ADVERTISEMENT

ರಾಮನಗರ: ಕಾಯಕಲ್ಪಕ್ಕೆ ಕಾದಿದೆ ಹೊಂಬಾಳಮ್ಮನ ಕೆರೆ

ಕೆರೆ ತುಂಬಾ ಗಿಡಗಂಟೆ, ಬಳ್ಳಿಗಳು: ಅಭಿವೃದ್ಧಿಗೆ ಸಾರ್ವಜನಿಕರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 4:58 IST
Last Updated 30 ಜೂನ್ 2025, 4:58 IST
ಮಾಗಡಿಯ ಐತಿಹಾಸಿಕ ಹೊಂಬಾಳಮ್ಮನ ಕೆರೆಯಲ್ಲಿ ಬೆಳೆದಿರುವ ಗಿಡಗಂಟೆ
ಮಾಗಡಿಯ ಐತಿಹಾಸಿಕ ಹೊಂಬಾಳಮ್ಮನ ಕೆರೆಯಲ್ಲಿ ಬೆಳೆದಿರುವ ಗಿಡಗಂಟೆ   

ಮಾಗಡಿ: ನಾಡಪ್ರಭು ಕೆಂಪೇಗೌಡರು ಕಟ್ಟಿಸಿರುವ ಐತಿಹಾಸಿಕ ಹೊಂಬಾಳಮ್ಮನ ಕೆರೆಗೆ ಪಟ್ಟಣದ ಚರಂಡಿ ನೀರು ಸೇರಿ ಗಬ್ಬುನಾರುತ್ತಿದ್ದು, ಕಾಯಕಲ್ಪಕ್ಕೆ ಕಾದಿದೆ.

ಕೆರೆ ತುಂಬಾ ಗಿಡಗಂಟೆ, ಬಳ್ಳಿಗಳು ಬೆಳೆದಿದ್ದು ಕೆರೆಯಲ್ಲಿ ನೀರೇ ಕಾಣದಂತಾಗಿ ಯಾವುದಕ್ಕೂ ಉಪಯೋಗಕ್ಕೆ ಬಾರದಂತಾಗಿದೆ ಕೆರೆ ಪರಿಸ್ಥಿತಿ. ಮಾಗಡಿ- ಬೆಂಗಳೂರು ಮುಖ್ಯರಸ್ತೆಯಲ್ಲೇ ಹೊಂಬಾಳಮ್ಮನ ಕೆರೆ ಇರುವುದರಿಂದ ಕೆರೆ ಅಭಿವೃದ್ಧಿಪಡಿಸಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಹಲವು ವರ್ಷಗಳ ಹಿಂದೆಯೇ ಹೊಂಬಾಳಮ್ಮನಕೆರೆ ಅಭಿವೃದ್ಧಿಗಾಗಿ ಭೂಮಿ ಪೂಜೆ ನೆರವೇರಿಸಲಾಗಿತ್ತು. ಆದರೆ, ಮಾಗಡಿ-ಬೆಂಗಳೂರು ಚತುಷ್ಪಥದ ಕೆ-ಶಿಫ್ ರಸ್ತೆ ಕಾಮಗಾರಿ ಆರಂಭವಾದ ಹಿನ್ನೆಲೆ ರಸ್ತೆಗೆ ಕೆರೆಯ ಎಷ್ಟು ಭಾಗ ಹೋಗುತ್ತದೆ ಅದನ್ನು ನೋಡಿ ಕೆರೆ ಅಭಿವೃದ್ಧಿ ಮಾಡೋಣ ಎಂದು ಮೂರು ವರ್ಷಗಳಿಂದ ಅಭಿವೃದ್ಧಿ ಮಾಡಿರಲಿಲ್ಲ. ಈಗ ರಸ್ತೆ ಜಾಗ ಗುರುತಿಸಿ ಅಗಲೀಕರಣವಾಗುತ್ತಿರುವುದರಿಂದ ಕೂಡಲೇ ಹೊಂಬಾಳಮ್ಮನ ಕೆರೆ ಅಭಿವೃದ್ಧಿ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ADVERTISEMENT

ಕೆರೆ ಉಳಿವಿಗಾಗಿ ಹೋರಾಟ: ಹಲವು ವರ್ಷಗಳ ಹಿಂದೆ ಹೊಂಬಾಳಮ್ಮನ ಕೆರೆ ಮುಚ್ಚಿ ಸರ್ಕಾರಿ ಬಸ್ ನಿಲ್ದಾಣ ಮಾಡುವ ಯೋಜನೆ ಇತ್ತು ಅದಕ್ಕೆ ಕೆಲವರು ತೀವ್ರ ವಿರೋಧ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಕೆರೆ ಮುಚ್ಚಲು ಬಿಡುವುದಿಲ್ಲ ಎಂದು ಹೋರಾಟ ನಡೆಸಲಾಗಿತ್ತು ಹಾಗಾಗಿ ಈ ಕೆರೆ ಉಳಿದಿದೆ ಎಂದು ಪರಿಸರ ಪ್ರೇಮಿ ಡಿ.ರಾಮಚಂದ್ರಯ್ಯ ಅವರ ಮಾತಾಗಿದೆ.

ಅಂತರ್ಜಲದ ಹೆಚ್ಚಳಕ್ಕೆ ಸಹಕಾರಿ: ಪಟ್ಟಣದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಲು ಹೊಂಬಾಳಮ್ಮನಕೆರೆ ಪ್ರಮುಖ ಪಾತ್ರ ವಹಿಸಿತ್ತು. 50 ವರ್ಷಗಳ ಹಿಂದೆ ಹೊಂಬಾಳಮ್ಮನ ಕೆರೆ ಕುಡಿಯುವ ನೀರಿಗಾಗಿ ಬಳಕೆ ಮಾಡಲಾಗುತ್ತಿತ್ತು. ಹಲವು ಬಾವಿಗಳಿಗೆ ಜೀವ ಜಲವಾಗಿತ್ತು. ಆದರೆ, ಈಗ ಚರಂಡಿ ನೀರು ಕೆರೆಯ ಒಡಲು ಸೇರಿದ್ದು ಕಾಯಕಲ್ಪಕ್ಕೆ ಕಾಯುತ್ತಿದೆ. ಹಾಗಾಗಿ ಕೆರೆ ಅಭಿವೃದ್ಧಿಪಡಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.

ಮಾಗಡಿಯ ಐತಿಹಾಸಿಕ ಹೊಂಬಾಳಮ್ಮನ ಕೆರೆಯಲ್ಲಿ ಬೆಳೆದಿರುವ ಗಿಡಗಂಟೆ
ಕೆರೆಯಲ್ಲಿ ಚರಂಡಿ ನೀರು ಗಿಡಗಂಟೆಗಳು ಹೆಚ್ಚಾಗಿ ಬೆಳೆದು ಕೆರೆ ಅಂದವೇ ಕಳೆದುಕೊಂಡಿದೆ. ಹಾಗಾಗಿ ಕೂಡಲೇ ಸರ್ಕಾರ ಕೆರೆ ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.
– ರವಿಕುಮಾರ್, ರೈತ ಸಂಘ ಜಿಲ್ಲಾ ಯುವ ಘಟಕದ ಅಧ್ಯಕ್ಷರು ಮಾಗಡಿ
ಕುದೂರು ಮತ್ತು ಹೊಂಬಾಳಮ್ಮನಕೆರೆ ಅಭಿವೃದ್ಧಿ ಮಾಡುವ ಹಿನ್ನೆಲೆ ಟೆಂಡರ್ ಪ್ರಕ್ರಿಯೆ ಹಂತದಲ್ಲಿದ್ದು ಕೆಲವೇ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ‍ಪೂರ್ಣಗೊಳ್ಳಲಿದೆ.
– ಕೆಂಚೇಗೌಡ, ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರು ಮಾಗಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.