು ರೇಷ್ಮೆ ಹುಳುಗಳಿಗೆ ವಿಷಕಾರಿಯಾಗಲಿದೆ. ರೈತರು ಇವಿಷ್ಟು ಕ್ರಮಗಳನ್ನು ಅನುಸರಿಸಿದರೆ ಬೆಳೆ ಕಾಡುವ ಹುಳುಗಳಿಗೆ ಸ್ವಲ್ಪಮಟ್ಟಿಗೆ ಕಡಿವಾಣ ಬೀಳುತ್ತದೆ’ ಎಂದು ಮಾಹಿತಿ ನೀಡಿದರು.

ಹಿಪ್ಪುನೇರಳೆ ಬೆಳೆಯ ಮೇಲೇರಿ ಎಲೆಗಳನ್ನು ತಿನ್ನುವ ಬಸವನ ಹುಳು
ಹಿಪ್ಪುನೇರಳೆ ಬಳೆ ಬಾಧಿಸುತ್ತಿರುವ ಬಸವನ ಹುಳುಗಳಿಂದಾಗಿ ಬೆಳೆಗಾರರು ಕಂಗಾಲಾಗಿದ್ದಾರೆ. ಬೆಳೆಗೆ ಕಂಟಕವಾಗಿರುವ ಈ ಹುಳುಗಳ ನಿಯಂತ್ರಣಕ್ಕೆ ರೇಷ್ಮೆ ಇಲಾಖೆಯವರು ಆದಷ್ಟು ಬೇಗ ಪರಿಹಾರ ಒದಗಿಸಬೇಕು
ಗೌತಮ್ ಗೌಡ ಅಧ್ಯಕ್ಷ ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿ ಬೆಂಗಳೂರು ದಕ್ಷಿಣ ಜಿಲ್ಲೆ
ಶೀತದ ನೆಲದಲ್ಲಿ ನೆಲೆ ಕಂಡುಕೊಂಡಿರುವ ಬಸವನ ಹುಳುಗಳು

ತೋಟಗಾರಿಕೆ ಕೃಷಿ ಬೆಳೆಗಳಿಗೂ ಆತಂಕ

‘ಸದ್ಯ ಹಿಪ್ಪುನೇರಳೆಯಲ್ಲಿ ಕಾಣಿಸಿಕೊಂಡಿರುವ ಬಸವನ ಹುಳುಗಳು ಮುಂದೆ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೂ ಆತಂಕ ತದ್ದೊಡ್ಡುವ ಆತಂಕವಿದೆ. ಸಾಮಾನ್ಯವಾಗಿ ಮೂರರಿಂದ 5 ವರ್ಷ ಬದುಕುವ ಈ ಹುಳುಗಳಿಗೆ ನಮ್ಮ ಪರಿಸರದಲ್ಲಿ ಪ್ರತಿ ರೋಗಕಾರಕಗಳು ಅಪರೂಪವಾಗಿವೆ. ಇದು ದ್ವಿಲಿಂಗಿಯಾಗಿದ್ದು (ಒಂದೇ ದೇಹದ ಮೇಲೆ ಹೆಣ್ಣು ಮತ್ತು ಗಂಡು ಜನನಾಂಗಗಳನ್ನು ನೋಡಬಹುದು) ನೂರಕ್ಕೆ ನೂರು ಪುನರುತ್ಪತ್ತಿ ಶಕ್ತಿ ಹೊಂದಿದೆ. ಒಮ್ಮೆಗೆ ಅಂದಾಜು 200 ಮೊಟ್ಟೆಗಳನ್ನಿಡುವ ಈ ಹುಳ ತನ್ನ ಜೀವಿತಾವಧಿಯಲ್ಲಿ 1200 ಮೊಟ್ಟೆಗಳನ್ನು ಇಡಬಲ್ಲದು’ ಎಂದು ಕೆ.ಎಸ್. ಕುಮಾರ ಸುಬ್ರಮಣ್ಯ ತಿಳಿಸಿದರು.

ನಿಯಂತ್ರಣಕ್ಕೆ ಈ ಸಲಹೆ ಪಾಲಿಸಿ

* ಹಿಪ್ಪುನೇರಳೆ ತೋಟದಲ್ಲಿ ಬಸವನ ಹುಳುಗಳ ಅಡಗುದಾಣಗಳನ್ನು ಗುರುತಿಸಿ ನಿವಾರಿಸಬೇಕು. ಬೆಳೆ ಸುತ್ತ ಕಳೆ ಮತ್ತು ನೆರಳು ಇರದಂತೆ ನೋಡಿಕೊಳ್ಳಬೇಕು.

* ಹುಳು ಓಡಾಟ ತಡೆಯಲು ತೋಟದ ಸುತ್ತಲೂ ಒಂದು ಅಡಿಯಷ್ಟು ಗುಂಡಿ ತೆಗೆದು ಅದಕ್ಕೆ ಸುಣ್ಣ ಅಥವಾ ಬೂದಿ ಅಥವಾ ಸ್ನೈಲ್ ಕಿಲ್ ಹಾಕಬೇಕು.

* ಬಸವನ ಹುಳುಗಳನ್ನು ಹಿಡಿಯುವುದಕ್ಕಾಗಿ ಅವುಗಳನ್ನು ಒಂದೆಡೆಗೆ ಆಕರ್ಷಿಸಲು 25 ಕೆ.ಜಿ ಅಕ್ಕಿ ತೌಡು 3 ಕೆ.ಜಿ ಬೆಲ್ಲ 100 ಮಿ.ಲೀ. ಹರಳೆಣ್ಣೆ ಮಿಶ್ರಣ ಮಾಡಿ ಹುಳಿ ಬರಿಸಿ ಅಲ್ಲಲ್ಲಿ ಹಾಕಿ ತರಗೆಲೆ ನಿದ್ದೆ ಗೋಣಿ ಚೀಲ ಮುಚ್ಚಿದರೆ ಹುಳುಗಳು ಆಕರ್ಷಿತವಾಗುತ್ತವೆ.

* ಒಂದೆಡೆಗೆ ಸೇರುವ ಹುಳುಗಳನ್ನು ಗ್ಲೌಸ್ ಹಾಕಿದ ಕೈಗಳಿಂದ ಹಿಡಿದು ಉಪ್ಪುನೀರಿನಲ್ಲಿ ಹಾಕಿ ನಾಶ‌ಪಡಿಸಬೇಕು. ಬರಿಗೈಲಿ ಹಿಡಿಯಬಾರದು ಮತ್ತು ಕಾಲಲ್ಲಿ ತುಳಿದು ಹೊಸಕಿ ಹಾಕಬಾರದು. ಯಾಕೆಂದರೆ ಮನುಷ್ಯನಿಗೆ ರೋಗ ತರುವ ಪರಾವಲಂಬಿ ಹುಳುಗಳನ್ನು ಈ ಹುಳುಗಳು ಹೊಂದಿರುವ ಸಾಧ್ಯತೆ ಇದೆ‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.