ರಾಮನಗರ: ‘ಕರ್ನಾಟಕದಲ್ಲಿ ಬಿಜೆಪಿಗೆ ಲೈಫ್ ಕೊಟ್ಟಿದ್ದು ನಾನೇ. ಅವರಿಂದ ನನ್ನನ್ನು ಏನೂ ಮಾಡಲು ಆಗುವುದಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಚನ್ನಪಟ್ಟಣದಲ್ಲಿ ಶುಕ್ರವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘2006ರಲ್ಲಿ ಬಿಜೆಪಿಯವರೆಲ್ಲ ಮಂಗನ ತರ ಇನ್ನೊಂದು ಪಕ್ಷಕ್ಕೆ ಹಾರಲು ರೆಡಿಯಾಗಿದ್ದರು. ಇದೇ ಯಡಿಯೂರಪ್ಪ ಅರ್ಜಿ ಹಾಕಿಕೊಂಡು ನನ್ನ ಹತ್ತಿರ ಬಂದಿದ್ದರು. ನನ್ನನ್ನು ಮಂತ್ರಿ ಮಾಡಿ. ಬಿಜೆಪಿಗೆ ರಾಜೀನಾಮೆ ಕೊಡುತ್ತೇನೆ ಎಂದು ಅಂಗಲಾಚಿದ್ದರು’ ಎಂದು ದೂರಿದರು.
‘ರಾಮನಗರ ಜಿಲ್ಲೆಯಿಂದ ನನ್ನನ್ನು ಖಾಲಿ ಮಾಡಿಸಲು ಎಲ್ಲ ಒಟ್ಟಾಗಿ ನಿಂತಿದ್ದಾರೆ. ಆದರೆ ದೇವೇಗೌಡರ ಕುಟುಂಬದವರ ಕೊಡುಗೆ ಏನೆಂಬುದು ಜಿಲ್ಲೆಯ ಜನರಿಗೆ ಗೊತ್ತಿದೆ. ನಾನು ಬಂಡೆ ಒಡೆದಿಲ್ಲ. ಜನರ ಹಣ ಲೂಟಿ ಮಾಡಿಲ್ಲ. ನಾನು ಈ ಮಣ್ಣಿನ ಮಗ. ನನ್ನ ಅಂತಿಮ ಕಾಲ ರಾಮನಗರದಲ್ಲಿಯೇ’ ಎಂದರು.
ಸಚಿವ ಸಿ.ಪಿ. ಯೋಗೇಶ್ವರ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ‘ಆತ ಜನರ ತಲೆ ಹೊಡೆದ ಹಣದಲ್ಲಿ ಮಂತ್ರಿ ಆಗಿದ್ದಾನೆ. ಮೆಗಾ ಸಿಟಿ ಹೆಸರಲ್ಲಿ ಜನರಿಗೆ ಸೈಟು ಕೊಡುತ್ತೇನೆ ಎಂದು ಹೇಳಿ ಅವರ ಹಣವನ್ನು ಲೂಟಿ ಮಾಡಿದ್ದಾನೆ. ಯಡಿಯೂರಪ್ಪನನ್ನು, ಆರ್‌ಎಸ್ಎಸ್ ನಾಯಕರನ್ನು ಮೆಚ್ಚಿಸಲು ಮಾತನಾಡುತ್ತಾನೆ. ನನ್ನ ಬಯ್ದುಕೊಂಡು ಹೊಟ್ಟೆಪಾಡು ಮಾಡ್ತಿದ್ದಾನೆ. ಚನ್ನಪಟ್ಟಣದಲ್ಲಿ ನನ್ನನ್ನು ಏನೂ ಮಾಡಲು ಆಗಲ್ಲ ಎನ್ನುವುದು ಆತನಿಗೆ ಚೆನ್ನಾಗಿ ಗೊತ್ತಿದೆ’ ಎಂದರು.
‘ನೀನು ನನ್ನ ಮುಂದೆ ಬಚ್ಚಾ ಇದ್ದೀಯಾ. ನಿನಗಿಂತಲೂ ಚೆನ್ನಾಗಿ ಮಾತನಾಡಲು ನನಗೂ ಬರುತ್ತದೆ. ಸಚಿವ ಆಗಿದ್ದೀಯಾ. ಸುಮ್ಮನೆ ಕೆಲಸ ಮಾಡಿಕೊಂಡು ಹೋಗು. ನನ್ನ ವಿರುದ್ಧ ಮಾತನಾಡಿ ಲೀಡರ್ ಆಗುವ ಪ್ರಯತ್ನ ಮಾಡಬೇಡ’ ಎಂದು ಯೋಗೇಶ್ವರ್ ವಿರುದ್ಧ ಕಿಡಿಕಾರಿದರು.
‘ಚನ್ನಪಟ್ಟಣ ಈಗಾಗಲೇ ಆತನ ಕೈಬಿಟ್ಟು ಹೋಗಿದೆ. ಇಲ್ಲಿನ ಜನ ಆತನನ್ನು ದೂರ ಇಟ್ಟಿದ್ದಾರೆ. ಮುಂದಿನ ರಾಜಕೀಯ ಭವಿಷ್ಯ ಏನು ಎಂಬುದು ಆತನನ್ನು ಕಾಡುತ್ತಿದೆ. ಹೀಗಾಗಿ ಮಂಗಳೂರಿಗೆ ಹೋಗಿ ಅಲ್ಲಿನ ಬಗ್ಗೆ ಹೇಳದೇ ಚನ್ನಪಟ್ಟಣದ ಬಗ್ಗೆ ಮಾತನಾಡಿದ್ದಾನೆ. ಈ ಹಿಂದೆ ಹುಣಸೂರಿಗೆ ಹೋಗಿ ಸೀರೆ ಹಂಚಿ ಜನರ ಕೇಳುವ ಪ್ರಯತ್ನ ನಡೆಸಿದ್ದ. ಇದೇ ವ್ಯಕ್ತಿ ಚನ್ನಪಟ್ಟಣದಲ್ಲಿ ಕೊರೊನಾ ಬಂದಾಗ ಎಲ್ಲಿ ಹೋಗಿದ್ದ’ ಎಂದು ಪ್ರಶ್ನಿಸಿದರು.
‘ದೇವೇಗೌಡರು ಇಗ್ಗಲೂರು ಜಲಾಶಯ ಕಟ್ಟಿಸಿದಾಗ ಈತ ಹುಟ್ಟಿದ್ದನೋ ಇಲ್ಲವೋ ಗೊತ್ತಿಲ್ಲ. ಆದರೆ ಅದೇ ಜಲಾಶಯದಿಂದ ನೀರು ತುಂಬಿಸಿ ಆಧುನಿಕ ಭಗೀರಥ ಎಂದು ಬೋರ್ಡು ಹಾಕಿಸಿಕೊಂಡಿದ್ದಾನೆ. ನೀನು ಕಲಾವಿದರ ಕೋಟಾದಲ್ಲಿ ಆಯ್ಕೆ ಆಗಿದ್ದೀಯಾ. ರಾಜ್ಯದಲ್ಲಿ ಸಾಕಷ್ಟು ಕಲಾವಿದರು ಸಂಕಷ್ಟದಲ್ಲಿ ಇದ್ದಾರೆ. ಮೊದಲು ಅವರ ಕಷ್ಟ ನೋಡಿಕೋ. ಚನ್ನಪಟ್ಟಣ ನೋಡಿಕೊಳ್ಳಲು ನಾನಿದ್ದೇನೆ’ ಎಂದರು.
ಸಿದ್ದರಾಮಯ್ಯ ಸಂಚು
‘ಮೈಸೂರು ಮೇಯರ್ ಆಯ್ಕೆ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವಿನ ಮನಸ್ಥಾಪ ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಜೆಡಿಎಸ್ ಮುಗಿಸಲು ಕಾಂಗ್ರೆಸ್ ಹುನ್ನಾರ ನಡೆಸಿದೆ. 'ಮುಸ್ಲಿಮರನ್ನು ಜೆಡಿಎಸ್‌ನಿಂದ ದೂರ ಇಡಲು ಪ್ಲಾನ್ ಮಾಡಿದ್ದೆವು’ ಎಂದು ಮಾಜಿ ಸ್ವೀಕರ್ ರಮೇಶ್ ಕುಮಾರ್ಅವರೇ ಹೇಳಿಕೆ ನೀಡಿದ್ದಾರೆ. ಇದು ಸಿದ್ದರಾಮಯ್ಯ ಅವರ ಯೋಜನೆ. ರಾಜ್ಯದಲ್ಲಿ ಮತ್ತೆ ಯಡಿಯೂರಪ್ಪ ಮುಖ್ಯಮಂತ್ರಿ ಆದರೆ ಕೇವಲ ಆರು ತಿಂಗಳು ಅಧಿಕಾರದಲ್ಲಿ ಇರುತ್ತಾರೆ. ನಂತರ ನಾನೇ ಮುಖ್ಯಮಂತ್ರಿ ಆಗಬಹುದು ಎನ್ನುವ ದುರಾಸೆಯಿಂದ ಅವರೇ ಸಮ್ಮಿಶ್ರ ಸರ್ಕಾರ ಕೆಡವಿದರು. ಅದರ ಪ್ರತಿಫಲವನ್ನು ಇಂದು ಅವರೇ ಅನುಭವಿಸುತ್ತಿದ್ದಾರೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಮುಖ್ಯಮಂತ್ರಿ ಆಗುವ ಕನಸು ಕಂಡಿದ್ದರು. ಆದರೆ ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಎಂದು ಹೆಗಲ ಮೇಲೆ ಬೋರ್ಡು ತಗುಲಿ ಹಾಕಿಕೊಂಡು ಓಡಾಡುತ್ತಿದ್ದಾರೆ’ ಎಂದು ಟೀಕಿಸಿದರು.
‘ಮೈಸೂರು ಮೇಯರ್ ಚುನಾವಣೆಯಲ್ಲಿ ನನ್ನ ಪಕ್ಷದ ಶಕ್ತಿ ಪ್ರದರ್ಶನ ಮಾಡಲೆಂದೇ ಅಭ್ಯರ್ಥಿಯನ್ನು ನಿಲ್ಲಿಸಿದ್ದೆ. ಅಲ್ಲಿ ಬಿಜೆಪಿ ಜೊತೆಗೂ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ. ಇದರಿಂದ ಜೆಡಿಎಸ್ ಭವಿಷ್ಯ ಏನಾಗಲಿದೆ ಎಂಬ ಸಂದೇಶವನ್ನು ಚಾಮುಂಡೇಶ್ವರಿ ನೀಡಿದ್ದಾಳೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.