ADVERTISEMENT

ಪ್ರವಾಸೋದ್ಯಮ ಅಭಿವೃದ್ಧಿ ವರ್ತುಲ ರಚನೆ: ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್

ಜಾನಪದ ಲೋಕದಲ್ಲಿ ಪ್ರವಾಸಿ ಜಾನಪದ ಲೋಕೋತ್ಸವಕ್ಕೆ ಸಚಿವ ಯೋಗೇಶ್ವರ್ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 13:49 IST
Last Updated 12 ಮಾರ್ಚ್ 2021, 13:49 IST
ಜಾನಪದ ಲೋಕದ ವಿದ್ಯಾರ್ಥಿನಿಯರಿಂದ ಡೊಳ್ಳು ಕುಣಿತ ಪ್ರದರ್ಶನ ನಡೆಯಿತು
ಜಾನಪದ ಲೋಕದ ವಿದ್ಯಾರ್ಥಿನಿಯರಿಂದ ಡೊಳ್ಳು ಕುಣಿತ ಪ್ರದರ್ಶನ ನಡೆಯಿತು   

ರಾಮನಗರ: ‘ಪ್ರವಾಸೋದ್ಯಮ ವರ್ತುಲ ರಚನೆ ಮೂಲಕ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗುವುದು’ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ತಿಳಿಸಿದರು.

ನಗರದ ಹೊರವಲಯದಲ್ಲಿರುವ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತು, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಮೂರು ದಿನಗಳ `26ನೇ ಪ್ರವಾಸಿ ಜಾನಪದ ಲೋಕೋತ್ಸವ -2021`ಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ರಾಮನಗರ ಜಿಲ್ಲೆ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಹ ಪ್ರಾಕೃತಿಕ ತಾಣಗಳನ್ನು ಹೊಂದಿದೆ. ಬೆಟ್ಟಗುಡ್ಡಗಳ ಸಾಲುಗಳಿವೆ. ತುಂಬಿ ತುಳುಕುತ್ತಿರುವ ಕಣ್ವ ಹಾಗೂ ಮಂಚನಬೆಲೆ ಜಲಾಶಯಗಳಿವೆ. ಅಲ್ಲಿ ನೀರಿಗೆ ಸಂಬಂಧಿಸಿದ ಕ್ರೀಡೆಗಳನ್ನು ನಡೆಸಲು ಅವಕಾಶವಿದೆ. ಒಬ್ಬ ಪ್ರವಾಸಿಗ ಬೆಂಗಳೂರಿನಿಂದ ಹೊರಟು ಒಂದು ದಿನದಿಂದ ಮೂರು ದಿನದವರೆಗೆ ಇಲ್ಲಿನ ತಾಣಗಳನ್ನು ವೀಕ್ಷಿಸಬಹುದಾಗಿದೆ. ಈ ಯಾತ್ರಿಗಳಿಗೆ ಬೇಕಾದ ಮೂಲ ಸೌಕರ್ಯವನ್ನು ಸರ್ಕಾರ ಒದಗಿಸಲಿದೆ. ಮುಂದಿನ ಹದಿನೈದು ದಿನದಲ್ಲಿ ಈ ಕುರಿತು ಇನ್ನಷ್ಟು ವಿವರ ನೀಡುತ್ತೇನೆ’ ಎಂದರು.

ADVERTISEMENT

ಜಾನಪದ ಲೋಕಕ್ಕೆ ಹೊಸ ರೂಪ: ಜಾನಪದ ಲೋಕವು ಸ್ಥಾಪನೆಯಾಗಿ ಮೂರು ದಶಕವೇ ಕಳೆದಿದ್ದರೂ ಹೆಚ್ಚಿನ ಅಭಿವೃದ್ಧಿ ಕಂಡಿಲ್ಲ. ಈಚಿನ ವರ್ಷಗಳಲ್ಲಿ ಸರ್ಕಾರ ವಾರ್ಷಿಕ ₨1.75 ಕೋಟಿ ಅನುದಾನ ನೀಡುತ್ತಿದ್ದು, ಇದರಿಂದ ನಿರ್ವಹಣೆ ಮಾತ್ರ ಸಾಧ್ಯವಾಗಿದೆ. ಈಗ 15 ಎಕರೆಯಷ್ಟು ವಿಸ್ತೀರ್ಣದಲ್ಲಿ ಇರುವ ಇದರ ವ್ಯಾಪ್ತಿಯನ್ನು 50 ಎಕರೆಗೆ ವಿಸ್ತರಿಸಲು ಪರಿಷತ್‌ನ ಅಧ್ಯಕ್ಷರು ಕೋರಿದ್ದಾರೆ. ಸುತ್ತಮುತ್ತ ಎಷ್ಟು ಜಮೀನು ಲಭ್ಯ ಇದೆ. ಅದರಲ್ಲಿ ಸರ್ಕಾರಿ ಜಮೀನು ಎಷ್ಟು ಎಂಬುದನ್ನು ಪರಿಶೀಲಿಸಿ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ಮುಂದಿನ ದಿನಗಳಲ್ಲಿ ಪ್ರವಾಸಿಗರು ಜಾನಪದ ಲೋಕವನ್ನು ಹುಡುಕಿಕೊಂಡು ಬರುವಂತೆ ಪ್ರಗತಿ ಆಗಲಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್ .ರಂಗಪ್ಪ, ಜಿಲ್ಲಾಧಿಕಾರಿ ರಾಕೇಶ್‌ಕುಮಾರ್‌, ಕರ್ನಾಟಕ ಜಾನಪದ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್, ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಲವೇಗೌಡ, ಚನ್ನಪಟ್ಟಣ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಣ್ಣ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಹರೀಶ್ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವಿನಯ್ ಕುಮಾರ್ ಇದ್ದರು.

ಹೆಚ್ಚುವರಿ ಜಮೀನಿಗೆ ಮನವಿ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಪರಿಷತ್‌ ಅಧ್ಯಕ್ಷ ಟಿ. ತಿಮ್ಮೇಗೌಡ ಮಾತನಾಡಿ ‘ಜಾನಪದ ಲೋಕವು ಕೇವಲ 15 ಎಕರೆ ಹೊಂದಿದ್ದು, ಇದನ್ನು ರಾಷ್ಟ್ರೀಯ ದರ್ಜೆ ಕೇಂದ್ರವನ್ನಾಗಿ ಮಾರ್ಪಡಿಸಲು ಇನ್ನೂ 35 ಎಕರೆ ಜಮೀನು ನೀಡಬೇಕು’ ಎಂದು ಸಚಿವರಲ್ಲಿ ಮನವಿ ಮಾಡಿದರು. ‘ನಾಡಿನ ವಿವಿಧ ಐತಿಹಾಸಿಕ ಸ್ಥಳಗಳಲ್ಲಿ ಇರುವಂತೆ ಇಲ್ಲಿಯೂ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ರೂಪಿಸಬೇಕು. ಇದರಿಂದಾಗಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ’ ಎಂದರು.

ಕರಕುಶಲ ಪ್ರದರ್ಶನ

ಲೋಕೋತ್ಸವದ ಮುಖ್ಯ ವೇದಿಕೆಗೆ ಹೊಂದಿಕೊಂಡಂತೆ ವಿವಿಧ ಕರಕುಶಲ ವಸ್ತುಗಳ ಪ್ರದರ್ಶನ ಆಯೋಜಿಸಲಾಗಿದ್ದು, ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ ಚಾಲನೆ ನೀಡಿದರು. ಜಾನಪದ ಲೋಕದ ಆವರಣದಲ್ಲೇ ಕಲಾವಿದೆ ಅನುಸೂಯಮ್ಮ ರೂಪಿಸಿರುವ ಮಣ್ಣಿನ ವಿವಿಧ ಕಲಾಕೃತಿಗಳು ಪ್ರದರ್ಶನದಲ್ಲಿವೆ. ಜೊತೆಗೆ ಚನ್ನಪಟ್ಟಣದ ಗೊಂಬೆಗಳು, ವಿವಿಧ ಸ್ವಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳು, ಕೈಮಗ್ಗದ ಬಟ್ಟೆಗಳು ಮೊದಲಾದವು ಪ್ರದರ್ಶನ ಮತ್ತು ಮಾರಾಟಕ್ಕೆ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.