ADVERTISEMENT

ಜೆಡಿಎಸ್‌ ತೊರೆದು ಬಿಜೆಪಿ ಸೇರಿದ ಶಾಂತಪ್ಪ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 14:31 IST
Last Updated 23 ಜುಲೈ 2020, 14:31 IST
ಜೆಡಿಎಸ್ ಮುಖಂಡ ಟಿ.ಕೆ. ಶಾಂತಪ್ಪ ಗುರುವಾರ ಬಿಜೆಪಿ ನಾಯಕರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು
ಜೆಡಿಎಸ್ ಮುಖಂಡ ಟಿ.ಕೆ. ಶಾಂತಪ್ಪ ಗುರುವಾರ ಬಿಜೆಪಿ ನಾಯಕರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು   

ರಾಮನಗರ: ಜೆಡಿಎಸ್‌ನ ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಟಿ.ಕೆ. ಶಾಂತಪ್ಪ ಸೇರಿದಂತೆ ಹಲವರು ಗುರುವಾರ ಜೆಡಿಎಸ್‌ ತೊರೆದು ಬಿಜೆಪಿ ಸೇರ್ಪಡೆಯಾದರು.

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ವಕ್ತಾರ ಅಶ್ವತ್ಥ ನಾರಾಯಣ ಗೌಡ, ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಹುಲುವಾಡಿ ದೇವರಾಜು, ಜಿಲ್ಲಾ ಬಿಜೆಪಿ ಪ್ರದಾನ ಕಾರ್ಯದರ್ಶಿ ರುದ್ರದೇವರು, ನಗರ ಘಟಕದ ಅಧ್ಯಕ್ಷ ಶಿವಾನಂದ ಈ ಸಂದರ್ಭ ಇದ್ದರು.

ಪತ್ರಿಕಾಗೋಷ್ಠಿ: ಇದಕ್ಕೂ ಮುನ್ನ ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ ಶಾಂತಪ್ಪ ಜೆಡಿಎಸ್‌ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದರು. ‘ಪಕ್ಷದ ಇತ್ತೀಚಿನ ಬೆಳವಣಿಗೆಗಳಿಂದ ಬೇಸತ್ತು ಪಕ್ಷವನ್ನು ತ್ಯಜಿಸುತ್ತಿದ್ದೇನೆ. ಕಳೆದ 20 ವರ್ಷಗಳಿಂದ ಜೆಡಿಎಸ್‌ನ ನಿಷ್ಠಾವಂತ ಕಾರ್ಯಕರ್ತರಾಗಿ ನಾನು, ನನ್ನ ಸ್ನೇಹಿತರು ದುಡಿದಿದ್ದೇವೆ. ಗ್ರಾಮ ಪಂಚಾಯಿತಿ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವ ಜೊತೆಗೆ, ಎಚ್‌ಡಿಕೆ ಕುಟುಂಬದವರ ಎಲ್ಲ ಚುನಾವಣೆಗಳಲ್ಲೂ ಹಗಳಿರುಳು ದುಡಿದಿದ್ದೇವೆ’ ಎಂದರು.

ADVERTISEMENT

‘ಎರಡು ಬಾರಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಕ್ಷೇತ್ರದ ಮುಖಂಡರಾದ ನಮಗೆ ಅವರಿಂದ ಸ್ಪಂದನೆ ಸಿಗಲಿಲ್ಲ. ಅಲ್ಲದೇ ಪಕ್ಷ ಸಂಘಟನೆಯೂ ಆಗುತ್ತಿಲ್ಲ, ಎಲ್ಲದಕ್ಕೂ ಹೈಕಮಾಂಡ್ ಕುಮಾರಸ್ವಾಮಿ ಆಗಿದ್ದು, ಸಾಮಾನ್ಯ ಕಾರ್ಯಕರ್ತರೂ ಬೆಂಗಳೂರಿನತ್ತ ಹೋಗಿ ಅಹವಾಲು ಸಲ್ಲಿಸಬೇಕಾದ ಸ್ಥಿತಿ ಪಕ್ಷದಲ್ಲಿದೆ. ಇಂತಹ ಉಸಿರುಗಟ್ಟುವ ವಾತಾವರಣದಲ್ಲಿ ಪಕ್ಷದ ಕೆಲಸ ಮಾಡಲು ಆಗುತ್ತಿಲ್ಲ, ಹೀಗಾಗಿ ನಾನು ಜೆಡಿಎಸ್ ಪ್ರಾಥಮಿಕ ಸದಸ್ಯತ್ವ ಮತ್ತು ಜೆಡಿಎಸ್ ಜಿಲ್ಲಾ ಕಾನೂನು ಘಟಕದ ಅದ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.