ADVERTISEMENT

ಚನ್ನಪಟ್ಟಣ: ಮೂರು ಅಡಿ ಮೇಲಕ್ಕೇರುತ್ತಿದೆ ಮನೆ!

ಜಾಕ್‌ಗಳ ನೆರವಿನಿಂದ ಕಾಮಗಾರಿ: ಜಿಲ್ಲೆಯಲ್ಲೇ ಪ್ರಥಮ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2020, 19:01 IST
Last Updated 4 ಮಾರ್ಚ್ 2020, 19:01 IST
ಚನ್ನಪಟ್ಟಣದ ರಾಂಪುರ ವೆಂಕಟೇಶ್‌ ಮನೆಯಲ್ಲಿ ಕಾಮಗಾರಿ ನಡೆದಿರುವುದು
ಚನ್ನಪಟ್ಟಣದ ರಾಂಪುರ ವೆಂಕಟೇಶ್‌ ಮನೆಯಲ್ಲಿ ಕಾಮಗಾರಿ ನಡೆದಿರುವುದು   

ರಾಮನಗರ: ಚನ್ನಪಟ್ಟಣದ ವಿವೇಕಾನಂದ ನಗರದಲ್ಲಿ ಇರುವ ಮನೆಯೊಂದು ತಂತ್ರಜ್ಞಾನ ಬಳಕೆಯಿಂದ ಮೂರು ಅಡಿಗಳಷ್ಟು ಮೇಲಕ್ಕೆ ಎತ್ತರಿಸಿಕೊಂಡು ಎಲ್ಲರ ಗಮನ ಸೆಳೆಯುತ್ತಿದೆ.

ನೆರೆಯ ಮಂಡ್ಯದಲ್ಲಿ ಇದೇ ಮಾದರಿಯಲ್ಲಿ ಹೆದ್ದಾರಿ ಬೈಪಾಸ್‌ ಪಕ್ಕದ ಮನೆಯೊಂದನ್ನು ಸ್ಥಳಾಂತರ ಮಾಡಲಾಗಿತ್ತು. ಇದೀಗ ನಮ್ಮ ಜಿಲ್ಲೆಯಲ್ಲೂ ಇದೇ ಪ್ರಯತ್ನ ನಡೆದಿದೆ. ಜಿಲ್ಲೆಯ ಪಾಲಿಗೆ ಇದು ಮೊದಲ ಪ್ರಯೋಗವಾಗಿದೆ.

ಎತ್ತರಿಸಿದ್ದು ಏಕೆ?: ವಿವೇಕಾನಂದ ನಗರದಲ್ಲಿ 300ಕ್ಕೂ ಹೆಚ್ಚು ಮನೆಗಳಿವೆ. ಹೊಸತಾಗಿ ನಿರ್ಮಿಸಿದ ರಸ್ತೆ ಕಾಂಪೌಂಡಿಗೆ ಅಂಟಿಕೊಂಡಿದೆ. ಒಳಚರಂಡಿ ವ್ಯವಸ್ಥೆ ಸೂಕ್ತವಾಗಿಲ್ಲ. ಈ ಮನೆ ಹಳ್ಳದಲ್ಲಿದ್ದ ಕಾರಣ ಚರಂಡಿ ನೀರು ಸೇರಿ ಕೊಳಕಾಗಿತ್ತು. ಮನೆಯ ಮಾಲೀಕರಾದ ರಾಂಪುರ ವೆಂಕಟೇಶ್ 16 ವರ್ಷಗಳ ಹಿಂದೆ ಈ ಮನೆ ನಿರ್ಮಿಸಿದ್ದು, ಇಲ್ಲಿನ ಅನೈರ್ಮಲ್ಯದಿಂದ ಮನೆಯ ಆಸೆಯನ್ನೇ ಬಿಟ್ಟಿದ್ದರು. ಬಾಗಿಲಿಗೆ ಬೀಗ ಜಡಿದು ಇದನ್ನು ಮಾರುವ ನಿರ್ಧಾರಕ್ಕೂ ಬಂದಿದ್ದರು. ಆದರೆ ಇದೀಗ ಈ ಹಳ್ಳದಲ್ಲಿನ ಮನೆ ತಳಪಾಯದಿಂದ ಮೂರು ಅಡಿಗಳಷ್ಟು ಮೇಲಕ್ಕೆ ಏಳುತ್ತಿದ್ದು, ಸಮಸ್ಯೆ ಬಗೆಹರಿಯತೊಡಗಿದೆ.

ADVERTISEMENT

‘ಸ್ನೇಹಿತರೊಬ್ಬರು ಹರಿಯಾಣದ ಕಂಪನಿಯೊಂದು ಮನೆಯನ್ನೇ ಲಿಫ್ಟ್‌ ಮಾಡುತ್ತದೆ ಎಂದು ಮಾಹಿತಿ ನೀಡಿದರು. ಮಂಡ್ಯದಲ್ಲಿ ಅವರು ಹೀಗೆ ಸ್ಥಳಾಂತರಿಸಿದ ಮನೆಯನ್ನು ನೋಡಿಕೊಂಡು ಬಂದು ನಂತರ ಫೋನ್‌ ಮೂಲಕ ಕಂಪನಿಯನ್ನು ಸಂಪರ್ಕಿಸಿದೆವು. ಮನೆಯ ಅಡಿಪಾಯವನ್ನು ಬಿಡಿಸಿ, ಜಾಕ್ ಕೊಟ್ಟು ನಿಧಾನವಾಗಿ ಮೇಲೆತ್ತಲಾಗಿದೆ. ಇದಕ್ಕಾಗಿ ಕಂಪನಿಯು ಪ್ರತಿ ಚದರ ಅಡಿಗೆ ₨250 ಶುಲ್ಕ ವಿಧಿಸಿದೆ. ಮೂರು ಅಡಿಗಳ ಬಳಿಕ ಹೆಚ್ಚುವರಿಯಾಗಿ ಪ್ರತಿ ಅಡಿ ₨ 50 ದರ ಇದೆ. ಒಟ್ಟಾರೆ 6ರಿಂದ 7 ಲಕ್ಷ ಖರ್ಚಾಗುವ ನಿರೀಕ್ಷೆ ಇದೆ’ ಎಂದು ವೆಂಕಟೇಶ್ ತಿಳಿಸಿದರು.

‘ಹರಿಯಾಣ ಮೂಲದ ಈ ಕಂಪನಿ, ಸುರಕ್ಷಿತವಾಗಿ ಮನೆ ಮೇಲೆತ್ತಿದೆ. ಎಲ್ಲಿಯೂ ಮನೆಗೆ ಹಾನಿಯಾಗಿಲ್ಲ. ಒಂದು ವೇಳೆ ಹಾನಿಯಾದರೂ ಅದಕ್ಕೆ ತಗುಲುವ ವೆಚ್ಚವನ್ನು ತಾನೇ ಭರಿಸುವುದಾಗಿ ಭರವಸೆ ನೀಡಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.