ADVERTISEMENT

ಜನರ ಭಾವನೆ ವಿರುದ್ಧ ಯೇಸು ಪ್ರತಿಮೆ: ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ

ವಿವಾದಿತ ಸ್ಥಳಕ್ಕೆ ಬಿಜೆಪಿ ಮುಖಂಡರ ಭೇಟಿ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 12:04 IST
Last Updated 30 ಡಿಸೆಂಬರ್ 2019, 12:04 IST
ಯೇಸು ಪ್ರತಿಮೆ ನಿರ್ಮಾಣ ಮಾಡುತ್ತಿರುವ ವಿವಾಧಿತ ಕಪಾಲ ಬೆಟ್ಟಕ್ಕೆ ಅಶ್ವತ್‌ ನಾರಾಯಣಗೌಡ ಭೇಟಿ ನೀಡಿದರು
ಯೇಸು ಪ್ರತಿಮೆ ನಿರ್ಮಾಣ ಮಾಡುತ್ತಿರುವ ವಿವಾಧಿತ ಕಪಾಲ ಬೆಟ್ಟಕ್ಕೆ ಅಶ್ವತ್‌ ನಾರಾಯಣಗೌಡ ಭೇಟಿ ನೀಡಿದರು   

ಕನಕಪುರ: ಯೇಸು ಪ್ರತಿಮೆಯನ್ನು ನಿರ್ಮಿಸುತ್ತಿರುವ ಹಾಗೂ ವಿವಾದಿತ ಸ್ಥಳವಾಗಿರುವ ಕಪಾಲ (ಮುನೇಶ್ವರ) ಬೆಟ್ಟಕ್ಕೆ ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥನಾರಾಯಣಗೌಡ 20 ಮಂದಿ ತಂಡದೊಂದಿಗೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.

ಅವರು ಮಾತನಾಡಿ, ಸ್ಥಳೀಯರು, ಹಳ್ಳಿಯ ಜನತೆ ಹೇಳುವಂತೆ ಯೇಸು ಪ್ರತಿಮೆ ನಿರ್ಮಾಣ ಮಾಡುತ್ತಿರುವ ವಿವಾದಿತ ಮುನೇಶ್ವರನ ಬೆಟ್ಟವು ಮೊದಲಿಂದಲೂ ಹಳ್ಳಿಯ ರೈತರು ಸುಗ್ಗಿಕಾಲದಲ್ಲಿ ಪೂಜೆ ನೆರವೇರಿಸಿಕೊಂಡು ಬಂದಿರುವ ಹಿಂದೂಗಳ ಪವಿತ್ರ ಸ್ಥಳವಾಗಿದೆ ಎಂದರು.

ವರ್ಷದಲ್ಲಿ ಎರಡು ಬಾರಿ ಮುನೇಶ್ವರನ ಬೆಟ್ಟದಲ್ಲಿ ರೈತರು ಕಲ್ಲುಗಳನ್ನಿಟ್ಟು ಪೂಜೆ ಮಾಡಿರುವ ಕುರುಹುಗಳಿದ್ದವು. ಅವುಗಳನ್ನು ಇತ್ತೀಚಿನ ದಿನಗಳಲ್ಲಿ ನಾಶಪಡಿಸಲಾಗಿದೆ. ಮುನೇಶ್ವರನ ಬೆಟ್ಟವನ್ನು ಕಪಾಲ ಬೆಟ್ಟವೆಂದು ಪ್ರತಿಬಿಂಬಿಸಲಾಗುತ್ತಿದೆ ಎಂದರು.

ADVERTISEMENT

‘ಶಿವಕುಮಾರ್‌ ಅವರು ರಾಜಕೀಯ ಪ್ರಭಾವ ಬಳಸಿ ರೈತರು ಪೂಜೆ ಮಾಡುತ್ತಿದ್ದ ಜಾಗದಲ್ಲೇ ಯೇಸು ಪ್ರತಿಮೆಯನ್ನು ನಿರ್ಮಾಣ ಮಾಡಲು ಹೊರಟಿದ್ದಾರೆ. ಜನರ ಭಾವನೆಗೆ ವಿರುದ್ದವಾಗಿ, ದೇವರನ್ನು ಪೂಜಿಸುತ್ತಿದ್ದ ಸ್ಥಳವನ್ನು ನಾಶ ಪಡಿಸಿರುವ ಶಿವಕುಮಾರ್‌ ನಾಶವಾಗಿ ಹೋಗುತ್ತಾರೆ’ ಎಂದರು.

ತಾಲ್ಲೂಕು ಆಡಳಿತ ಮತ್ತು ಜಿಲ್ಲಾಡಳಿತವು ಶಿವಕುಮಾರ್‌ ಅವರ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಕಾನೂನು ಬಾಹಿರವಾಗಿ ಅಭಿವೃದ್ಧಿ ಕೆಲಸಗಳಿಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಮುಂದೆ ಅವರು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬೆಟ್ಟದ ಕೆಳಗಡೆಯಿಂದ ಮೇಲಿನ ವರೆಗೂ 2.5 ಕಿಲೋ ಮೀಟರ್‌ ಉದ್ದದ ರಸ್ತೆಯನ್ನು ಮಾಡಿದ್ದಾರೆ. ಮೇಲೆ ಹೋಗಲು ಮೆಟ್ಟಿಲುಗಳನ್ನು ಮಾಡಿದ್ದು ಮದ್ಯದಲ್ಲಿ ಸಣ್ಣ ಯೇಸು ಗುಡಿಗಳನ್ನು ನಿರ್ಮಾಣ ಮಾಡಿದ್ದಾರೆ ಎಂದು ದೂರಿದರು.

ರೈತರ ಹಾಗೂ ಜಾನುವಾರಗಳ ಉಪಯೋಗಕ್ಕೆ ಬಿಟ್ಟಿದ್ದ ಗೋಮಾಳ ಪ್ರದೇಶವನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಿರುವುದನ್ನು ಹಾಗೂ ಜನರ ಭಾವನೆಗೆ ವಿರುದ್ದವಾಗಿ ಯೇಸು ಪ್ರತಿಮೆ ಮಾಡುತ್ತಿರುವುದನ್ನು ವಿರೋಧಿಸುತ್ತೇವೆ ಎಂದರು.

ಇಲ್ಲಿ ಅಕ್ರಮವಾಗಿ ನಡೆಯುತ್ತಿರುವ ಸಂಪೂರ್ಣ ಮಾಹಿತಿಯನ್ನು ಹಾಗೂ ಇಲ್ಲಿನ ಮಾಹಿತಿಯನ್ನು ಹಳ್ಳಿಯಲ್ಲಿರುವ ಹಿರಿಯರಿಂದ ಪಡೆದು ಸಾರ್ವಜನಿಕರ ಗಮನಕ್ಕೆ ತಂದು ಇದನ್ನು ಸಂಘಟಿತ ಹೋರಾಟವನ್ನಾಗಿ ರೂಪಿಸುವುದಾಗಿ ಹೇಳಿದರು.

ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಶಿವರಾಮ್‌, ಮುಖಂಡರಾದ ದೇವರಾಜು, ಶಿವಮಾದು, ಮದನ್‌, ಕೃಷ್ಣೇಗೌಡ, ಪ್ರದೀಪ್‌, ಕೆಂಪೇಗೌಡ, ಸ್ವಾಮಿ, ಮುನಿಲಿಂಗೇಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.