ADVERTISEMENT

ಉದ್ಘಾಟನಾ ಭಾಗ್ಯ ಕಾಣದ ಶೌಚಾಲಯ ಕಟ್ಟಡ

ಎಸ್.ರುದ್ರೇಶ್ವರ
Published 14 ಅಕ್ಟೋಬರ್ 2018, 20:00 IST
Last Updated 14 ಅಕ್ಟೋಬರ್ 2018, 20:00 IST
ಮಹಾತ್ಮ ಗಾಂಧಿ ಉದ್ಯಾನದ ಮುಂಭಾಗ ನಿರ್ಮಾಣವಾಗಿರುವ ಅಂಗವಿಕಲರ ಶೌಚಾಲಯ
ಮಹಾತ್ಮ ಗಾಂಧಿ ಉದ್ಯಾನದ ಮುಂಭಾಗ ನಿರ್ಮಾಣವಾಗಿರುವ ಅಂಗವಿಕಲರ ಶೌಚಾಲಯ   

ರಾಮನಗರ: ಇಲ್ಲಿನ ಮಹಾತ್ಮ ಗಾಂಧಿ ಉದ್ಯಾನದ ಮುಂಭಾಗ ಪಾದಚಾರಿ ಮಾರ್ಗದ ಮೇಲೆ ಎಂಟು ತಿಂಗಳ ಹಿಂದೆ ನಿರ್ಮಾಣವಾಗಿರುವ ಅಂಗವಿಕಲರ ಶೌಚಾಲಯ ಕಟ್ಟಡ ಉದ್ಘಾಟನೆ ಭಾಗ್ಯ ಕಾಣದೆ ಅನಾಥವಾಗಿ ನಿಂತಿದೆ.

ಪಾದಚಾರಿ ಮಾರ್ಗದ ಮೇಲೆ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಅಲ್ಲಿ ಇಲ್ಲಿ ನಾಲ್ಕಾರು ಜಾಗ ಹುಡುಕಿ ಎಲ್ಲಿಯೂ ಸಿಗದ ಕಾರಣ ಅನಿವಾರ್ಯವಾಗಿ ಪಾದಚಾರಿ ಮಾರ್ಗವನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ.

ಉದ್ಯಾನದ ಮುಂಭಾಗದ ಫುಟ್‌ಪಾತ್‌ಗೆ ಹಾಕಲಾಗಿದ್ದ ನೆಲಹಾಸನ್ನು ಕಿತ್ತು ಅಲ್ಲಿ ಶೌಚಾಲಯಕ್ಕೆ ಅಡಿಪಾಯ ಹಾಕಲಾಗಿದೆ. ಸುಮಾರು 8X8 ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಈ ಶೌಚಾಲಯವು ಅಂಗವಿಕಲರಿಗೆ ಮೀಸಲಾಗಿರಲಿದೆ. ಏಕಕಾಲದಲ್ಲಿ ನಾಲ್ಕು ಮಂದಿ ಇದನ್ನು ಬಳಕೆ ಮಾಡಬಹುದಾಗಿದೆ.

ADVERTISEMENT

ಉದ್ಯಾನಕ್ಕೆ ವಾಯು ವಿಹಾರಕ್ಕೆ ಬರುವವರರು ಹಾಗೂ ಮಿನಿ ವಿಧಾನ ಸೌಧ, ನ್ಯಾಯಾಲಯಕ್ಕೆ ಬರುವವರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ನೂತನ ಶೌಚಾಲಯ ಯಾವಾಗ ಉದ್ಘಾಟನೆಯಾಗುತ್ತದೋ ಎಂದು ಚಾತಕ ಪಕ್ಷಿಯಂತೆ ಜನರು ಕಾಯುತ್ತಿದ್ದಾರೆ.

ಇದು ಉದ್ಘಾಟನೆಯಾಗದೆ ಅಂಗವಿಕಲರು ಹಾಗೂ ಇತರರಿಗೆ ಶೌಚಾಲಯ ಇದ್ದೂ ಇಲ್ಲದಂತಾಗಿದೆ. ಕಟ್ಟಡದ ಉದ್ಘಾಟನೆ­ಯು ವಿವಿಧ ಕಾರಣಗಳಿಂದ ಮುಂದೆ ಹೋಗು­ತ್ತಲೇ ಇದೆ.

ಉದ್ಯಾನದಲ್ಲಿ ಹಗಲು ರಾತ್ರಿ ವಿವಿಧ ರೀತಿಯ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಇಲ್ಲೇ ಸಮೀಪದಲ್ಲಿ ನ್ಯಾಯಾಲಯ, ಕೃಷಿ ಇಲಾಖೆ, ಮಿನಿವಿಧಾನ ಸೌಧ ಸೇರಿದಂತೆ ಹಲವು ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೆಕು ಎಂದು ಸ್ಥಳೀಯರು ಒತ್ತಾಯಿಸಿದರು.

ರಾಮನಗರ ವ್ಯಾಪ್ತಿಯಲ್ಲಿ ಹಲವು ಕಡೆ ಶೌಚಾಲಯಗಳ ಕೊರತೆ ಇದೆ. ನಗರ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯಗಳ ಕೊರತೆ ಇದೆ ಎನ್ನುತ್ತಾರೆ ಚಾಮುಂಡೇಶ್ವರಿ ಬಡಾವಣೆಯ ಬಿ.ವಿ. ಶ್ರೀಧರ್‌.

ಸಾರ್ವಜನಿಕರಿಗಾಗಿ ಶೌಚಾಲಯ ನಿರ್ಮಾಣ ಮಾಡಿರುವುದು ಉತ್ತಮ ಕೆಲಸ. ಅವಶ್ಯವಿರುವ ಕಡೆ ಶೌಚಾಲಯಗಳನ್ನು ನಿರ್ಮಿಸಬೇಕು. ಶೌಚಾಲಯದ ಬಾಗಿಲು ತೆರೆಯದ ಪರಿಣಾಮ ಇಡೀ ಉದ್ಯಾನದ ಆವರಣವೇ ಶೌಚಾಲಯ ತಾಣವಾಗಿ ಮಾರ್ಪಟ್ಟಿದೆ ಎಂದು ತಿಳಿಸಿದರು.

ಜನರು ನಿಸರ್ಗ ಬಾಧೆ ತೀರಿಸಿಕೊಳ್ಳಲು ಆವರಣದ ಸುತ್ತ ಬೆಳೆದ ಗಿಡಗಳ ಮರೆಯನ್ನೇ ಅವಲಂಬಿಸಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಮೂತ್ರಾಲಯಗಳು ಪ್ರಯೋಜನಕ್ಕೆ ಬಾರದಂತಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಉದ್ಯಾನವನದ ಬಳಿ ಅಂಗವಿಕಲರ ಶೌಚಾಲಯ ನಿರ್ಮಾಣವಾಗಿ ಹಲವು ತಿಂಗಳು ಕಳೆದಿದ್ದರೂ ಉದ್ಘಾಟನೆಗೆ ನಗರಸಭೆಗೆ ಇನ್ನೂ ಮುಹೂರ್ತ ಸಿಕ್ಕಿಲ್ಲವೇ ಎಂದು ಕರ್ನಾಟಕ ಅಂಗವಿಕಲರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜೆ. ಮಂಜುನಾಥ್‌ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.