
ರಾಮನಗರ: ‘ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಜಿಬಿಡಿಎ) ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಯಾವುದೇ ರೀತಿಯ ಕಟ್ಟಡಗಳು ಹಾಗೂ ಬಡಾವಣೆಗಳು ನಿರ್ಮಾಣವಾಗದಂತೆ ಅಧಿಕಾರಿಗಳು ಅವಕಾಶ ನೀಡದೆ ನಿಗಾ ಇಡಬೇಕು’ ಎಂದು ಗ್ರೇಟರ್ ಪ್ರಾಧಿಕಾರದ ಅಧ್ಯಕ್ಷ ಜಿ.ಎನ್. ನಟರಾಜ್ ಗಾಣಕಲ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಬಿಡಿಎ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ ಮತ್ತು ಬಡಾವಣೆಗಳ ನಿರ್ಮಾಣ ನಿಯಂತ್ರಿಸುವ ಸಂಬಂಧ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಬೆಸ್ಕಾಂ, ತೋಟಗಾರಿಕೆ, ಅರಣ್ಯ, ಬೆಸ್ಕಾಂ, ತೋಟಗಾರಿಕೆ, ಪಂಚಾಯತ್ ರಾಜ್ ಇಂಜನಿಯರಿಂಗ್ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
‘ಅನಧಿಕೃತ ನಿರ್ಮಾಣದ ಮೇಲೆ ನಿಗಾ ಇಡಲು ರಚಿಸಿರುವ ಪ್ರಾಧಿಕಾರದ ಟಾಸ್ಕ್‌ಫೋರ್ಸ್‌ಗೆ ಈಗಾಗಲೇ ಅನಧಿಕೃತ ಬಡಾವಣೆ ಹಾಗೂ ನಿರ್ಮಾಣಗಳಿಗೆ ಸಂಬಂಧಿಸಿದಂತೆ 220 ದೂರುಗಳು ದಾಖಲಾಗಿವೆ. ಪೊಲೀಸ್ ಅಧೀಕ್ಷರ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್ ರಚನೆಯಾಗಿದೆ. ಕರ್ತವ್ಯಲೋಪ ಕಂಡುಬಂದರೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
‘ಹಿಂದೆ ಕಟ್ಟಡ ನಿರ್ಮಾಣ ಹಾಗೂ ಬಡಾವಣೆಗಳಿಗೆ ಅನುಮೋದನೆ ನೀಡುವ ಸಂದರ್ಭದಲ್ಲಿ ತಪ್ಪುಗಳಾಗಿವೆ. ಅಂತಹ ನಿರ್ಮಾಣ ಹಾಗೂ ಬಡಾವಣೆಗಳ ಕುರಿತು ಕೂಡಲೇ ಪ್ರಾಧಿಕಾರಕ್ಕೆ ಪಟ್ಟಿಯನ್ನು ನೀಡಬೇಕು. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿಸ್ತೀರ್ಣವನ್ನು ಪರಿಷ್ಕರಿಸಲಾಗಿದೆ’ ಎಂದು ಸೂಚನೆ ನೀಡಿದರು.
‘ರಾಮನಗರ ತಾಲ್ಲೂಕಿನ ಬಿಡದಿ, ಕಸಬಾ, ಕೂಟಗಲ್, ಕೈಲಾಂಚ, ಹಾರೋಹಳ್ಳಿ ತಾಲ್ಲೂಕಿನ ಹಾರೋಹಳ್ಳಿ ಹೋಬಳಿ, ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿ ವ್ಯಾಪ್ತಿಯ 23,361 ಹೆಕ್ಟೇರ್ ಪ್ರದೇಶ ಭವಿಷ್ಯದಲ್ಲಿ ಅತೀ ವೇಗವಾಗಿ ಅಭಿವೃದ್ಧಿಯಾಗಲಿದೆ. ಇಲ್ಲಿ ಎಲ್ಲವೂ ಕಾನೂನಿನ ಅನ್ವಯ ಅಭಿವೃದ್ಧಿ ಆಗಬೇಕಿದೆ. ಸಮಗ್ರ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯಲ್ಲಿ ಯಾವುದೇ ಅನಧಿಕೃತ ಬಡಾವಣೆಗಳು, ಕಟ್ಟಡ ನಿರ್ಮಾಣಗಳಿಗೆ ಅವಕಾಶ ಕೊಡಬಾರದು’ ಎಂದರು.
‘ಪಂಚಾಯತ್ ರಾಜ್ ಕಾಯ್ದೆಗಳ ಅನ್ವಯ, ಸ್ಥಳೀಯ ಸಕ್ಷಮ ಪ್ರಾಧಿಕಾರದ ನಿಯಮಗಳ ಅನ್ವಯ ಖಾತೆಗಳನ್ನು ವಿತರಣೆ ಮಾಡಬೇಕು. ಕಟ್ಟಡ ನಿರ್ಮಾಣ ಪರವಾನಗಿ ನೀಡುವಲ್ಲಿ ಯಾವುದೇ ನಿರ್ಲಕ್ಷ್ಯ ತೋರಬಾರದು. ಸಮಸ್ಯೆಗಳು ಎದುರಾದಲ್ಲಿ ಪ್ರಾಧಿಕಾರದಿಂದ ತಾಂತ್ರಿಕ ಅನುಮೋದನೆಯನ್ನು ಪಡೆಯಬೇಕು’ ಎಂದು ತಿಳಿಸಿದರು.
‘ಕಟ್ಟಡ ಪರವಾನಗಿ ನೀಡುವ ಸಂದರ್ಭದಲ್ಲಿ ಅಧಿಕೃತ ನಿವೇಶನ ದಾಖಲೆ, ನಮೂನೆ -3, ನಮೂನೆ– 9ರಿಂದ 11, ಇ.ಸಿ ಹಾಗೂ ನಮೂನೆ 15-16ರ ಮೂಲಪತ್ರ, ಭೂ ಪರಿವರ್ತನೆ ಆದೇಶ, ಸಕ್ಷಮ ಯೋಜನಾ ಪ್ರಾಧಿಕಾರದಿಂದ ನಕ್ಷೆ ಅನುಮೋದನೆ ಸೇರಿದಂತೆ ಅಗತ್ಯ ಎಲ್ಲ ದಾಖಲೆಗಳನ್ನು ಪಡೆಯಬೇಕು. ಸ್ಥಳ ಪರಿಶೀಲನೆ ಮಾಡದೇ ಯಾವುದೇ ಅನುಮತಿಗಳನ್ನು ನೀಡಬಾರದು’ ಎಂದು ಸಲಹೆ ನೀಡಿದರು.
ತಾ.ಪಂ. ಇಒ ಪೂರ್ಣಿಮಾ, ಪ್ರಾಧಿಕಾರದ ಅಧಿಕಾರಿ ಪ್ರದೀಪ್ ಹಾಗೂ ಇತರರು ಇದ್ದರು.
ನಕಲಿ ದಾಖಲೆ ಪತ್ರ ಸಲ್ಲಿಕೆ ಪತ್ತೆ!
‘ದಾಖಲೆ ಪತ್ರಗಳನ್ನು ನಕಲಿ ಮಾಡಿ ಕಚೇರಿಗೆ ಸಲ್ಲಿಸಿ ಕೆಲಸ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಪತ್ತೆಯಾಗಿವೆ. ನಕಲಿ ಸಹಿಗಳನ್ನು ಮಾಡಿರುವ ಬಗ್ಗೆಯೂ ದೂರುಗಳು ಕೇಳಿ ಬಂದಿವೆ. ಈ ಕುರಿತು ಅಧಿಕಾರಿಗಳು ಎಚ್ಚರಿಕೆಯಿಂದ ಇರಬೇಕು. ದಾಖಲೆಗಳನ್ನು ಮತ್ತೊಮ್ಮೆ ಪುನರ್ ಪರಿಶೀಲನೆಗೆ ಒಳಪಡಿಸಬೇಕು. ಸ್ಥಳ ಪರಿಶೀಲನೆ ಹಾಗೂ ಪ್ರಾಧಿಕಾರದ ಜೊತೆ ಪತ್ರ ವ್ಯವಹಾರವಿಲ್ಲದೆ ಯಾವುದೇ ನಿರಾಕ್ಷೇಪಣ ಪತ್ರ (ಎನ್‌ಒಸಿ) ನೀಡಬಾರದು’ ಎಂದು ಪ್ರಾಧಿಕಾರದ ಅಧ್ಯಕ್ಷ ಜಿ.ಎನ್. ನಟರಾಜ್ ಗಾಣಕಲ್ ಸೂಚಿಸಿದರು.
‘ಖಾತೆಗಳನ್ನು ನೀಡುವಗ ಸರಹದ್ದುಗಳನ್ನು ಗುರುತು ಮಾಡುವುದು ಮತ್ತು ಅಭಿವೃದ್ಧಿ ಉದ್ದೇಶಗಳಿಗಾಗಿ ಅಂತಹ ನಿಯಮಗಳ ಅನ್ವಯ ನಿರ್ದಿಷ್ಟಪಡಿಸಿದಂತೆ ನಿವೇಶನ ರಸ್ತೆ ಜೋಡಣೆ ಉದ್ಯಾನವನಗಳು ಮತ್ತು ಆಟದ ಮೈದಾನಗಳು ಮತ್ತು ನಾಗರಿಕ ಸೌಲಭ್ಯ ಪ್ರದೇಶ ಪ್ರದೇಶ ಮಟ್ಟ ಮಾಡುವುದು ಮಾರ್ಗಗಳ ವ್ಯವಸ್ಥೆ ನೆಲಕ್ಕೆ ಹಾಸುಗಲ್ಲುಗಳ ಅಳವಡಿಕೆ ಕಾಲುವೆಗಳ ನಿರ್ಮಾಣ ಒಳಚರಂಡಿ ವ್ಯವಸ್ಥೆ ಚರಂಡಿ ಮಾರ್ಗಗಳು ಬೀದಿ ದೀಪದ ವ್ಯವಸ್ಥೆ ಹಾಗೂ ನೀರಿನ ಪೂರೈಕೆಯನ್ನು ಮಾಡುವುದಕ್ಕಾಗಿ ಇತರ ಯಾವುದೇ ಮೂಲಸೌಕರ್ಯಗಳನ್ನು ಖುದ್ದಾಗಿ ಪರಿಶೀಲಿಸಬೇಕು. ಇದ್ಯಾವುದನ್ನೂ ಮಾಡದೆ ಕಚೇರಿಯಲ್ಲಿ ಕುಳಿತು ಕೆಲಸ ಮಾಡಬೇಡಿ. ಈ ರೀತಿ ಮಾಡಿದ ಎಲ್ಲಾ ಪ್ರಕರಣಗಳು ಲೋಕಾಯುಕ್ತ ತನಿಖೆಯಲ್ಲಿವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.