ADVERTISEMENT

ಜಾನುವಾರುಗಳಲ್ಲಿ ಕಾಲುಬಾಯಿ ಜ್ವರ ಉಲ್ಬಣ

ಔಷದೋಪಚಾರದ ನಂತರವೂ ಕಾಣಿಸಿಕೊಳ್ಳುತ್ತಿದೆ ರೋಗ; ರೈತರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 12:15 IST
Last Updated 19 ಜನವರಿ 2019, 12:15 IST
ಪಾಲಬೋವಿದೊಡ್ಡಿ ಗ್ರಾಮದಲ್ಲಿ ಕಾಲುಬಾಯಿ ಜ್ವರಕ್ಕೆ ತುತ್ತಾದ ಹಸು
ಪಾಲಬೋವಿದೊಡ್ಡಿ ಗ್ರಾಮದಲ್ಲಿ ಕಾಲುಬಾಯಿ ಜ್ವರಕ್ಕೆ ತುತ್ತಾದ ಹಸು   

ರಾಮನಗರ: ಜಿಲ್ಲೆಯ ಜಾನುವಾರುಗಳಲ್ಲಿ ಪದೇ ಪದೇ ಕಾಲುಬಾಯಿ ಜ್ವರ ರೋಗವು ಕಾಣಿಸಿಕೊಳ್ಳುತ್ತಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.

ಚನ್ನಪಟ್ಟಣ ತಾಲ್ಲೂಕಿನ ಸಾಕಷ್ಟು ಹಳ್ಳಿಗಳಲ್ಲಿ ತಿಂಗಳಿನಿಂದ ಹಸುಗಳು ಈ ರೋಗಕ್ಕೆ ತುತ್ತಾಗಿವೆ. ರಾಮನಗರ ಪಾಲಬೋವಿದೊಡ್ಡಿ, ಹುಲಿಕೆರೆ–ಗುನ್ನೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ಜಾನುವಾರುಗಳಲ್ಲಿ ಈ ಜ್ವರವು ಕಾಣಿಸಿಕೊಳ್ಳುತ್ತಿದೆ. ಹಸುಗಳ ಬಾಯಿಯಿಂದ ಜೊಲ್ಲು ಸೋರತೊಡಗಿದ್ದು, ಕಾಲುಗಳಲ್ಲಿ ಗಾಯ ಕಾಣಿಸಿಕೊಂಡಿದೆ. ಒಂದರಿಂದ ಮತ್ತೊಂದು ಹಸುವಿಗೆ ಈ ರೋಗ ಹರಡುತ್ತಿದೆ ಎಂದು ರೈತರು ದೂರುತ್ತಾರೆ.

ರೋಗ ಕಾಣಿಸಿಕೊಂಡಿರುವ ಕಡೆ ಈಗಾಗಲೇ ಬಮೂಲ್‌ ವೈದ್ಯರು ಹಾಗೂ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ವೈದ್ಯೋಪಚಾರದ ನಂತರವೂ ಜಾನುವಾರುಗಳಲ್ಲಿ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ರೋಗ ಕಾಣಿಸಿಕೊಂಡ ಹಸುಗಳನ್ನು ಪ್ರತ್ಯೇಕವಾಗಿ ಕಟ್ಟಿ ಅವುಗಳನ್ನು ಉಪಚರಿಸುವುದೇ ರೈತರಿಗೆ ಸವಾಲಾಗುತ್ತಿದೆ.

ADVERTISEMENT

‘ ನಾಲ್ಕೈದು ದಿನದ ಹಿಂದೆ ಒಂದು ಹಸುವಿನಲ್ಲಿ ಜ್ವರ ಕಾಣಿಸಿಕೊಂಡು ಜೊಲ್ಲು ಸುರಿಸಲು ಆರಂಭಿಸಿತು. ಇದೀಗ ಮತ್ತೊಂದು ಹಸುವಿಗೂ ಜ್ವರ ತಗಲುಲಿದೆ. ಹಸುಗಳು ಜೊಲ್ಲು ಸುರಿಸುತ್ತಿದ್ದು, ಅವುಗಳ ನಾಲಿಗೆಗೂ ಹುಣ್ಣಾಗಿದೆ. ಹೀಗಾಗಿ ಹೆಚ್ಚು ಮೇವು ಮೇಯುತ್ತಿಲ್ಲ’ ಎಂದು ಪಾಲಬೋವಿದೊಡ್ಡಿ ಗ್ರಾಮದ ರೈತ ವೆಂಕಟಪ್ಪ ಅಳಲು ತೋಡಿಕೊಂಡರು. ರೋಗಬಾಧೆಯಿಂದ ಹಸುವಿನ ಹಾಲಿನ ಪ್ರಮಾಣ ಕಡಿಮೆ ಆಗುತ್ತಿದ್ದು, ಆರ್ಥಿಕವಾಗಿಯೂ ನಷ್ಟವಾಗುತ್ತಿದೆ. ಇದರಿಂದ ದಿಕ್ಕು ತೋಚದಂತೆ ಆಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಫಲ ನೀಡದ ಉಪಚಾರ: ಕಾಲು ಬಾಯಿ ಜ್ವರವು ವೈರಸ್‌ನಿಂದ ಹರಡುವ ಕಾಯಿಲೆಯಾಗಿದೆ. ಅಡುಗೆ ಅಥವಾ ಬಟ್ಟೆ ಸೋಡಾ (ಸೋಡಿಯಂ ಬೈ ಕಾರ್ಬೋನೆಟ್) ಸಿಂಪಡನೆಯಿಂದ ಇವುಗಳನ್ನು ಕೊಲ್ಲಲು ಸಾಧ್ಯವಿದೆ. ರೋಗ ಕಾಣಿಸಿಕೊಂಡ ಗ್ರಾಮಗಳಲ್ಲಿ ಆಗಾಗ್ಗೆ ಸೋಡಾ ಸಂಪಡನೆ ಮಾಡಲಾಗಿದೆ. ಆದಾಗ್ಯೂ ಕೆಲವು ಗ್ರಾಮಗಳಲ್ಲಿ ಕಾಲುಬಾಯಿ ಜ್ವರವು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದೆ.

ಲಕ್ಷಣಗಳೇನು: ‘ಮೊದಲಿಗೆ ಹಸುವಿನಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಕಾಲುಗಳಲ್ಲಿ ಗಾಯವಾಗುತ್ತದೆ. ದವಡೆ, ನಾಲಿಗೆಯಲ್ಲಿ ಗುಳ್ಳೆಗಳು ಕಾಣಿಸಿಕೊಂಡು ಸೀಳು ಬಿಡುತ್ತವೆ. ಇದರಿಂದ ನೋವು ಹೆಚ್ಚಿ ಹಸುಗಳು ಮೇಯುವುದನ್ನೇ ನಿಲ್ಲಿಸುತ್ತವೆ. ಸುಮಾರು ಏಳು ದಿನ ಕಾಲ ಅವುಗಳ ಪರಿಸ್ಥಿತಿ ಹೀಗೆ ಇರುತ್ತದೆ’ ಎಂದು ಪಶು ಸಂಗೋಪನಾ ಇಲಾಖೆಯ ವೈದ್ಯರು ಮಾಹಿತಿ ನೀಡಿದರು.

ತೊಂದರೆ ಏನು?: ಒಮ್ಮೆ ರೋಗ ಕಾಣಿಸಿಕೊಂಡರೆ ಮುಗಿಯಿತು. ಅದು ಶಾಶ್ವತವಾಗಿ ವಾಸಿಯಾಗುವ ಸಾಧ್ಯತೆ ಇಲ್ಲ. ಕ್ರಮೇಣ ಜಾನುವಾರುಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆಗುವುದು, ಬಂಜೆತನ, ಹಾಲಿನ ಪ್ರಮಾಣ ಕಡಿಮೆಯಾಗುತ್ತ ಹೋಗುತ್ತದೆ ಎಂದು ಪಶು ವೈದ್ಯರು ಎಚ್ಚರಿಸುತ್ತಾರೆ.

ಜಾನುವಾರುಗಳಿಗೆ ಲಸಿಕೆ ಹಾಕಿಸುವ ವಿಚಾರದಲ್ಲಿ ರೈತರು ತೋರುವ ಉದಾಸೀನತೆಯೇ ರೋಗ ಉಲ್ಬಣಕ್ಕೆ ಕಾರಣ. ಪ್ರತಿ ಜಾನುವಾರಿಗೆ ಕನಿಷ್ಠ 3 ಬಾರಿ ಸತತವಾಗಿ ಲಸಿಕೆ ಹಾಕಿಸುವುದು ಅವಶ್ಯ. ಇದರಿಂದ ಮಾತ್ರ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಆದರೆ ಕೆಲವರು ಮೂಢನಂಬಿಕೆಯಿಂದಾಗಿ ಲಸಿಕೆ ಹಾಕಿಸಲು ಹಿಂಜರಿಯುತ್ತಿದ್ದಾರೆ. ಜಾನುವಾರುಗಳ ಮಾಲೀಕತ್ವವೂ ಆಗಾಗ್ಗೆ ಬದಲಾಗುತ್ತಿರುವುದು ಸವಾಲಾಗಿದೆ’ ಎನ್ನುತ್ತಾರೆ ಪಶು ವೈದ್ಯರು.

ರೋಗ ನಿಯಂತ್ರಣಕ್ಕೆ ಮನೆ ಮದ್ದು: ‘ಪ್ರಾರಂಭದಲ್ಲಿ ಹಸುವಿನ ನಾಲಿಗೆಯಲ್ಲಿ ಸೋರುವ ಜೊಲ್ಲನ್ನು ನಿಯಂತ್ರಿಸಲು ಮನೆಯಲ್ಲಿಯೇ ಮದ್ದು ತಯಾರಿಸಬಹುದು. ಜೀರಿಗೆ, ಮೆಣಸು ಮತ್ತು ಮೆಂತ್ಯವನ್ನು ಇಪ್ಪತ್ತು ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ ನಂತರ ಅದಕ್ಕೆ ಅರಿಸಿನ ಪುಡಿ, ಬೆಲ್ಲ ಮತ್ತು ಬೆಳ್ಳುಳ್ಳಿಯನ್ನು ಮಿಶ್ರಮಾಡಿ ಪೇಸ್ಟ್ ತಯಾರಿಸಿ, ಅದನ್ನು ಉಂಡೆ ಮಾಡಿ ತೆಂಗಿನ ತುರಿಯೊಂದಿಗೆ ದಿನಕ್ಕೆ ನಾಲ್ಕು ಬಾರಿ ತಿನ್ನಿಸುವುದರಿಂದ ತ್ವರಿತವಾಗಿ ರೋಗ ನಿಯಂತ್ರಣಕ್ಕೆ ಬರಲಿದೆ’ ಎಂದು ಅನುಭವಿ ರೈತರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.