ADVERTISEMENT

ಚನ್ನಪಟ್ಟಣದಲ್ಲಿ ಪ್ರತಿ ತಿಂಗಳ ಮೊದಲ ವಾರ ಇ-ಸ್ವತ್ತು ಆಂದೋಲನ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 3:02 IST
Last Updated 31 ಜುಲೈ 2020, 3:02 IST
ಚನ್ನಪಟ್ಟಣದ ತಾ.ಪಂ. ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ರಾಜಣ್ಣ, ಇಒ ಚಂದ್ರು ಮಾತನಾಡಿದರು
ಚನ್ನಪಟ್ಟಣದ ತಾ.ಪಂ. ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ರಾಜಣ್ಣ, ಇಒ ಚಂದ್ರು ಮಾತನಾಡಿದರು   

ಚನ್ನಪಟ್ಟಣ: ಆ.3ರಿಂದ ಪ್ರತಿ ತಿಂಗಳ ಮೊದಲ ವಾರ ಇ-ಸ್ವತ್ತು ಆಂದೋಲನ ನಡೆಸಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗಪಡೆಯಬೇಕೆಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ರಾಜಣ್ಣ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಗ್ರಾ.ಪಂ ಅಧಿಕಾರಿಗಳು ಮನೆ ಮನೆಗೆ ತೆರಳಿ ಸ್ವತ್ತಿನ ಮಾಲೀಕರಿಂದ ದಾಖಲೆ ಪಡೆದು ಕಾಲಮಿತಿಯಲ್ಲಿ ಇ-ಸ್ವತ್ತು ದಾಖಲೆಗಳನ್ನು ವಿತರಣೆ ಮಾಡಲಿದ್ದಾರೆ ಎಂದರು.

ತಾಲ್ಲೂಕಿನ 32 ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 67,521 ಆಸ್ತಿಗಳಿದ್ದು, ಅವುಗಳಲ್ಲಿ 12,168 ಸ್ವತ್ತುಗಳಿಗೆ 9, 11, 11ಬಿ ವಿತರಣೆ ಮಾಡಲಾಗಿದೆ. ಉಳಿದ 55353 ಆಸ್ತಿಗಳಿಗೆ ಇ-ಸ್ವತ್ತು ಸಪ್ತಾಹದಲ್ಲಿ ಅಗತ್ಯ ದಾಖಲಾತಿಗಳನ್ನು ಪಡೆದುಕೊಂಡು ವಿತರಣೆ ಮಾಡಲಾಗುವುದು ಎಂದರು.

ADVERTISEMENT

ವಸತಿ ಯೋಜನೆಯಡಿ ಮಂಜೂರಾದ ಸ್ವತ್ತು, ಗ್ರಾಮ ಠಾಣಾ ಆಸ್ತಿ, ಸ್ಥಳೀಯ ಯೋಜನಾ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆ, 2013ರ ಪೂರ್ವದಲ್ಲಿ ಸೃಜನೆಯಾಗಿರುವ ಕಟ್ಟಡ, ಪರವಾನಗಿ ಪಡೆದು ಕಟ್ಟಿರುವ ಮನೆಗಳಿಗೆ, 1992ರ ಹಿಂದೆ ಭೂ ಪರಿವರ್ತಿತರಾಗಿ ಗ್ರಾಮ ಪಂಚಾಯಿತಿಯಿಂದ ಅನುಮೋದನೆ ಪಡೆದ ಆಸ್ತಿಗಳಿಗೆ 9 ಮತ್ತು 11ಎ ಸ್ವತ್ತು ಹಾಗೂ 1992ರ ನಂತರ 2013ರ ಪೂರ್ವದಲ್ಲಿ ಗ್ರಾಮ ಪಂಚಾಯಿತಿಯಿಂದ ಅನುಮೋದಿತವಾದ ಆಸ್ತಿಗಳು, ಗ್ರಾಮಠಾಣಾ ವ್ಯಾಪ್ತಿಯಿಂದ ಹೊರಗಿರುವ ಆಸ್ತಿಗಳು, ಹೊಸದಾಗಿ ಭೂ ಪರಿವರ್ತನೆಯಾದ ಸಕ್ಷಮ ಪ್ರಾಧಿಕಾರದ ಅನುಮೋದನೆ ಇಲ್ಲದ ಆಸ್ತಿಗಳಿಗೆ 11ಬಿ ನಮೂನೆ ಪಡೆಯಲು ಅವಶ್ಯ ದಾಖಲೆಗಳನ್ನು ಸಲ್ಲಿಸಿ ಸಂಬಂಧಪಟ್ಟ ಇ-ಸ್ವತ್ತು ಪಡೆಯಬಹುದಾಗಿದೆ ಎಂದರು.

ಇಒ ಚಂದ್ರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆಯಡಿಯಲ್ಲಿ ಸಾಕಷ್ಟು ಕಾಮಗಾರಿಗಳನ್ನು ಅನುಷ್ಟಾನಗೊಳಿಸಲಾಗಿದೆ. ಪ್ರಮುಖವಾಗಿ ಜಲಮೂಲಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಕೆರೆ, ಕಟ್ಟೆಗಳು, ಕಲ್ಯಾಣಿ ಅಭಿವೃದ್ಧಿ, ಕಾಲುವೆ, ಗುಂಡುತೋಪು, ಸ್ಮಶಾನ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ. ಬದುಗಳ ನಿರ್ಮಾಣ, ಕೃಷಿ ಹೊಂಡ ಸೇರಿದಂತೆ ಇತರ ವೈಯಕ್ತಿಕ ಕಾಮಗಾರಿಗಳನ್ನು ರೈತರ ಮೂಲಕವೇ ಅವರ ಸ್ವಂತ ಜಮೀನಿನಲ್ಲಿ ಅನುಷ್ಟಾನಗೊಳಿಸಲಾಗಿದೆ ಎಂದರು.

ತಾ.ಪಂ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.