ಕನಕಪುರ: ಪಟ್ಟಣದಲ್ಲಿರುವ ಭವ್ಯವಾದ ಸರ್ಕಾರಿ ಕಚೇರಿಗಳು ಹಾಗೂ ಸಂಕೀರ್ಣಗಳ ಸಾಲಿಗೆ ಸೇರಲು ಹೈಟೆಕ್ ಶಾಪಿಂಗ್ ಕಾಂಪ್ಲೆಕ್ಸ್ ಸಿದ್ಧವಾಗಿದೆ. ಹೌದು, ನಗರದ ಹೃದಯಭಾಗದಲ್ಲಿ ನಿರ್ಮಾಣವಾಗುತ್ತಿರುವ ಕಾಂಪ್ಲೆಕ್ಸ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇದೀಗ, ಉದ್ಘಾಟನೆಗೆ ತಯಾರಾಗಿದೆ.
ಕ್ಷೇತ್ರ ಮರುವಿಂಗಡಣೆ ಬಳಿಕ ಕನಕಪುರವನ್ನು ಪ್ರತಿನಿಧಿಸುತ್ತಾ ಬಂದಿರುವ ಉಪ ಮುಖ್ಯಮಂತ್ರಿಯೂ ಆಗಿರುವ ಡಿ.ಕೆ. ಶಿವಕುಮಾರ್, ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿ ತಾಲ್ಲೂಕಾಗಿ ಮಾಡುವ ಭರವಸೆ ನೀಡಿದ್ದರು. ತಾಲ್ಲೂಕು ಕೇಂದ್ರದಲ್ಲಿ ತಾಲ್ಲೂಕು ಆಡಳಿತದ ಶಕ್ತಿಸೌಧ, ಸರ್ಕಾರಿ ಆಸ್ಪತ್ರೆ, ಡಾ.ಬಿ.ಆರ್. ಅಂಬೇಡ್ಕರ್ ಭವನ ಸೇರಿದಂತೆ ಸುಸಜ್ಜಿತ ಕಟ್ಟಡಗಳು ತಲೆ ಎತ್ತಿವೆ. ಅದರ ಸಾಲಿಗೆ ಹೊಸ ಸೇರ್ಪಡೆ ಹೈಟೆಕ್ ಶಾಪಿಂಗ್ ಕಾಂಪ್ಲೆಕ್ಸ್.
₹25 ಕೋಟಿ ವೆಚ್ಚ:
ತಳಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಒಳಗೊಂಡ ಜಿ+2 ಹೈಟೆಕ್ ಶಾಪಿಂಗ್ ಕಾಂಪ್ಲೆಕ್ಸ್ ಅನ್ನು ಅಂದಾಜು ₹25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ತಳಮಹಡಿಯಲ್ಲಿ ವಾಹನಗಳ ಪಾರ್ಕಿಂಗ್, ಒಂದು ಭಾಗದಲ್ಲಿ ಹೊರರಾಜ್ಯಗಳ ಬಸ್ಸುಗಳ ನಿಲುಗಡೆಗೆ ಅವಕಾಶ, ಥಿಯೇಟರ್, ಹೋಟೆಲ್, ವಾಣಿಜ್ಯ ಮಳಿಗೆಗಳನ್ನು ಕಾಂಪ್ಲೆಕ್ಸ್ ಒಳಗೊಂಡಿದೆ.
2022ರಲ್ಲಿ ಪ್ರಾರಂಭಗೊಂಡ ಕಾಂಪ್ಲೆಕ್ಸ್ ಕಾಮಗಾರಿ 2025ಕ್ಕೆ ಪೂರ್ಣಗೊಂಡಿದೆ. ಸಣ್ಣಪುಟ್ಟ ಕೆಲಸಗಳು ನಡೆಯುತ್ತಿದ್ದು ಇನ್ನೆರಡು ತಿಂಗಳಲ್ಲಿ ಉದ್ಘಾಟನೆ ನಡೆಯಲಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲೇ ನಿರ್ಮಾಣವಾಗುತ್ತಿರುವ ಕಾಂಪ್ಲೆಕ್ಸ್ ಉದ್ಘಾಟನೆಗೊಂಡರೆ, ನಗರಕ್ಕೆ ಒಂದು ರೀತಿಯ ಕಳೆ ಬರಲಿದೆ.
‘ಬಸ್ ನಿಲ್ದಾಣದಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿರುವ ಶಾಪಿಂಗ್ ಕಾಂಪ್ಲೆಕ್ಸ್ (ಮಾಲ್) ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇಲ್ಲ. ಕಟ್ಟಡ ಪೂರ್ಣವಾಗಿ ನಮಗೆ ಹಸ್ತಾಂತರಗೊಂಡ ಬಳಿಕ ಮಾಹಿತಿ ಸಿಗಲಿದೆ’ ಎಂದು ಕನಕಪುರ ಡಿಪೋ ಮ್ಯಾನೇಜರ್ ನರಸಿಂಹರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
ದೂರದೃಷ್ಟಿಯ ಕಾಂಪ್ಲೆಕ್ಸ್:
‘ರಾಜಧಾನಿ ಬೆಂಗಳೂರು ಪಕ್ಕವಿರುವ ಕನಕಪುರವು ತೀವ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ನಗರವಾಗಿದೆ. ರಾಷ್ಟ್ರೀಯ ಹೆದ್ದಾರಿ ಕೂಡ ಹಾದು ಹೋಗಿದ್ದು, ಬೆಂಗಳೂರು–ಕನಕಪುರ ರಸ್ತೆಯಲ್ಲಿ ಖಾಸಗಿ ವಿಶ್ವವಿದ್ಯಾಲಯಗಳಿವೆ. ಇದೀಗ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ವೈದ್ಯಕೀಯ ಕಾಲೇಜು ಸೇರಿದಂತೆ ಹಲವು ಯೋಜನೆಗಳು ಬಂದಿವೆ. ನಗರದ ವ್ಯಾಪ್ತಿಯೂ ಹಿಗ್ಗಿದ್ದು, ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸುಸಜ್ಜಿತವಾಗಿ ಹೈಟೆಕ್ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಿಸಲಾಗಿದೆ’ ಎಂದು ಪಟ್ಟಣದ ನಿವಾಸಿ ಹರೀಶ್ ತಿಳಿಸಿದರು.
‘ಬೆಂಗಳೂರು ಬಿಟ್ಟರೆ ಇಂತಹ ಹೈಟೆಕ್ ಶಾಪಿಂಗ್ ಕಾಂಪ್ಲೆಕ್ಸ್ ಇರುವುದು ಕನಕಪುರದಲ್ಲೇ. ಚಿತ್ರಮಂದಿರ, ವಾಣಿಜ್ಯ ಮಳಿಗೆಗಳಿಂದ ಬಾಡಿಗೆ ಹಣವು ಬರುತ್ತದೆ. ಪಟ್ಟಣದಲ್ಲಿ ಪಾರ್ಕಿಂಗ್ ಸಮಸ್ಯೆಗೆ ಪರಿಹಾರವಾಗಿ ಕಾಂಪ್ಲೆಕ್ಸ್‌ನಲ್ಲಿ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೂರದೃಷ್ಟಿಯೊಂದಿಗೆ ಕಾಂಪ್ಲೆಕ್ಸ್ ನಿರ್ಮಿಸಿದ್ದಾರೆ’ ಎಂದು ಹೆಮ್ಮೆಯಿಂದ ಹೇಳಿದರು.
ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ನಗರಗಳಲ್ಲಿ ಚಾಲ್ತಿಯಲ್ಲಿರುವ ಮಾಲ್‌ಗಳ ಮಾದರಿಯಲ್ಲೆ ಕನಕಪುರದ ಬಸ್ ನಿಲ್ದಾಣದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣವಾಗಿರುವುದು ಹೆಮ್ಮೆಯ ವಿಷಯ. ಆದಷ್ಟು ಬೇಗ ಉದ್ಘಾಟನೆಗೊಂಡು ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿ.ಕೂತುಗೊಂಡನಹಳ್ಳಿ ಶೇಖರ್, ಕನಕಪುರ
ಹಿಂದುಳಿದ ತಾಲ್ಲೂಕಾಗಿದ್ದ ಕನಕಪುರವು ಅಭಿವೃದ್ಧಿಯಾದ ತಾಲ್ಲೂಕಾಗಿ ರಾಜ್ಯಕ್ಕೆ ಮಾದರಿಯಾಗುವತ್ತ ಹೆಜ್ಜೆ ಇಟ್ಟಿದೆ. ಜಿಲ್ಲಾ ಕೇಂದ್ರಸ್ಥಾನದಲ್ಲಿರುವಂತೆ ಸರ್ಕಾರಿ ಕಚೇರಿ ಮತ್ತು ಕಟ್ಟಡಗಳು ಹೈಟೆಕ್ ಆಗಿ ನಿರ್ಮಾಣಗೊಂಡಿವೆ. ಬಸ್ ನಿಲ್ದಾಣದ ಶಾಪಿಂಗ್ ಕಾಂಪ್ಲೆಕ್ಸ್ ಅದಕ್ಕೆ ಹೊಸ ಸೇರ್ಪಡೆಯಾಗಿದೆ.ವಿರೂಪಸಂದ್ರ ಸತೀಶ್, ಕನಕಪುರ
ಕನಕಪುರದ ಬಸ್ ನಿಲ್ದಾಣದದಲ್ಲಿ ನಿರ್ಮಾಣ ಮಾಡುತ್ತಿರುವ ಶಾಪಿಂಗ್ ಕಾಂಪ್ಲೆಕ್ಸ್ ಬಗ್ಗೆ ನಮಗೂ ಹೆಚ್ಚಿನ ಮಾಹಿತಿ ಇಲ್ಲ. ಇದು ಸಿವಿಲ್ ವಿಭಾಗದ ವ್ಯಾಪ್ತಿಗೆ ಬರಲಿದೆ. ಕಟ್ಟಡವನ್ನು ನಮಗೆ ಹಸ್ತಾಂತರಿಸಿದ ಬಳಿಕ ಪೂರ್ಣ ಮಾಹಿತಿ ಸಿಗಲಿದೆ.ಮಂಜುನಾಥ್, ವಿಭಾಗೀಯ ಸಂಚಾರ ಅಧಿಕಾರಿ, ಕೆಎಸ್‌ಆರ್‌ಟಿಸಿ ರಾಮನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.