ಹೊಲಯ ಸಂಬಂಧಿತ ಜಾತಿಗಳಿಗೆ ಸಮುದಾಯಕ್ಕೆ ಶೇ 8 ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ, ಬಲಗೈ ಹೊಲಯ ಸಂಬಂಧಿತ ಜಾತಿಗಳ ವೇದಿಕೆ ಪದಾಧಿಕಾರಿಗಳು ರಾಮನಗರದಲ್ಲಿ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಮನಗರ: ಬಲಗೈ ಹೊಲಯ ಸಮುದಾಯಗಳಿಗೆ ಶೇ8 ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಬಲಗೈ ಹೊಲಯ ಸಂಬಂಧಿತ ಜಾತಿಗಳ ವೇದಿಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರನ್ನು ಬುಧವಾರ ಭೇಟಿ ಮಾಡಿ ಮನವಿ ಸಲ್ಲಿಸಿದ ಪದಾಧಿಕಾರಿಗಳು, ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ವರದಿ ಆಧರಿಸಿ ಬಲಗೈ ಹೊಲಯ ಸಮುದಾಯಗಳಿಗೆ ಶೇ 6ರಷ್ಟು ಒಳ ಮೀಸಲಾತಿ ಹಂಚಿಕೆ ಮಾಡಿರುವುದರಿಂದ ಈ ಸಮುದಾಯಗಳಿಗೆ ಅನ್ಯಾಯವಾಗಿದೆ ಎಂದರು.
ಸರ್ಕಾರದ ನಿರ್ಧಾರದಿಂದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಹೊಲಯ ಸಂಬಂಧಿತ ಜಾತಿಗಳಿಗೆ ಅನ್ಯಾಯವಾಗಿದೆ. ಒಳ ಮೀಸಲಾತಿ ಜಾರಿ ನಿರ್ಧಾರಕ್ಕೆ ಸ್ವಾಗತವಿದೆ. ಆದರೆ, ಅಸಮಾನ ಹಂಚಿಕೆಗೆ ವಿರೋಧವಿದೆ ಎಂದರು.
ದೇಶದ ರಾಜ್ಯಗಳ ಪೈಕಿ ಕರ್ನಾಟಕದ ಮಾತ್ರ ಸೃಶ್ಯ ಜಾತಿಗಳನ್ನು ಮಾತ್ರ ಅಸ್ಪೃಶ್ಯ ಜಾತಿಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಇದರಿಂದಾಗಿ, ಅಸ್ಪೃಶ್ಯರು ಮತ್ತು ಸ್ಪೃಶ್ಯರನ್ನು ಒಂದೇ ರೀತಿ ಕಂಡು ಸಮಾನವಾಗಿ ಮೀಸಲಾತಿ ಹಂಚುವುದು ಸರಿಯಲ್ಲ. ಇದು ಸಂವಿಧಾನ ವಿರೋಧಿಯಾಗುತ್ತದೆ. ಹಾಗಾಗಿ, ಅಸ್ಪೃಶ್ಯ ಜಾತಿಗಳಿಗೆ ನಿಗದಿಪಡಿಸಿರುವ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಒಳ ಮಿಸಲಾತಿ ಹಂಚಿಕೆಯಲ್ಲಾಗಿರುವ ಈ ಪ್ರಮಾದವನ್ನು ಸರ್ಕಾರ ಕೂಡಲೇ ಪರಿಹರಿಸಬೇಕು. ಆ ಮೂಲಕ, ಸಾಮಾಜಿಕ ನ್ಯಾಯದ ತತ್ವಕ್ಕೆ ಅನುಗುಣವಾಗಿ ಅಸ್ಪೃಶ್ಯತೆಯ ನೋವುಂಡವರು ಹಾಗೂ ಅಲೆಮಾರಿಗಳಿಗೆ ನ್ಯಾಯಯುತವಾಗಿ ಮೀಸಲಾತಿ ಒದಗಿಸಬೇಕು. ಶತಮಾನಗಳಿಂದ ಮುಖ್ಯವಾಹಿನಿಗೆ ಬಾರದ ಸಮುದಾಯಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ಆಗ್ರಹಿಸಿದರು.
ವೇದಿಕೆ ಪದಾಧಿಕಾರಿಗಳಾದ ಪಟ್ಲು ಗೋವಿಂದರಾಜು, ಉಪ ವಿಭಾಗ ಮಟ್ಟದ ಎಸ್‌ಸಿ–ಎಸ್‌ಟಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಹರೀಶ್ ಬಾಲು, ಸಹಾಯಕ ಪ್ರಾಧ್ಯಾಪಕ ಪ್ರದೀಪ್ ಅಪ್ಪಗೆರೆ, ಮಂಜು ಅಪ್ಪಗೆರೆ, ಬಿವಿಎಸ್ ವೆಂಕಟೇಶ್, ಕೂಡ್ಲೂರು ಕಾಂತರಾಜು, ಸುಂದರೇಶ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.