ಹಾರೋಹಳ್ಳಿ: ಒಂದು ಕಾಲದಲ್ಲಿ ಜನ, ಜಾನುವಾರುಗಳಿಗೆ ಆಸರೆಯಾಗಿದ್ದ ಜಕ್ಕಸಂದ್ರ ಗ್ರಾಮದ ಬಳಿಯ ಹೊಸ ಕೆರೆಯಒಡಲು ಗಿಡಗಂಟೆಗಳ ತಾಣವಾಗಿದೆ.
ಕಲುಷಿತ ನೀರು ಕೆರೆಯ ಒಡಲು ಸೇರಿ ಕೆರೆ ನೀರು ಗಬ್ಬು ವಾಸನೆ ಬೀರುತ್ತಿದೆ. ಕೆರೆ ನೀರಿನ ಮೇಲೆ ಹಸಿರು ಪಾಚಿಗಟ್ಟಿದ್ದು, ಉಪಯೋಗಕ್ಕೆ ಬರುವುದು ಇರಲಿ ಕೆರೆ ಸಮೀಪ ಹೋಗಲು ಆಗದಷ್ಟು ಕೊಳೆತು ನಾರುತ್ತಿದೆ. ಕೆರೆ ಸುತ್ತಮುತ್ತ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೊಸಕೆರೆಯ ದಂಡೆ ಸುತ್ತ ಗಿಡಗಂಟಿ ಬೆಳೆದು ಕಾಡಿನಂತೆ ಕಾಣುತ್ತಿದೆ. ಕೆರೆ ತುಂಬಾ ಹುಳು ತುಂಬಿಕೊಂಡಿದ್ದು ಕೆಲವು ವರ್ಷಗಳ ಹೂಳು ಎತ್ತಿದ್ದರು ಯಾವುದೇ ಪ್ರಯೋಜನವಾಗಿಲ್ಲ.
ಖಾಸಗಿ ಸಂಸ್ಥೆಯವರು ಕೆರೆಗೆ ಕಲುಷಿತ ನೀರು ಬಿಡುತ್ತಿರುವುದರಿಂದ ನೀರು ಕಲುಷಿತಗೊಂಡು ಗಬ್ಬುನಾರುತ್ತಿದೆ. ಈ ನೀರನ್ನು ಮುಟ್ಟಲು ಸಹ ಜನರು ಹಿಂಜರಿಯುತ್ತಿದ್ದಾರೆ. ಮಲಿನವಾದ ಕೆರೆಯ ನೀರು ಕುಡಿದುದ ಜಾನುವಾರು ರೋಗ, ರುಜಿನಗಳಿಗೆ ತುತ್ತಾಗುತ್ತಿವೆ.
ಜಕ್ಕಸಂದ್ರ ಗ್ರಾಮದ ಅಂತರ್ಜಲಮಟ್ಟ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹೊಸಕೆರೆಯು ಗ್ರಾಮದ ಹಲವು ಕೊಳವೆಬಾವಿಗಳಿಗೆ ಜೀವ ಜಲವಾಗಿತ್ತು. ನೀರು ಮಲೀನವಾದ ಕಾರಣ ಅಂರ್ಜಲವೂ ಕಲುಷಿತಗೊಂಡಿದೆ. ಸುತ್ತಮುತ್ತಲ ಪ್ರದೇಶದಲ್ಲಿ ಕೊಳವೆ ಬಾವಿಗಳ ನೀರು ಸಹ ಕುಡಿಯಲು ಯೋಗ್ಯವಾಗಿಲ್ಲ.
ದಶಕಗಳ ಕಾಲ ಜನರ ಜೀವನಾಡಿಯಾಗಿದ್ದ ಹೊಸಕೆರೆ ಕಲುಷಿತ ನೀರು ಜನ, ಜಾನುವಾರಗಳ ಜೀವ ಮತ್ತು ಪರಿಸರಕ್ಕೆ ಮಾರಕವಾಗಿ ಪರಿಣಮಿಸಿದೆ.
ಕೆರೆಯ ಕಲುಷಿತ ನೀರಿನ ಕುರಿತು ಪರಿಶೀಲನೆ ನಡೆಸಿ ಕ್ರಮ ಜರುಗಿಸಲಾಗುವುದುಮಂಜುನಾಥ್, ಜಿಲ್ಲಾ ಪರಿಸರ ಅಧಿಕಾರಿ, ರಾಮನಗರ
ಕೆರೆಗೆ ಕಲುಷಿತ ನೀರು ಸೇರಿ ಕೆರೆಯ ಪರಿಸರವೂ ಹಾಳಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು ಮುಂದಿನ ದಿನಗಳಲ್ಲಿ ನರೇಗಾ ಯೋಜನೆಯಡಿ ಕೆರೆ ಅಭಿವೃದ್ಧಿಪಡಿಸಲಾಗುವುದು.ಸುಧಾ ನಾಗೇಶ್, ಅಧ್ಯಕ್ಷೆ, ಗ್ರಾಮ ಪಂಚಾಯಿತಿ ಚೀಲೂರು
ಹೊಸಕೆರೆಯ ಹೂಳು ಎತ್ತಿ ನೀರು ಸಂಗ್ರಹವಾಗುವಂತೆ ಮಾಡಿದರೆ ಅಂತರ್ಜಲಮಟ್ಟ ಹೆಚ್ಚಾಗುವುದಲ್ಲದೆ ಭತ್ತಿ ಹೋಗಿರುವ ಕೊಳವೆಬಾವಿಗಳಲ್ಲಿ ಜೀವಜಲ ಸೆಲೆಯೊಡೆಯುತ್ತದೆ.ಗೀತಾ ಚಲುವರಾಜು, ಸದಸ್ಯೆ, ಗ್ರಾಮ ಪಂಚಾಯಿತಿ ಜಕ್ಕಸಂದ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.