ಕನಕಪುರ: ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಾತನೂರು ಹೋಬಳಿ ಕಬ್ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಪೂಜಿನಗರ ಕಾಲೊನಿ ಬಳಿ 10 ಎಕರೆ ಗೋಮಾಳ ಪ್ರದೇಶದಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡುತ್ತಿದ್ದು ಅಧಿಕಾರಿಗಳು ಪರಿಶೀಲಿಸಿದರು.
ಕಸ ವಿಲೇವಾರಿ ಘಟಕ ನಿರ್ಮಾಣ ನೆಪದಲ್ಲಿ ನರೇಗಾ ಯೋಜನೆ ದುರ್ಬಳಕೆ ಮಾಡಿಕೊಂಡು ಸರ್ಕಾರಿ ಗೋಮಾಳದಲ್ಲಿ ಕೆಲ ರಾಜಕೀಯ ಬಲಾಢ್ಯರು ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡುತ್ತಿದ್ದಾರೆ ಎಂದು ರವಿಕುಮಾರ್ ಎಂಬುವರು ದೂರು ನೀಡಿದ್ದರು.
ತಾಲ್ಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಮೋಹನ್‌ಬಾಬು, ರಾಜಸ್ವ ನಿರೀಕ್ಷಕ ಕಮಲ್ ಅಲಿ ಪಾಷ, ಕಬ್ಬಾಳು ಗ್ರಾಮ ಪಂಚಾಯತಿ ಪಿಡಿಒ ಲೋಕೇಶ್, ಕರ ವಸೂಲಿಗಾರ ದ್ಯಾವೇಗೌಡ ಉಪಸ್ಥಿತರಿದ್ದರು.
ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಅಕ್ರಮ ನಡೆದಿದ್ದರೆ ಕಾನೂನಾತ್ಮಕವಾಗಿ ಕ್ರಮಕೈಗೊಳ್ಳಲಾಗುವುದು.ನಂದಿನಿ, ಭೂ ವಿಜ್ಞಾನಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ರಾಮನಗರ
ನೆಪ ಮಾತ್ರಕ್ಕೆ ಸ್ಥಳ ಮಹಜರು ಮಾಡಲಾಗಿದೆ. ನ್ಯಾಯ ನಿರೀಕ್ಷಿಸಲು ಸಾಧ್ಯವಿಲ್ಲ. ಲೋಕಾಯುಕ್ತದಲ್ಲಿ ಪ್ರಕರಣ ದಾಖಲು ಮಾಡುತ್ತೇನೆ.ಕಂಚನಹಳ್ಳಿ ರವಿಕುಮಾರ, ಸಾಮಾಜಿಕ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.