ADVERTISEMENT

ಶ್ರೀರಾಮ ಸೇನೆಯಿಂದ ಕನಕಪುರ ತಾಲ್ಲೂಕು ಆಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 2:40 IST
Last Updated 23 ಫೆಬ್ರುವರಿ 2026, 2:40 IST
ಕನಕಪುರ ಶ್ರೀರಾಮ ಸೇನೆ ಕಾರ್ಯಕರ್ತರು ತಾಲೂಕು ಆಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು, ಗ್ರೇಡ್ -2 ತಹಶೀಲ್ದಾರ್ ಮನೋಹರ್ ಮನವಿ ಪತ್ರ ಸ್ವೀಕರಿಸಿದರು
ಕನಕಪುರ ಶ್ರೀರಾಮ ಸೇನೆ ಕಾರ್ಯಕರ್ತರು ತಾಲೂಕು ಆಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು, ಗ್ರೇಡ್ -2 ತಹಶೀಲ್ದಾರ್ ಮನೋಹರ್ ಮನವಿ ಪತ್ರ ಸ್ವೀಕರಿಸಿದರು   

ಕನಕಪುರ: ಬಾಗಲಕೋಟೆ ನಗರದಲ್ಲಿ ಫೆಬ್ರವರಿ 19 ರಂದು ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಕಲ್ಲು ಮತ್ತು ಚಪ್ಪಲಿ ತೂರಾಟ ಘಟನೆಯನ್ನು ಖಂಡಿಸಿ, ಶ್ರೀರಾಮ ಸೇನೆಯ ಕಾರ್ಯಕರ್ತರು ಶನಿವಾರ ಪ್ರತಿಭಟನಾ ಮನವಿ ಪತ್ರವನ್ನು ತಾಲೂಕು ಆಡಳಿತದ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿದರು.

ಈ ವೇಳೆ ದಕ್ಷಿಣ ಪ್ರಾಂತ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗಾರ್ಜುನಗೌಡ ಮಾಚನಾಡಿ ಐತಿಹಾಸಿಕ ಗೌರವ ಮತ್ತು ರಾಷ್ಟ್ರಾಭಿಮಾನವನ್ನು ಪ್ರತಿನಿಧಿಸುವ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಶಾಂತಿಯುತವಾಗಿ ಸಾಗುತ್ತಿದ್ದ ಮೆರವಣಿಗೆಯ ಮೇಲೆ ನಡೆದ ದಾಳಿ ದುಃಖಕರ ಮತ್ತು ಅಸನೀಯವಾದ ಘಟನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಿಳೆಯರು, ಯುವಕರು ಹಾಗೂ ಹಿರಿಯರು ಭಾಗವಹಿಸಿದ್ದ ಮೆರವಣಿಗೆಯ ಮೇಲೆ ಈ ರೀತಿಯ ದಾಳಿ ನಡೆಯುವುದು ಸಮಾಜದ ಶಾಂತಿ ಹಾಗೂ ಸೌಹಾರ್ದತೆಗೆ ಧಕ್ಕೆ ತರುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ರಾಜ್ಯಪಾಲರಿಗೆ ನೀಡಿದ ಮನವಿ ಪತ್ರದಲ್ಲಿ ಇರುವ ಪ್ರಮುಖ ಬೇಡಿಕೆಗಳು:

ADVERTISEMENT

ಮೆರವಣಿಗೆಯ ಮೇಲೆ ನಡೆದ ಕಲ್ಲು, ಚಪ್ಪಲಿ ಹೋರಾಟದ ದಾಳಿಯಲ್ಲಿ ಭಾಗಿಯಾಗಿರುವ ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.

ಸಂಘಟಿತ ಸಂಚು ಇರುವುದಾದರೆ ಸಂಪೂರ್ಣ ತನಿಖೆ ನಡೆಸಿ ಸತ್ಯಾಂಶ ಬಹಿರಂಗಪಡಿಸಬೇಕು.

ಗಾಯಗೊಂಡವರಿಗೆ ತಕ್ಷಣ ಚಿಕಿತ್ಸೆ, ಪರಿಹಾರ ಮತ್ತು ಭದ್ರತಾ ಭರವಸೆ ಒದಗಿಸಬೇಕು.

ಘಟನೆ ತಡೆಯಲು ವಿಫಲವಾದ ಸಂಬಂಧಿತ ಅಧಿಕಾರಿಗಳ ಜವಾಬ್ದಾರಿಯನ್ನು ನಿಗದಿಪಡಿಸಬೇಕು.

ರಾಜ್ಯದಲ್ಲಿ ಶಾಂತಿ, ನ್ಯಾಯ ಮತ್ತು ಭದ್ರತೆ ಕಾಪಾಡುವುದು ಸರ್ಕಾರದ ಮೂಲ ಕರ್ತವ್ಯವಾಗಿದ್ದು, ಈ ಘಟನೆಯ ಕುರಿತು ತ್ವರಿತ ಹಾಗೂ ಪಾರದರ್ಶಕ ಕ್ರಮ ಕೈಗೊಳ್ಳುವ ಮೂಲಕ ಜನರ ವಿಶ್ವಾಸವನ್ನು ಉಳಿಸಬೇಕು ಎಂಬುದನ್ನು ಮನವಿಯಲ್ಲಿ ಒತ್ತಾಯಿಸಲಾಗಿದೆ.

ನ್ಯಾಯ ದೊರಕುವವರೆಗೂ ಕಾನೂನುಬದ್ಧ ಮತ್ತು ಶಾಂತಿಯುತ ಮಾರ್ಗದಲ್ಲಿ ಹೋರಾಟ ಮುಂದುವರಿಸುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ.

ಮಂಡ್ಯ ವಿಭಾಗೀಯ ಅಧ್ಯಕ್ಷ ರಾಜೇಶ್.ಡಿ.ಎಂ, ಪ್ರಧಾನ ಕಾರ್ಯದರ್ಶಿ ನವೀನ್, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಪರಮೇಶ್ ಗೌಡ, ಬೆಂಗಳೂರು ಕಾರ್ಯದರ್ಶಿ ಗಿರೀಶ್.ಬಿ.ಎಂ, ಕಾರ್ಯದರ್ಶಿ ರಾಜಗೋಪಾಲ್, ಪದಾಧಿಕಾರಿಗಳಾದ ಸಾಗರ್, ಸ್ವಾಮಿ, ಮಲ್ಲಿಕಾರ್ಜುನ್, ಪ್ರಭು ಸೇರಿದಂತೆ ಅನೇಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.