ADVERTISEMENT

ಹಾಪ್‌ಕಾಮ್ಸ್ ನಿರ್ದೇಶಕ ಚುನಾವಣೆ ಇಂದು

ಪರಿಶಿಷ್ಟ ಮೀಸಲಾತಿಯಿಂದ ಸ್ಪರ್ಧಿಸಿದ ಬಿ.ಪಿ. ಬೈರಯ್ಯ ಆಯ್ಕೆ ಬಹುತೇಕ ಖಚಿತ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 11:34 IST
Last Updated 24 ಫೆಬ್ರುವರಿ 2026, 11:34 IST
ಕೋಡಂಬಹಳ್ಳಿ ಶಿವಮಾದು
ಕೋಡಂಬಹಳ್ಳಿ ಶಿವಮಾದು   

ಚನ್ನಪಟ್ಟಣ: ಬೆಂಗಳೂರು ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣಾ ಸಂಘದ (ಹಾಪ್‌ಕಾಮ್ಸ್) ಆಡಳಿತ ಮಂಡಳಿಯ ಐದು ವರ್ಷದ ಅವಧಿಗೆ ಬೆಂಗಳೂರು ದಕ್ಷಿಣ ಜಿಲ್ಲೆಯ 3 ನಿರ್ದೇಶಕ ಸ್ಥಾನಗಳ ಆಯ್ಕೆಗೆ ಇದೇ 24ರಂದು ಚುನಾವಣೆ ನಡೆಯಲಿದೆ. 

ಜಿಲ್ಲೆಯ ಮೂರು ನಿರ್ದೇಶಕರ ಸ್ಥಾನಕ್ಕೆ ಚನ್ನಪಟ್ಟಣ ತಾಲ್ಲೂಕಿನ ಹಾಪ್‌ಕಾಮ್ಸ್ ಮತದಾರರೇ ನಿರ್ಣಾಯಕರಾಗಿದ್ದಾರೆ. 

ಬೆಂಗಳೂರು ದಕ್ಷಿಣ ಜಿಲ್ಲೆಯಿಂದ ಸಾಮಾನ್ಯ ಸ್ಥಾನದಿಂದ ಎರಡು, ಪರಿಶಿಷ್ಟ ಜಾತಿ ಮೀಸಲಾತಿಯಿಂದ ಹಾಗೂ ಒಂದು ಸ್ಥಾನ ಸೇರಿ ಮೂರು ಮಂದಿ ನಿರ್ದೇಶಕರನ್ನು ಆಯ್ಕೆ ಮಾಡಬೇಕಿದೆ. ಸಾಮಾನ್ಯ ಕ್ಷೇತ್ರಕ್ಕೆ ಕಾಂಗ್ರೆಸ್ ಬೆಂಬಲಿತರಾಗಿ ಕೋಡಂಬಹಳ್ಳಿ ಶಿವಮಾದು, ಪ್ರದೀಪ್ ಕುಮಾರ್, ಜಯಕುಮಾರ್ ಅಭ್ಯರ್ಥಿಗಳಾಗಿದ್ದಾರೆ. ಜೆಡಿಎಸ್ ಬೆಂಬಲಿತರಾಗಿ ಮಳೂರುಪಟ್ಟಣ ರವಿ, ಗುರುಕುಮಾರ್ ಅಭ್ಯರ್ಥಿಗಳಾಗಿದ್ದಾರೆ. ಪರಿಶಿಷ್ಟ ಜಾತಿ ಮೀಸಲಾತಿಯಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಬಿ.ಪಿ. ಬೈರಯ್ಯ ಮತ್ತು ಚಿರಂಜೀವಿ ಕಣದಲ್ಲಿದ್ದಾರೆ. 

ADVERTISEMENT

ಇವರಲ್ಲಿ ಕಾಂಗ್ರೆಸ್ ಬೆಂಬಲಿತ ಜಯಕುಮಾರ್, ಜೆಡಿಎಸ್ ಬೆಂಬಲಿತ ಗುರುಕುಮಾರ್, ಪರಿಶಿಷ್ಟ ಜಾತಿ ಮೀಸಲಾತಿಯಿಂದ ಚಿರಂಜೀವಿ ಕಣದಿಂದ ಹಿಂದೆ ಸರಿದಿದ್ದಾರೆ. ಕಾಂಗ್ರೆಸ್‌ನ ಕೋಡಂಬಹಳ್ಳಿ ಶಿವಮಾದು, ಪ್ರದೀಪ್ ಕುಮಾರ್, ಜೆಡಿಎಸ್‌ ಬೆಂಬಲಿತ ಮಳೂರುಪಟ್ಟಣ ರವಿ ಚುನಾವಣೆ ಎದುರಿಸಬೇಕಿದೆ. ಪರಿಶಿಷ್ಟ ಜಾತಿ ಮೀಸಲಾತಿಯಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಬಿ.ಪಿ. ಬೈರಯ್ಯ ಚುನಾವಣೆಯಿಂದ ಹಿಂದೆ ಸರಿದ ಕಾರಣ ಕಾಂಗ್ರೆಸ್ ಬೆಂಬಲಿತ ಅಭ್ಯರ್ತಿ ಬಿ.ಪಿ. ಬೈರಯ್ಯ ಅವರ ಆಯ್ಕೆ ಬಹುತೇಕ ಖಚಿತವಾಗಿದೆ. 

ಹಿಂದಿನ ಅವಧಿಯಲ್ಲಿಯೂ ಕಾಂಗ್ರೆಸ್ ಪಕ್ಷದ ಬೆಂಬಲಿತರೇ ಹಾಪ್‌ಕಾಮ್ಸ್ ನಿರ್ದೇಶಕರಾಗಿದ್ದರು. ಈ ಅವಧಿಗೂ ತಮ್ಮ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಒತ್ತಡದಲ್ಲಿ ಕಾಂಗ್ರೆಸ್ ಇದೆ. ಜೊತೆಗೆ ಕಾಂಗ್ರೆಸ್ ಬೆಂಬಲಿತರನ್ನು ಗೆಲ್ಲಿಸಿಕೊಳ್ಳುವ ಒತ್ತಡದಲ್ಲಿರುವ ಚನ್ನಪಟ್ಟಣ ಶಾಸಕ ಸಿ.ಪಿ. ಯೋಗೇಶ್ವರ್ ಸ್ಥಳೀಯ ಮುಖಂಡರ, ಹಾಪ್ ಕಾಮ್ಸ್ ಮತದಾರರ ಸರಣಿ ಸಭೆಗಳನ್ನು ನಡೆಸಿ ಮತದಾರರ ಮನವೊಲಿಸುವ ಕಾರ್ಯ ಮಾಡುತ್ತಿದ್ದಾರೆ. ಜೊತೆಗೆ ಸ್ಥಳೀಯವಾಗಿ ತಮ್ಮ ಪ್ರಭಾವ ಉಳಿಸಿಕೊಳ್ಳುವ ಜವಾಬ್ದಾರಿ ಯೋಗೇಶ್ವರ್ ಮೇಲಿದೆ.

ಕಳೆದ ಎರಡು ವಿಧಾನಸಭೆ ಚುನಾವಣೆಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದ ಜೆಡಿಎಸ್, 2024ರಲ್ಲಿ ನಡೆದ ಉಪಚುನಾವಣೆ ವೇಳೆ ಪರಾಭವ ಅನುಭವಿಸಿತ್ತು.

ಜೊತೆಗೆ ಬಮೂಲ್ ಚುನಾವಣೆ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಚುನಾವಣೆಯಲ್ಲಿಯೂ ಮುಗ್ಗರಿಸಿತ್ತು. ಈಗ ಮತ್ತೊಂದು ಹೋರಾಟ ನೀಡುವ ಅವಕಾಶವನ್ನು ಹಾಪ್ ಕಾಮ್ಸ್ ಚುನಾವಣೆ ಒದಗಿಸಿದೆ. ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳಿಗೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಂಡು ಹೊಸ ಉತ್ಸಾಹದಲ್ಲಿ ಇರುವ ಜೆಡಿಎಸ್ ತನ್ನ ಒಬ್ಬ ಅಭ್ಯರ್ಥಿ ಮಳೂರುಪಟ್ಟಣ ರವಿ ಅವರನ್ನು ಗೆಲ್ಲಿಸಿಕೊಳ್ಳುವ ಪಣ ತೊಟ್ಟಿದೆ.

ಬೆಂಗಳೂರಿನ ಲಾಲ್‌ಬಾಗ್‌ನ ಮೈಸೂರು ಉದ್ಯಾನವನ ಕಲಾಸಂಘದಲ್ಲಿ (ಡಾ.ಎಂ.ಎಚ್. ಮರೀಗೌಡ ಭವನ) ನಾಳೆ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಆನಂತರ ಮತ ಎಣಿಕೆ ನಡೆಯಲಿದೆ.

ಪ್ರದೀಪ್ ಕುಮಾರ್
ರವಿ

ಕಾಂಗ್ರೆಸ್‌ಗೆ ಪ್ರತಿಷ್ಠೆ

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಒಟ್ಟು 238 ಹಾಪ್ ಕಾಮ್ಸ್ ಮತದಾರರು ಇದ್ದಾರೆ. ಇವರಲ್ಲಿ 140 ಮತದಾರರು ಚನ್ನಪಟ್ಟಣ ತಾಲ್ಲೂಕಿನಲ್ಲೇ ಇದ್ದಾರೆ.

ಉಳಿದಂತೆ ರಾಮನಗರ 30 ಮಾಗಡಿ 24 ಕನಕಪುರ 44 ಮತದಾರರು ಸೇರಿ ಒಟ್ಟು 98 ಮತದಾರರಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತ ಎಲ್ಲ ಅಭ್ಯರ್ಥಿಗಳು ಚನ್ನಪಟ್ಟಣದವರೇ ಆದ ಕಾರಣ ತಾಲ್ಲೂಕಿನಲ್ಲಿ ಸಿಂಹಪಾಲು ಮತದಾರರು ಇರುವ ಕಾರಣ ಚನ್ನಪಟ್ಟಣದಲ್ಲಿ ಹಾಪ್ ಕಾಮ್ಸ್ ಚುನಾವಣಾ ಪೈಪೋಟಿ ಏರ್ಪಟ್ಟಿದೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ತವರು ಜಿಲ್ಲೆಯಾದ ಬೆಂಗಳೂರು ದಕ್ಷಿಣ ಜಿಲ್ಲೆಯ ಎಲ್ಲ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಹಾಗಾಗಿ ಹಾಪ್ ಕಾಮ್ಸ್ ಚುನಾವಣೆಯನ್ನು ಕಾಂಗ್ರೆಸ್ ಪ್ರತಿಷ್ಠೆಯಾಗಿ ಸ್ವೀಕರಿಸಿದೆ.