ADVERTISEMENT

ರಾಮನಗರ: ಜಿಲ್ಲೆಯಲ್ಲಿ ಮೂರಂಕಿ ದಾಟಿದ ಕೋವಿಡ್

ದಿನೇ ದಿನೇ ಸೋಂಕು ಉಲ್ಬಣ l 462 ಪ್ರಕರಣ ಸಕ್ರಿಯ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 3:47 IST
Last Updated 18 ಏಪ್ರಿಲ್ 2021, 3:47 IST
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಲು ನಿಯೋಜನೆಗೊಂಡ ಜಿಲ್ಲೆಯ ಗೃಹರಕ್ಷಕ ದಳದ ಸಿಬ್ಬಂದಿ
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಲು ನಿಯೋಜನೆಗೊಂಡ ಜಿಲ್ಲೆಯ ಗೃಹರಕ್ಷಕ ದಳದ ಸಿಬ್ಬಂದಿ   

ರಾಮನಗರ: ಜಿಲ್ಲೆಯಲ್ಲಿ ಶನಿವಾರ ಕೋವಿಡ್ ಸೋಂಕಿತರ ಪ್ರಮಾಣ ಮೂರಂಕಿ ದಾಟಿದ್ದು, ಒಂದೇ ದಿನ 101 ಪ್ರಕರಣಗಳು ವರದಿಯಾಗಿವೆ.

ರಾಮನಗರ ತಾಲ್ಲೂಕು 20, ಚನ್ನಪಟ್ಟಣ ತಾಲ್ಲೂಕು 25, ಕನಕಪುರ ತಾಲ್ಲೂಕು 28, ಹಾಗೂ ಮಾಗಡಿ ತಾಲ್ಲೂಕು 28 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 462ಕ್ಕೇರಿದೆ. ಸೋಂಕಿನಿಂದ ಒಟ್ಟು 80 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 8,503 ಜನರಿಗೆ ಕೋವಿಡ್ ಪಾಸಿಟಿವ್ ಕಂಡುಬಂದಿದ್ದು, 7,961 ಜನರು ಗುಣಮುಖರಾಗಿದ್ದಾರೆ.

ಗುಣಮುಖ: ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ 96 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ರಾಮನಗರ ತಾಲ್ಲೂಕಿನ 45, ಚನ್ನಪಟ್ಟಣ ತಾಲ್ಲೂಕಿನ 19, ಮಾಗಡಿ ತಾಲ್ಲೂಕಿನ 17 ಮತ್ತು ಕನಕಪುರ ತಾಲ್ಲೂಕಿನ 15 ಜನರು ಗುಣಮುಖರಾಗಿದ್ದಾರೆ.

ADVERTISEMENT

ಭೇಟಿ: ಕೋವಿಡ್ ಸೋಂಕಿತರ ಆರೈಕೆಗೆಂದು ತಾಲ್ಲೂಕುವಾರು ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿನ ಸೋಂಕಿನ ಲಕ್ಷಣ ಇಲ್ಲದೇ ಇರುವವರು ಹಾಗೂ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಇರಿಸಲಾಗುತ್ತಿದೆ.

ಕನಕಪುರ ತಾಲ್ಲೂಕಿನ ಹೊಸಕೋಟೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕೋವಿಡ್ ಕೇರ್ ಕೇಂದ್ರಕ್ಕೆ ಜಿಲ್ಲೆಯ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಶೋಭಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವಸತಿ ಶಾಲೆಯನ್ನು ಕೋವಿಡ್ ಕ್ವಾರಂಟೈನ್ ಕೇರ್ ಸೆಂಟರ್‌ ಆಗಿ ಏಪ್ರಿಲ್ 12 ರಂದು ಪ್ರಾರಂಭ ಮಾಡಲಾಗಿದ್ದು, 110 ಹಾಸಿಗೆ ಸೌಲಭ್ಯ ಇದೆ. 15ರಂದು ಇಲ್ಲಿ 27 ಜನ ದಾಖಲಾಗಿದ್ದು, ಅವರೊಂದಿಗೆ ಆಹಾರದ ಗುಣಮಟ್ಟ, ಚಿಕಿತ್ಸೆ ಹಾಗೂ ಸ್ವಚ್ಛತೆಯ ಬಗ್ಗೆ ಇನ್‌ಸ್ಪೆಕ್ಟರ್ ಮಾಹಿತಿ ಪಡೆದರು. ದಾಖಲಾಗುವ ಕೋವಿಡ್ ರೋಗಿಗಳಿಗೆ ಗುಣಮಟ್ಟದ ಆಹಾರ ನೀಡುವಂತೆ, ಸ್ಚಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಿದರು.

ಕೋವಿಡ್-19ರ ಸಂಬಂಧ ಆಸ್ಪತ್ರೆಗಳಲ್ಲಿ ಮತ್ತು ಕೋವಿಡ್ ಕೇರ್ ಕೇಂದ್ರಗಳಲ್ಲಿ ಯಾವುದೇ ತೊಂದರೆ ಕಂಡುಬಂದಲ್ಲಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರ ಕಚೇರಿ ದೂರವಾಣಿ ಸಂಖ್ಯೆ 080-29575050 ಗೆ ಕರೆ ಮಾಡಿ ದೂರು ನೀಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.