
ಹುಬ್ಬಳ್ಳಿಯ ಇನಾಂ ವೀರಾಪುರದಲ್ಲಿ ನಡೆದ ಗರ್ಭಿಣಿಯ ಮರ್ಯಾದೆಗೇಡು ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ, ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ರಾಮನಗರ: ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರದಲ್ಲಿ ಮರ್ಯಾದೆಗೇಡು ಹತ್ಯೆ ಮಾಡಿರುವುದನ್ನು ತೀವ್ರವಾಗಿ ಖಂಡಿಸಿರುವ ದಲಿತ ಸಂಘಟನೆಗಳ ಒಕ್ಕೂಟವು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದೆ.
ಒಕ್ಕೂಟದ ಅಧ್ಯಕ್ಷ ಶಿವಕುಮಾರಸ್ವಾಮಿ ಹಾಗೂ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರಿಗೆ ಮನವಿ ಸಲ್ಲಿಸಿ ತಪ್ಪಿತಸ್ಥರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಿವೇಕಾನಂದ ದೊಡ್ಡಮನಿ ಎಂಬ ದಲಿತ ಸಮುದಾಯದ ಯುವಕನನ್ನು ಮದುವೆಯಾದ ಕಾರಣಕ್ಕೆ ಲಿಂಗಾಯತ ರಡ್ಡಿ ಸಮುದಾಯದ ಮಾನ್ಯ ಪಾಟೀಲ ಎಂಬ ಯುವತಿ ಗರ್ಭಿಣಿಯಾಗಿದ್ದರೂ ಆಕೆಯ ಕುಟುಂಬದವರು ಹತ್ಯೆ ಮಾಡಿ ಕ್ರೌರ್ಯ ಮೆರೆದಿದ್ದಾರೆ. ಹುಬ್ಬಳ್ಳಿ ಬಳಿ ನಡೆದ ಮರ್ಯಾದೆಗೇಡು ಹತ್ಯೆ ಮಾನವ ಕುಲವೇ ತಲೆ ತಗ್ಗಿಸುವಂತಿದೆ. ರಾಜ್ಯದಲ್ಲಿ ಇತ್ತೀಚೆಗೆ ಜಾತೀಯತೆಯ ಕ್ರೌರ್ಯ ಪಾರಮ್ಯ ಮೆರೆಯುತ್ತಿದೆ ಎಂದು ಮುಖಂಡರು ಹೇಳಿದರು.
ಈ ದೇಶದ ಧರ್ಮಗ್ರಂಥವಾದ ಸಂವಿಧಾನವು ಪ್ರಾಪ್ತ ವಯಸ್ಸಿಗೆ ಬಂದವರು ತಮಗೆ ಇಷ್ಟ ಬಂದವರನ್ನು ವಿವಾಹವಾಗುವ ಹಕ್ಕು ನೀಡಿದೆ. ಆದರೆ, ಸಮಾಜ ಇಂದಿಗೂ ಜಾತಿ ಮತ್ತು ಧರ್ಮಕ್ಕೆ ಅಂಟಿಕೊಂಡು ಎಲ್ಲವನ್ನೂ ನಿಯಂತ್ರಿಸುತ್ತಾ ಬರುತ್ತಿದೆ. ಅದೇ ಕಾರಣಕ್ಕೆ ಅನ್ಯ ಧರ್ಮ ಮತ್ತು ಜಾತಿಯವರನ್ನು ಪ್ರೀತಿಸುವ ಅಥವಾ ಮದುವೆಯಾಗುವವರು ತಮ್ಮ ಕುಟುಂಬದವರಿಂದಲೇ ಕೊಲೆಯಾಗುವಂತಹ ಪ್ರಕರಣಗಳಿಗೆ ಈ ಸಮಾಜ ಸಾಕ್ಷಿಯಾಗುತ್ತಿದೆ ಎಂದರು.
ಹರೀಶ್ ಬಾಲು, ಎಸ್. ವೆಂಕಟೇಶ್, ಗವಿಯಯ್ಯ, ಕಿರಣ್ ಕೆ.ಎಲ್, ಶಿವಶಂಕರ್, ನವೀನ್ ಸಾಕ್ಯ, ಕಿರಣ್ ಸಾಗರ್, ಕುಂಬಾಪುರ ಬಾಬು, ಸುರೇಶ್ ಎನ್., ಸಿದ್ದರಾಜು, ದುರ್ಗಾ ಪ್ರಸಾದ್, ವಿನೋದ್, ಯೋಗಾನಂದ, ಕೋಟೆ ಕುಮಾರ್, ಶ್ರೀನಿವಾಸ್ ಅಪ್ಪಗೆರೆ, ಕೀರ್ತಿ ಹಾಗೂ ಇತರರು ಇದ್ದರು.
‘ಜಡ್ಜ್ ಮೇಲ್ವಿಚಾರಣೆಯಲ್ಲಿ ತನಿಖೆಯಾಗಲಿ’
‘ಜಾತಿ ಆಧಾರಿತ ದೌರ್ಜನ್ಯ ಹಲ್ಲೆ ಅತ್ಯಾಚಾರ ಕೊಲೆಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕಾಯ್ದೆಗಳು ಜಾರಿಯಲ್ಲಿದ್ದರೂ ಇವುಗಳಿಗೆ ಕಡಿವಾಣ ಬಿದ್ದಿಲ್ಲ. ವ್ಯವಸ್ಥೆ ವಿರುದ್ಧ ಸಂತ್ರಸ್ತರು ಸೆಣಸಾಡಿ ನ್ಯಾಯ ಪಡೆಯಲಾಗದ ವ್ಯವಸ್ಥೆಯು ಸಮಾಜದಲ್ಲಿ ಮನೆ ಮಾಡಿದೆ. ಇದರಿಂದಾಗಿ ಸಂತ್ರಸ್ತರಿಗೆ ನ್ಯಾಯ ಎಂಬುದು ಮರೀಚಿಕೆಯಾಗಿದೆ. ಹಾಗಾಗಿ ಮಾನ್ಯ ಪಾಟೀಲ ಕೊಲೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಬೇಕು. ಪ್ರಕರಣದ ತನಿಖೆಯ ಮೇಲ್ವಿಚಾರಣೆಗೆ ನ್ಯಾಯಾಧೀಶರೊಬ್ಬರನ್ನು ನೇಮಿಸಬೇಕು. ಜಾತಿ ಕಾರಣಕ್ಕೆ ಇನ್ನು ಮುಂದೆ ಮರ್ಯಾದೆಗೇಡು ಕೊಲೆ ಮಾಡಿದವರಿಗೆ ಮರಣದಂಡನೆಯಂತಹ ಕಠಿಣ ಶಿಕ್ಷೆ ವಿಧಿಸಲು ಅವಕಾಶ ಇರುವ ಕಾಯ್ದೆಯನ್ನು ಮಾನ್ಯ ಪಾಟೀಲ ಹೆಸರಿನಲ್ಲಿ ಜಾರಿಗೆ ತರಬೇಕು’ ಎಂದು ಒಕ್ಕೂಟದ ಅಧ್ಯಕ್ಷ ಶಿವಕುಮಾರಸ್ವಾಮಿ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.