
ಕನಕಪುರ: ಚಿಂತನೆ ಮನುಷ್ಯನ ಜೀವನ ನಕಾರಾತ್ಮಕತೆಯೆಡೆಗೆ ಕೊಂಡೊಯ್ಯುತ್ತದೆ. ಶರಣರ ಹಿತವಚನ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಯಶಸ್ಸಿನಡೆಗೆ ಕೊಂಡೊಯ್ಯುತ್ತದೆ ಎಂದು ದಾಳಿಂಬ ಬಸವ ಗುರು ಮಂಟಪ ಅಧ್ಯಕ್ಷ ಹಾಗೂ ಕುಂಬಳಗೂಡು ಬಸವ ಗಂಗೋತ್ರಿ ಡಾ.ಚನ್ನಬಸವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಸಾತನೂರು ಹೋಬಳಿ ದಾಳಿಂಬ ಗ್ರಾಮದ ಗುರು ಬಸವ ಮಂಟಪದಲ್ಲಿ ಹಮ್ಮಿಕೊಂಡಿದ್ದ ಶರಣರ ಸಂಗಮ ಸಾಮೂಹಿಕ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ನಮ್ಮ ಅಹಂಕಾರ ನಿವಾರಣೆಯಾಗಲು ಶರಣರು ನೀಡಿದ ಮಹಾ ಆದರ್ಶ ನಮ್ಮ ಬಾಳಿನಲ್ಲಿ ಅಳವಡಿಸಿಕೊಳ್ಳಬೇಕು. ಯುವಕರು, ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ದೂರವಿದ್ದು ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದರು.
‘ಮಾನವನ ಜೀವನ ಯಶಸ್ವಿಯಾಗಲು ಶರಣರ ಚಿಂತನೆ ಅಗತ್ಯ. ಜಗಜ್ಯೋತಿ ಬಸವಣ್ಣ ಅವರು ನೀಡಿದ ವಚನ ಸಾರ ಎಲ್ಲರೂ ಅಳವಡಿಸಿಕೊಳ್ಳಬೇಕಿದೆ’ ಎಂದು ತಿಳಿಸಿದರು.
ಸಾಮೂಹಿಕ ಪ್ರಾರ್ಥನೆ ಮಾಡುವುದರಿಂದ ಭಕ್ತರ ಮನಸ್ಸಿನಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದತೆ ಬೆಳೆಯಲು ಕಾರಣವಾಗುತ್ತದೆ. ದಾಳಿಂಬ ಬಸವ ಮಂಟಪದಲ್ಲಿ ಪ್ರತಿ ತಿಂಗಳು ಬಸವ ಸ್ಮರಣೆ ಕಾರ್ಯಕ್ರಮ ಇರುತ್ತದೆ. ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದರು.
ಮುದ್ದು ಬಸಪ್ಪ, ಈರಮ್ಮ, ಶಿವಲಿಂಗಯ್ಯ, ಉದ್ಯಮಿ ಮುನಿಮಾದಪ್ಪ, ಯೋಗ ಗುರು ವೆಂಕಟೇಶ್, ಬಸವ ಸಮಿತಿ ತಾಲ್ಲೂಕು ಅಧ್ಯಕ್ಷ ನಿರಂಜನ್ ಮೂರ್ತಿ, ಬಿಡದಿ ರೇಣುಕಪ್ಪ, ಚನ್ನಬಸವಣ್ಣ, ಮಂಜಮ್ಮ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.