ADVERTISEMENT

ಚನ್ನಪಟ್ಟಣ | ಜೀವೇಶ್ವರ ವನಕ್ಕೆ ಜೀವಕಳೆ ಪರಿಸರ ಪ್ರಿಯರು: ಸಾರ್ವಜನಿಕರ ಮೆಚ್ಚುಗೆ

ಎಚ್.ಎಂ.ರಮೇಶ್
Published 28 ಅಕ್ಟೋಬರ್ 2025, 2:27 IST
Last Updated 28 ಅಕ್ಟೋಬರ್ 2025, 2:27 IST
ಪರಿಸರ ಪ್ರೇಮಿ ದಿವಂಗತ ಭೂಹಳ್ಳಿ ಪುಟ್ಟಸ್ವಾಮಿನಿರ್ಮಿಸಿದ್ದ ಜೀವೇಶ್ವರ ವನವನ್ನು ನಿಸರ್ಗ ನಾಗರಿಕ ಸೇವಾ ಸಮಿತಿಯ ಪದಾಧಿಕಾರಿಗಳು ಸ್ವಚ್ಛಗೊಳಿಸಿರುವುದು 
ಪರಿಸರ ಪ್ರೇಮಿ ದಿವಂಗತ ಭೂಹಳ್ಳಿ ಪುಟ್ಟಸ್ವಾಮಿನಿರ್ಮಿಸಿದ್ದ ಜೀವೇಶ್ವರ ವನವನ್ನು ನಿಸರ್ಗ ನಾಗರಿಕ ಸೇವಾ ಸಮಿತಿಯ ಪದಾಧಿಕಾರಿಗಳು ಸ್ವಚ್ಛಗೊಳಿಸಿರುವುದು    

ಚನ್ನಪಟ್ಟಣ: ನಗರದ ಹೊರವಲಯದಲ್ಲಿರುವ ಮಹದೇಶ್ವರ ದೇವಸ್ಥಾನ ಆವರಣದಲ್ಲಿ ಸಾಹಿತಿ ಮತ್ತು ಪರಿಸರ ಪ್ರೇಮಿ ದಿವಂಗತ ಭೂಹಳ್ಳಿ ಪುಟ್ಟಸ್ವಾಮಿ ಅವರು ನಿರ್ಮಿಸಿದ್ದ ‘ಜೀವೇಶ್ವರ ವನ’ಕ್ಕೆ ನಿಸರ್ಗ ಪ್ರೇಮಿಗಳು ಈಗ ಜೀವಕಳೆ ತಂದಿದ್ದಾರೆ.

ಅವರು 2010ರಲ್ಲಿ ಮಹದೇಶ್ವರ ದೇವಾಲಯದ ಆವರಣದಲ್ಲಿದ್ದ ಪಾಳುಬಿದ್ದ ಮೂರು ಎಕರೆ ಸರ್ಕಾರಿ ಜಾಗದಲ್ಲಿ ನೂರಾರು ಮರಗಳನ್ನು ನೆಟ್ಟು ‘ಜೀವೇಶ್ವರ ವನ’ವನ್ನು ಸೃಷ್ಟಿಸಿದ್ದರು. ಅವರು ನೆಟ್ಟಿದ್ದ ಗಿಡಗಳು 15 ವರ್ಷಗಳಲ್ಲಿ ವಿಫುಲವಾಗಿ ಬೆಳದಿದ್ದು, ವನದೊಳಗೆ ಪ್ರವೇಶಿಸಿದರೆ ಸಣ್ಣದಾದ ಕಾಡಿನ ಅನುಭವವಾಗುತ್ತಿತ್ತು. ಆದರೆ, ಈ ವನ ಕಳೆದ ಒಂದು ವರ್ಷದಿಂದ ಪಾಳು ಬಿದ್ದಿತ್ತು.

ಪುಟ್ಟಸ್ವಾಮಿ ಅವರು 2024 ಜುಲೈ 29ರಂದು ನಿಧನರಾಗುವವರೆಗೂ ಈ ವನವನ್ನು ಸ್ವತಃ ಅವರೇ ಕಾಪಾಡುತ್ತಿದ್ದರು. ಅವರ ನಿಧನ ನಂತರ ವನದಲ್ಲಿ ಗಿಡಗಂಟಿಗಳು ಬೆಳೆದು ಇಡೀ ಪ್ರದೇಶ ಪಾಳು ಬಿದ್ದಿತು. ಬಳ್ಳಿ, ಪೊದೆಗಳು ಮತ್ತು ಕಸದ ರಾಶಿಯಿಂದ ಆವೃತವಾಗಿದ್ದ ಈ ಪ್ರದೇಶ ಕೆಲವರಿಗೆ ಬಹಿರ್ದೆಸೆ ತಾಣವಾಗಿ ಮಾರ್ಪಟ್ಟಿತು. ದೂಮಪಾನ ಮತ್ತು ಮದ್ಯಪಾನದ ಆವಾಸಸ್ಥಾನವಾಗಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಕಿರಿಕಿರಿಯನ್ನು ಉಂಟು ಮಾಡುತ್ತಿತ್ತು.

ADVERTISEMENT

ಈ ಸ್ಥಿತಿಯನ್ನು ಗಮನಿಸಿದ ತಾಲ್ಲೂಕಿನ ನಿಸರ್ಗ ನಾಗರಿಕ ಸೇವಾ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಿದ್ದರು. ವನದ ಆವರಣವನ್ನು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿಸಿ ಗಿಡಗಂಟಿ ತೆಗೆದು, ಪ್ಲಾಸ್ಟಿಕ್ ಚೀಲ, ಬಾಟಲಿ ಮತ್ತು ಕವರ್‌ ಸಂಗ್ರಹಿಸಿ ವನವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ್ದಾರೆ.

ವನಕ್ಕೆ ಹೊಂದಿಕೊಂಡಂತೆ ಸಾತನೂರು ರಸ್ತೆ ಪಕ್ಕದಲ್ಲಿ ಸುರಿದಿದ್ದ ಕಸದ ರಾಶಿ ತೆಗೆದು ಹಾಕಲಾಗಿದೆ. ನಾಮಫಲಕ ಹಾಕಿ ಮಹದೇಶ್ವರ ದೇವಸ್ಥಾನ ಹಾಗೂ ಸುತ್ತಮುತ್ತಲೂ ಕಸ ಹಾಕಬಾರದು. ಹಾಕಿದ್ದಲ್ಲಿ ₹2,000 ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಸಮಿತಿ ಅಧ್ಯಕ್ಷ ಪುಟ್ಟಸ್ವಾಮಿಗೌಡ, ಮಂಗಳವಾರಪೇಟೆ ರಘು ಮತ್ತು ಯೋಗೇಶ್ ಚಕ್ಕೆರೆ ಮಾತನಾಡಿ, ಧಾರ್ಮಿಕ ಕೇಂದ್ರಗಳು ಸ್ವಚ್ಛತೆ ತಾಣಗಳಾಗಬೇಕು. ಜೀವೇಶ್ವರ ವನದಲ್ಲಿ ಬಳ್ಳಿ ಮತ್ತು ಪೊದೆಗಳನ್ನು ತೆರವುಗೊಳಿಸಿ ವನಕ್ಕೆ ಹೊಸ ಚೈತನ್ಯ ತುಂಬಲಾಗಿದೆ. ವನದ ಸುತ್ತಲೂ ಹಾಳಾಗಿದ್ದ ತಂತಿಬೇಲಿಯನ್ನು ಪುನರ್‌ ರ್ನಿರ್ಮಾಣ ಮಾಡಲಾಗಿದೆ. ಮುಂದಿನ ಹಂತದಲ್ಲಿ ವನದ ಸುತ್ತ ವಾಕಿಂಗ್ ಪಥ ನಿರ್ಮಿಸಿ ಅಲ್ಲಲ್ಲಿ ಕಲ್ಲಿನ ಬೆಂಚು ಹಾಕಲು ಯೋಜಿಸಲಾಗಿದೆ ಎಂದರು.

ನಿಸರ್ಗ ನಾಗರಿಕ ಸೇವಾ ಸಮಿತಿ ಈಗಾಗಲೇ ತಾಲ್ಲೂಕಿನ ಹಲವು ದೇವಸ್ಥಾನಗಳ ಆವರಣ ಮತ್ತು ಬೆಟ್ಟಗುಡ್ಡಗಳ ತಾಣಗಳನ್ನು ಸ್ವಚ್ಛಗೊಳಿಸಿ ಸಾರ್ವಜನಿಕರಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸಿದೆ. ಇದು ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಗಿದೆ. 

ಭೂಹಳ್ಳಿ ಪುಟ್ಟಸ್ವಾಮಿ ಅವರ ಸ್ಮಾರಕ
ನಾಮಫಲಕದ ಮುಂದೆ ಸಮಿತಿ ಪದಾಧಿಕಾರಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.