ADVERTISEMENT

ಸರಿಯಾದ ಸಮಯದಲ್ಲೇ ಮಾತನಾಡಿರುವೆ, ಮುಂದೇನಾಗಲಿದೆ ಎಂದು ಕಾದು ನೋಡಿ: ಹುಸೇನ್

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 15:25 IST
Last Updated 3 ಜುಲೈ 2025, 15:25 IST
ಎಚ್‌.ಎ. ಇಕ್ಬಾಲ್ ಹುಸೇನ್, ಶಾಸಕ
ಎಚ್‌.ಎ. ಇಕ್ಬಾಲ್ ಹುಸೇನ್, ಶಾಸಕ   

ರಾಮನಗರ: ‘ತಮ್ಮ ಶಕ್ತಿಗೆ ಅನುಗುಣವಾಗಿ ನಾನೇ ಐದು ವರ್ಷ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಆದರೆ, ಮುಂದೇನಾಗಲಿದೆ ಎಂಬುದನ್ನು ಕಾದು ನೋಡಿ. ಆಮೇಲೆ ನೀವೇ ಹೇಳುವಿರಂತೆ...’ – ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಿ.ಎಂ ಆಗಬೇಕು ಎಂದು ಬಲವಾಗಿ ಪ್ರತಿಪಾದಿಸುತ್ತಿರುವ ಅವರ ಆಪ್ತ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರು, ಸಿದ್ದರಾಮಯ್ಯ ಹೇಳಿಕೆಗೆ ನೀಡಿದ ಪ್ರತಿಕ್ರಿಯೆ ಇದು.

ನಗರದ ರಾಮದೇವರ ಬೆಟ್ಟದಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ ನಮ್ಮ ನಾಯಕ ಏನಾಗಬೇಕೆಂಬುದರ ಕುರಿತು ಸರಿಯಾದ ಸಂದರ್ಭದಲ್ಲೇ ನಾನು ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ನನ್ನ ಮಾತುಗಳಿಗೆ ಈಗಲೂ ಬದ್ಧ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವುದಷ್ಟೇ ನಮ್ಮ ಅಭಿಲಾಷೆಯಲ್ಲ. ಪಕ್ಷವನ್ನು ಸಂಘಟಿಸಿ 2028ರಲ್ಲೂ ಅಧಿಕಾರಕ್ಕೆ ತರಬೇಕು’ ಎಂದರು.

‘ಈಗಿನ ವಸ್ತುಸ್ಥಿತಿ ಆಧರಿಸಿ ಪಕ್ಷದ ಹಿತದೃಷ್ಟಿಯಿಂದ ಮುಂದೇನಾಗಬೇಕು ಎಂಬುದರ ಕುರಿತು ಹೇಳಿದ್ದೇನೆ. ನನ್ನ ಹೇಳಿಕೆಗೆ ವಿವರಣೆ ಕೇಳಿ ನೋಟಿಸ್ ಕೊಟ್ಟಿದ್ದಾರೆ. ಏನೂ ಮಾತನಾಡಬಾರದು ಎಂದು ಬಾಯಿಗೆ ಪ್ಲಾಸ್ಟರ್ ಹಾಕಿದ್ದಾರೆ. ನೋಟಿಸ್‌ಗೆ ಪ್ರತಿಕ್ರಿಯಿಸಲು ಏಳು ದಿನ ಅವಕಾಶವಿದ್ದು, ಚನ್ನಾಗಿ ಯೋಚಿಸಿ ವಿವರಣೆ ನೀಡುವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ADVERTISEMENT

‘ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮಾತನಾಡದೆ ಎಲ್ಲರೂ ಬಾಯಿ ಮುಚ್ಚಿಕೊಂಡಿರಬೇಕು’ ಎಂಬ ಸಚಿವ ಈಶ್ವರ ಖಂಡ್ರೆ ಹೇಳಿಕೆಗೆ, ‘ಅದು ಅವರ ಅಭಿಪ್ರಾಯ. ನನ್ನ ಅಭಿಪ್ರಾಯ ಏನೆಂದು ಈಗಾಗಲೇ ಹೇಳಿದ್ದೇನೆ’ ಎಂದು ತಿರುಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.