ADVERTISEMENT

ಮಾಗಡಿ | ಜನಪ್ರತಿನಿಧಿಗಳ ಕಿತ್ತಾಟದಿಂದ ರೈತರಿಗೆ ಅನ್ಯಾಯ: ರೈತ ಸಂಘ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 14:19 IST
Last Updated 14 ಆಗಸ್ಟ್ 2024, 14:19 IST
ಮಾಗಡಿ ಪಟ್ಟಣದ ತಾಲೂಕು ಕಚೇರಿ ಮುಂಬಾಗದಲ್ಲಿ ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿ ಆರಂಭಿಸುವಂತೆ ರೈತ ಸಂಘದ ವತಿಯಿಂದ ತಹಶೀಲ್ದಾರ್ ಶರತ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮಾಗಡಿ ಪಟ್ಟಣದ ತಾಲೂಕು ಕಚೇರಿ ಮುಂಬಾಗದಲ್ಲಿ ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿ ಆರಂಭಿಸುವಂತೆ ರೈತ ಸಂಘದ ವತಿಯಿಂದ ತಹಶೀಲ್ದಾರ್ ಶರತ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.   

ಮಾಗಡಿ : ‘ಜನಪ್ರತಿನಿಧಿಗಳು ತಮ್ಮತಮ್ಮಲ್ಲೇ ಕಿತ್ತಾಡಿಕೊಳ್ಳುವುದನ್ನು ಬಿಟ್ಟು ರೈತಪರ ಹಾಗೂ ಅಭಿವೃದ್ಧಿಪರ ಕೆಲಸಗಳನ್ನು ಮಾಡಬೇಕು’ ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಮನವಿ ಮಾಡಿದರು.

ತಾಲ್ಲೂಕು ಕಚೇರಿ ಮುಂಭಾಗದಲ್ಲಿ ರೈತ ಸಂಘದ ವತಿಯಿಂದ ತಹಶೀಲ್ದಾರ್ ಶರತ್ ಕುಮಾರ್ ಅವರಿಗೆ ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕೆಂದು ಮನವಿ ಸಲ್ಲಿಸಿ ಮಾತನಾಡಿದರು.

ಕಳೆದ ಹತ್ತು ವರ್ಷಗಳಿಂದಲೂ ಹೇಮಾವತಿ ಯೋಜನೆ ಕಾಮಗಾರಿ ನಡೆಯುತ್ತಿದೆ. ಆದರೆ, ಇಲ್ಲಿಯವರೆಗೂ ಮಾಗಡಿ ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನೀರನ್ನು ತುಂಬಿಸಲು ಆಗಿಲ್ಲ. ಹೇಮಾವತಿ ಶ್ರೀರಂಗ ಏತ ನೀರಾವರಿ ಯೋಜನೆಗೆ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡಿದೆ. ಕಾಮಗಾರಿ ಮಾತ್ರ ಪೂರ್ಣವಾಗಿಲ್ಲ, ಈಗ ತುಮಕೂರಿನ ಜನಪ್ರತಿನಿಧಿಗಳ ಹಗ್ಗ -ಜಗ್ಗಾಟದಲ್ಲಿ ಈ ಯೋಜನೆ ಮತ್ತಷ್ಟು ಹಿಂದೆ ಬೀಳುತ್ತಿದೆ. ಎಕ್ಸ್ ಪ್ರೆಸ್ ಕೆನಾಲ್ ಯೋಜನೆ ಪೂರ್ಣವಾದರೆ ಮಾತ್ರ ಹೇಮಾವತಿ ನೀರು ನಮಗೆ ಬರುತ್ತದೆ. ಈಗ ಹೇಮಾವತಿ ಜಲಾಶಯ ತುಂಬಿದರೂ ಕಾಲುವೆ ಮೂಲಕ ನಮಗೆ ಬರಬೇಕಾದ ಮುಕ್ಕಾಲು ಟಿಎಂಸಿ ನೀರು ಬರುತ್ತಿಲ್ಲ. ರಾಜಕಾರಣಿಗಳ ಪ್ರತಿಷ್ಠೆಗೆ ರೈತರು ಬಲಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ತುಮಕೂರಿನ ಜನಪ್ರತಿನಿಧಿಗಳ ಜೊತೆ ಚರ್ಚಿಸಿ ಎಕ್ಸ್ ಪ್ರೆಸ್ ಕೆನಲ್ ಕಾಮಗಾರಿಯನ್ನು ಚುರುಕುಗೊಳಿಸಬೇಕು’ ಎಂದು ಮನವಿ ಮೂಲಕ ಒತ್ತಾಯಿಸಿದರು.

ADVERTISEMENT


ನಿಯೋಗ ಕರೆದುಕೊಂಡು ಹೋಗತಗ: ಶಾಸಕ ಬಾಲಕೃಷ್ಣ ಕೂಡಲೇ ರೈತ ಮುಖಂಡರನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಳಿಗೆ ಕರೆದುಕೊಂಡು ಹೋಗಿ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ಬಗ್ಗೆ ಮನವರಿಕೆ ಮಾಡಬೇಕು. ನಮ್ಮ ಪಾಲಿನ ನೀರನ್ನು ಪಡೆಯಲು ಯಾವುದೇ ಚರ್ಚೆ, ಸಂವಾದಕ್ಕೆ ರೈತ ಸಂಘ ಸದಾ ಸಿದ್ಧವಿರುತ್ತದೆ. ಮಳೆಗಾಲದಲ್ಲಿ ಕೆರೆಗಳಿಗೆ ನೀರು ಬರದಿದ್ದರೆ ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗದು. ಮಾಗಡಿ ರೈತರೂ, ತುಮಕೂರು ರೈತರೂ ಒಂದೇ. ರಾಜಕಾರಣಿಗಳು ರೈತರ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ರೈತ ಸಂಘ ಹೇಳಿದೆ.

ರೈತ ಸಂಘದ ಯುವ ಘಟಕದ ಅಧ್ಯಕ್ಷ ರವಿಕುಮಾರ್, ದಲಿತ ಮುಖಂಡ ವಿ.ಜಿ.ದೊಡ್ಡಿ ಲಕ್ಷ್ಮಣ್, ಕಲ್ಯಾಗೇಟ್ ಬಸವರಾಜು, ರೈತ ಮುಖಂಡರಾದ ಬುಡಾನ್ ಸಾಬ್, ಚಂದ್ರರಾಯಪ್ಪ, ಶಿವಲಿಂಗಯ್ಯ, ನಾರಾಯಣಪ್ಪ, ಕಾಂತರಾಜು,ಮುನಿರಾಜು, ವೆಂಕಟೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಎಕ್ಸ್ ಪ್ರೆಸ್ ಕೆನಾಲ್ ಗೇಟ್ ಅನ್ನು ತುಮಕೂರಿನವರೇ ಇಟ್ಟುಕೊಂಡು ನಮಗೆ ಮುಕ್ಕಾಲು ಟಿಎಂಸಿ ನೀರು ಬಿಟ್ಟ ನಂತರ ಗೇಟ್ ಅನ್ನು ಮುಚ್ಚಿಕೊಳ್ಳಲ್ಲಿ. ಆದರೆ ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿಗೆ ಅಡ್ಡಿಪಡಿಸುವುದು ಬೇಡ. ಬಡ ರೈತರ ಮೇಲೆ ರಾಜಕೀಯ ಪ್ರಯೋಗ ಮಾಡಬಾರದು.
ಸಿ.ಜಯರಾಂ, ದಲಿತ ಮುಖಂಡ, ತಾ.ಪಂ.ಮಾಜಿ ಸದಸ್ಯ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.