ಚನ್ನಪಟ್ಟಣ (ರಾಮನಗರ): ಕಾಂಗ್ರೆಸ್ ಪಕ್ಷದವರು ಮತದಾರರಿಗೆ ಕುಕ್ಕರ್, ಸೀರೆ, ಗಿಫ್ಟ್ ಕಾರ್ಡ್ ಹಂಚುವಾಗ ಕಾಣದ ಚುನಾವಣಾ ಅಧಿಕಾರಿಗಳು ಯುಗಾದಿ ಹಬ್ಬದೂಟ ತಡೆಯಲು ಓಡೋಡಿ ಬಂದರು. ನಾವೇನೂ ಅಲ್ಲಿ ಪಾರ್ಟಿ ಮಾಡುತ್ತಿರಲಿಲ್ಲ...
ಕೇತಗಾನಹಳ್ಳಿ ತೋಟದ ಮನೆಯಲ್ಲಿ ಬುಧವಾರ ಊಟಕ್ಕೆ ತಡೆಯೊಡ್ಡಿದ ಚುನಾವಣಾ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಸಮಾಧಾನ ವ್ಯಕ್ತ ಪಡಿಸಿದ ಬಗೆ ಇದು.
ತಾಲ್ಲೂಕಿನ ಮತ್ತಿಕೆರೆ ಶೆಟ್ಟಿಹಳ್ಳಿಯಲ್ಲಿ ಮೈತ್ರಿಕೂಟದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಪರವಾಗಿ ಗುರುವಾರ ಪ್ರಚಾರ ನಡೆಸುವಾಗ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಹೊಸ ತೊಡಕು ಹಿನ್ನೆಲೆಯಲ್ಲಿ ತೋಟದ ಮನೆಯ ಕೆಲಸಗಾರರಿಗೆ ಊಟದ ವ್ಯವಸ್ಥೆ ಮಾಡಿದ್ದೆವು. ಕೆಲ ಮುಖಂಡರು ಸಹ ಊಟಕ್ಕೆ ಬರುವುದಾಗಿ ಹೇಳಿದ್ದರು. ನಾವೇನೂ ಅಲ್ಲಿ ಪಾರ್ಟಿ ಮಾಡುತ್ತಿರಲಿಲ್ಲ. ಇಲ್ಲವೇ ಸಾರ್ವಜನಿಕ ಸಮಾರಂಭ ಏರ್ಪಾಡು ಮಾಡಿರಲಿಲ್ಲ. ಎಲ್ಲರೂ ಊಟಕ್ಕೆ ಸೇರಲು ತೀರ್ಮಾನಿಸಿದ್ವಿ’ ಎಂದರು.
‘ಚುನಾವಣೆಯಲ್ಲಿ ಸೋಲುವ ಆತಂಕದಲ್ಲಿರುವ ಕಾಂಗ್ರೆಸ್‌ನವರು ದೂರು ನೀಡಿದ ತಕ್ಷಣ ಅಧಿಕಾರಿಗಳು ನಮ್ಮ ತೋಟದ ಮನೆಗೆ ಬಂದು ಪರಿಶೀಲನೆ ಮಾಡಿದರು. ಅದೇ ಕುಕ್ಕರ್ ಮತ್ತು ಸೀರೆ ಹಂಚಿದವರ ವಿರುದ್ಧ ಚುನಾವಣಾ ಆಯೋಗ ಇದುವರೆಗೆ ಯಾಕೆ ಕ್ರಮ ಕೈಗೊಂಡಿಲ್ಲ’ ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ನವರು ನೀಡಿದ ದೂರಿನ ಮೇರೆಗೆ ಹಬ್ಬದೂಟ ತಡೆಯೊಡ್ಡಿರುವ ಚುನಾವಣಾ ಅಧಿಕಾರಿಗಳು, ರಾಜ್ಯ ಸರ್ಕಾರದ ಕೈಗೊಂಬೆಗಳಾಗಿರುವುದು ಸ್ಪಷ್ಟ. ರಾಮನಗರದಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಸೀರೆ ಮತ್ತು ಡ್ರೆಸ್ ಪೀಸ್ ಅನ್ನು ಸಹ ಮೈತ್ರಿ ಪಕ್ಷದ ಕಾರ್ಯಕರ್ತರೇ ಪತ್ತೆ ಹಚ್ಚಿ ಹಿಡಿದುಕೊಟ್ಟರು. ಅಧಿಕಾರಿಗಳ ಕಾರ್ಯವೈಖರಿ ಹೇಗಿದೆ ಎಂಬುದು ಇದರಲ್ಲೇ ಗೊತ್ತಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.