ADVERTISEMENT

ಗಣವೇಷದಲ್ಲಿ ಜೆಡಿಎಸ್‌ ನಾಯಕ ಎ.ಮಂಜು; ಗರಿಗೆದರಿದ ಚರ್ಚೆ

ಹೊಸ ಅವತಾರ ಕುರಿತು ಜಿಲ್ಲೆಯಲ್ಲಿ ಗರಿಗೆದರಿದ ಚರ್ಚೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 0:25 IST
Last Updated 28 ಸೆಪ್ಟೆಂಬರ್ 2025, 0:25 IST
ಆರ್‌ಎಸ್‌ಎಸ್‌ನ ವಿಜಯದಶಮಿ ಉತ್ಸವದ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಗಣವೇಷಧಾರಿ ಜೆಡಿಎಸ್ ಜಿಲ್ಲಾಧ್ಯಕ್ಷ ಎ. ಮಂಜುನಾಥ್ ಚಿತ್ರ
ಆರ್‌ಎಸ್‌ಎಸ್‌ನ ವಿಜಯದಶಮಿ ಉತ್ಸವದ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಗಣವೇಷಧಾರಿ ಜೆಡಿಎಸ್ ಜಿಲ್ಲಾಧ್ಯಕ್ಷ ಎ. ಮಂಜುನಾಥ್ ಚಿತ್ರ   

ರಾಮನಗರ: ಮಾಗಡಿಯ ಮಾಜಿ ಶಾಸಕ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಎ. ಮಂಜುನಾಥ್ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಗಣವೇಷದಲ್ಲಿರುವ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ರಾಜಕೀಯ ಚರ್ಚೆಗೆ ಎಡೆ ಮಾಡಿಕೊಟ್ಟಿವೆ.

ಸಂಘದ ಶತಮಾನೋತ್ಸವದ ಪ್ರಯುಕ್ತ ವಿಜಯದಶಮಿ ಅಂಗವಾಗಿ ಅ. 2ರಂದು ಆರ್‌ಎಸ್‌ಎಸ್‌ ತನ್ನ ಶಾಖೆಗಳಲ್ಲಿ ವಿಜಯದಶಮಿ ಉತ್ಸವ ಹಮ್ಮಿಕೊಂಡಿದೆ. ಬಿಡದಿಯ ಬಿಜಿಎಸ್ ವೃತ್ತದಲ್ಲಿ ನಡೆಯಲಿರುವ ಉತ್ಸವದ ಅಧ್ಯಕ್ಷತೆ ವಹಿಸಲಿರುವ ಮಂಜುನಾಥ್ ಗಣವೇಷ ಧರಿಸಿ ವಿಡಿಯೊ ಹರಿಬಿಟ್ಟಿದ್ದಾರೆ.

‘ನಾವೆಲ್ಲರೂ ಹಿಂದೂಗಳಾಗಿ ದೇಶದ ಕೀರ್ತಿ ಹೆಚ್ಚಿಸಬೇಕು. ಆರ್‌ಎಸ್‌ಎಸ್ ಶತಮಾನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವುದು ನನ್ನ ಭಾಗ್ಯ ಎಂದು ಭಾವಿಸಿದ್ದೇನೆ. ಅಂದು ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಸ್ವಯಂಪ್ರೇರಣೆಯಿಂದ ಗಣವೇಷಧಾರಿಗಳಾಗಿ ಭಾಗವಹಿಸುವ ಮೂಲಕ ಹಿಂದುತ್ವ ಹಾಗೂ ರಾಷ್ಟ್ರಪ್ರೇಮ ಎತ್ತಿ ಹಿಡಿಯಬೇಕು’ ಎಂದು ವಿಡಿಯೊದಲ್ಲಿ ಕರೆ ಕೊಟ್ಟಿದ್ದಾರೆ.

ADVERTISEMENT

ಜಿಲ್ಲೆಯ ಪ್ರಮುಖ ಜೆಡಿಎಸ್ ನಾಯಕರಾಗಿರುವ ಮಂಜುನಾಥ್ ಅವರ ವಿಡಿಯೊ ವೀಕ್ಷಿಸಿದವರು ಹಲವು ರೀತಿಯ ಪ್ರಶ್ನೆಗಳನ್ನು ಎತ್ತಿದ್ದಾರೆ. ಮಾಜಿ ಶಾಸಕರು ಬಿಜೆಪಿಯತ್ತ ವಾಲಿದ್ದಾರೆಯೇ? ಮುಂದಿನ ಚುನಾವಣೆಗಾಗಿ ಪಕ್ಷಾಂತರ ಮಾಡುವರೇ? ಅದಕ್ಕೆ ಈಗಿನಿಂದಲೇ ಪೂರ್ವಸಿದ್ದತೆ ನಡೆಸಲು ಗಣವೇಷ ಧರಿಸಿದ್ದಾರೆಯೇ? ಎಂಬ ಅನುಮಾನದ ಚರ್ಚೆಗಳು ವಾಟ್ಸ್‌ಆ್ಯಪ್‌ ಸೇರಿದಂತೆ ಇತರ ಸಾಮಾಜಿಕ ಜಾಲತಾಣದಲ್ಲಿ ಗರಿಗೆದರಿವೆ.

ಅನುಮಾನವನ್ನು ಅಲ್ಲಗಳೆದಿರುವ ಜೆಡಿಎಸ್ ಮುಖಂಡರು, ಆರ್‌ಎಸ್‌ಎಸ್ ದೇಶಭಕ್ತ ಸಂಘಟನೆ. ಬಿಜೆಪಿ ಮತ್ತು ಜೆಡಿಎಸ್ ಮಿತ್ರಪಕ್ಷಗಳಾಗಿರುವುದರಿಂದ ಆರ್‌ಎಸ್‌ಎಸ್‌ನವರು ನಮ್ಮ ನಾಯಕನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಗಣವೇಷ ಧರಿಸಿದ ಮಾತ್ರಕ್ಕೆ ಪಕ್ಷಾಂತರ ಮಾಡಲಿದ್ದಾರೆ ಎಂದು ಭಾವಿಸುವುದು ತಪ್ಪು ಎಂದು ಸ್ಪಷ್ಟನೆ ನೀಡುತ್ತಿದ್ದಾರೆ.

‘ಗಣವೇಷಕ್ಕೂ ಬಿಜೆಪಿಗೂ ಸಂಬಂಧವಿಲ್ಲ’

‘ನನ್ನ ಗಣವೇಷಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ನಾನೊಬ್ಬ ರಾಷ್ಟ್ರಪ್ರೇಮಿ. ಆರ್‌ಎಸ್‌ಎಸ್‌ 100 ವರ್ಷ ಪೂರೈಸಿರುವ ಪ್ರಯುಕ್ತ ಬಿಡದಿಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ನನ್ನನ್ನು ಅಧ್ಯಕ್ಷತೆ ವಹಿಸಿಕೊಳ್ಳುವಂತೆ ಆಹ್ವಾನಿಸಿದ್ದಾರೆ. ಅದಕ್ಕಾಗಿ ಗಣವೇಷ ಧರಿಸಿದ್ದೇನೆ. ಬಿಜೆಪಿಯವರು ನನ್ನನ್ನು ಸಚಿವನನ್ನಾಗಿ ಮಾಡುತ್ತೇವೆ ಎಂದು ಕರೆದಾಗಲೇ ನಾನು ಹೋಗಿಲ್ಲ. ನಮ್ಮ ನಾಯಕರಾದ ಎಚ್.ಡಿ. ದೇವೇಗೌಡರು ಮತ್ತು ಎಚ್.ಡಿ. ಕುಮಾರಸ್ವಾಮಿ ಅವರ ಅನುಯಾಯಿಯಾಗಿ ರಾಜಕಾರಣ ಮಾಡಿಕೊಂಡು ಬಂದಿರುವ ನಾನು ತಲೆ ಮಾರಿಕೊಳ್ಳುವ ಜಾಯಮಾನದವನಲ್ಲ’ ಎಂದು ತಮ್ಮ ವಿಡಿಯೊ ಮತ್ತು ಚಿತ್ರಗಳ ಕುರಿತು ಎ. ಮಂಜುನಾಥ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.