ರಾಮನಗರ: ‘ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಇಸ್ರೋ ಸಹಯೋಗದಲ್ಲಿ ದೊಡ್ಡಬಳ್ಳಾಪುರದಲ್ಲಿ ಇತ್ತೀಚೆಗೆ ನಡೆದ ‘ನಾನು ವಿಜ್ಞಾನಿ-2025’ ತರಬೇತಿ ಕಾರ್ಯಾಗಾರದಲ್ಲಿ ಟೆಲಿಸ್ಕೋಪ್ ತಯಾರಿಸಿ ವಿಶ್ವ ದಾಖಲೆ ಬರೆದ ತಂಡದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ 9 ವಿದ್ಯಾರ್ಥಿಗಳು ಸಹ ಪಾಲ್ಗೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ’ ಎಂದು ಪರಿಷತ್‌ನ ಜಿಲ್ಲಾ ಘಟಕದ ಅದ್ಯಕ್ಷ ರೇಣುಕಾ ಪ್ರಸಾದ್ ಹೇಳಿದರು.
ನಗರದ ಎಬಿಸಿಡಿ ನೃತ್ಯ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಅಭಿನಂದನೆ ಸಲ್ಲಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೊಡ್ಡಬಳ್ಳಾಪುರದ ಬೆಸೆಂಟ್ ಪಾರ್ಕ್‍ನಲ್ಲಿ ನಡೆದ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಮಾಡಿದ ಸಾಧನೆಯು ಇಂಡಿಯಾ ಬುಕ್ ಆಫ್ ರೆಕಾರ್ಡ್, ಏಷ್ಯಾ ಬುಕ್ ಆಫ್ ರೆಕಾರ್ಡ್ ಹಾಗೂ ವರ್ಲ್ಡ್ ಬುಕ್ ಆಫ್ ರೆಕಾರ್ಡ್‍ನಲ್ಲಿ ದಾಖಲಾಗಿದೆ’ ಎಂದರು.
‘ಇಸ್ರೊ ಮಾಜಿ ಅಧ್ಯಕ್ಷರೂ ಆಗಿರುವ ವಿಜ್ಞಾನಿ ಡಾ. ಎ.ಎಸ್. ಕಿರಣ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಗಾರದಲ್ಲಿ 30 ವಿಜ್ಞಾನಿಗಳು ಟೆಲಿಸ್ಕೋಪ್ ತಯಾರಿಕೆ ಕುರಿತು 160 ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು. ಕಡೆಗೆ ಅಷ್ಟೂ ವಿದ್ಯಾರ್ಥಿಗಳು ಟೆಲಿಸ್ಕೋಪ್ ತಯಾರಿಸುವ ಮೂಲಕ ದಾಖಲೆ ಬರೆದರು. ವಿದ್ಯಾರ್ಥಿಗಳಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಪದಕ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಿದರು’ ಎಂದು ತಿಳಿಸಿದರು.
‘ನಾನೂ ವಿಜ್ಞಾನಿ ಕಾರ್ಯಗಾರದಲ್ಲಿ ರಾಮನಗರದ ಶಾಂತಿನಿಕೇತನ ಕಾಲೇಜಿನ ಚಂದನ್ ಆರ್., ಬೆತೆಲ್ ಶಾಲೆಯ ಪೂರ್ವಿಕ, ಲೂರ್ದ್ ಪಬ್ಲಿಕ್ ಶಾಲೆಯ ಮಹಾಲಕ್ಷ್ಮಿ, ಶಿವಗಂಗಾ ಶಾಲೆಯ ವರುಣ್ ಗೌಡ, ಚನ್ನಪಟ್ಟಣ ಕಣ್ವ ಮಹರ್ಷಿ ಶಾಲೆಯ ಪೃಥ್ವಿ, ಹರಿಸಂದ್ರ ಸರ್ಕಾರಿ ಶಾಲೆಯ ತನುಶ್ರೀ, ಬಿಡದಿ ಜ್ಞಾನ ವಿಕಾಸ್ ಶಾಲೆಯ ದೀಪ್ತಿ, ರಾಮನಗರ ಸರ್ಕಾರಿ ಶಾಲೆಯ ಬಿಂದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಚಂದನ ಪಾಲ್ಗೊಂಡಿದ್ದರು’ ಎಂದು ಹೇಳಿದರು.
‘ಪರಿಷತ್ತು ಕಳೆದ ಐದು ವರ್ಷಗಳಿಂದ ಶಾಲಾ–ಕಾಲೇಜುಗಳಲ್ಲಿ ವಿಜ್ಞಾನ ಮತ್ತು ಮೌಢ್ಯತೆ ನಡುವೆ ಇರುವ ಅಂತರದ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುತ್ತಿದೆ. ಬಾಹ್ಯಾಕಾಶ ಸಂಶೋಧನೆ ಕುರಿತು ಆಸಕ್ತಿ ಮೂಡುತ್ತದೆ. ಬಾಹ್ಯಾಕಾಶ ಕ್ಷೇತ್ರಕ್ಕೆ ಭಾರತದ ಕೊಡುಗೆ ಅಪಾರವಾಗಿದ್ದು, ತಮ್ಮದೆ ಆದ ಮೈಲಿಗಲ್ಲು ಸ್ಥಾಪಿಸಿದ್ದಾರೆ’ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಪೋಷಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.