ಕನಕಪುರ: ಸೇತುವೆ ತೀರಾ ಕಿರಿದಾಗಿದ್ದು ಹಾಗೂ ಶಿಥಿಲವಾದ ಕಾರಣ ಪರ್ಯಾಯವಾಗಿ ಹೊಸದಾಗಿ ನಿರ್ಮಾಣ ಮಾಡುತ್ತಿರುವ ಸೇತುವೆ ಕಾಮಗಾರಿಯೂ ನಿಗದಿತ ಸಮಯಕ್ಕೆ ಪೂರ್ಣಗೊಳ್ಳದೆ ವಾಹನಗಳ ಓಡಾಟಕ್ಕೆ ತೊಂದರೆಯಾಗಿ, ಜನರು ಕಿರಿಕಿರಿ ಅನುಭವಿಸುವಂತಾಗಿದೆ.
ಇಲ್ಲಿನ ಮಳೆಗಾಳು ರಸ್ತೆಯ ಅರ್ಕಾವತಿ ನದಿಗೆ ಹಲವು ವರ್ಷಗಳ ಹಿಂದೆ ನಿರ್ಮಿಸಿರುವ ಸೇತುವೆ ತೀರ ಇಕ್ಕಟ್ಟಾಗಿದ್ದು ಶಿಥಿಲಾವಸ್ಥೆಯಲ್ಲಿತ್ತು. ಅದರ ಪಕ್ಕದಲ್ಲೆ ನಿರ್ಮಾಣ ಮಾಡುತ್ತಿರುವ ಸೇತುವೆ ಕಾಮಗಾರಿ ಪೂರ್ಣಗೊಳ್ಳದೆ ಇರುವುದೇ ಸಮಸ್ಯೆಗೆ ಕಾರಣವಾಗಿದೆ.
ಎಸ್.ಕರಿಯಪ್ಪ ಅವರ ಕಾಲದಲ್ಲಿ ಅಂದಿನ ಅವಶ್ಯಕತೆಗೆ ತಕ್ಕಂತೆ ಸೇತುವೆಯನ್ನು ಚಿಕ್ಕದಾಗಿ ನಿರ್ಮಾಣ ಮಾಡಲಾಗಿತ್ತು. ಅಂದು ವಾಹನಗಳ ಸಂಖ್ಯೆ ಕಡಿಮೆ ಇದ್ದವು, ಸೇತುವೆ ಸಾಕಾಗಿತ್ತು. ಇಂದು ವಾಹನಗಳ ಸಂಖ್ಯೆ ಹೆಚ್ಚಳವಾಗಿದ್ದು ಸಾವಿರಾರು ವಾಹನ ಕಿರಿದಾದ ಸೇತುವೆ ಮೇಲೆ ಓಡಾಡುತ್ತಿವೆ.
ಚಾಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಜನರು ಹಾಗೂ ಮರಳವಾಡಿ ಮತ್ತು ಶ್ರೀನಿವಾಸನಹಳ್ಳಿ ಕೋಡಿಹಳ್ಳಿಗೆ ಹೋಗುವ ವಾಹನಗಳು ಇದೆ ಸೇತುವೆ ಮೇಲೆ ಓಡಾಡುತ್ತವೆ. ಮಳಗಾಳು ಸೇರಿದಂತೆ ಜವನಮ್ಮನದೊಡ್ಡಿ, ಬರಡನಹಳ್ಳಿ, ಲಕ್ಷ್ಮಿಪುರ, ಚೀರಣಕುಪ್ಪೆ, ದ್ಯಾಪೇಗೌಡನದೊಡ್ಡಿ, ಬೋರಮ್ಮನದೊಡ್ಡಿ ಗ್ರಾಮಸ್ಥರು ಈಗಲೂ ಈ ರಸ್ತೆಯ ಮೇಲೆ ಓಡಾಡುತ್ತಾರೆ. ಕನಕಪುರಕ್ಕೆ ಬರಲು ಈ ಸೇತುವೆ ಬಿಟ್ಟರೆ ಬೇರೆ ಸೇತುವೆ ಇಲ್ಲ.
ಅಂದು ಸೈಕಲ್, ಸ್ಕೂಟರ್ ಬೈಕ್ ಸಣ್ಣಾಪುಟ್ಟ ಕಾರುಗಳು ಓಡಾಡುತ್ತಿದ್ದ ಜಾಗದಲ್ಲಿ ಈಗ ದೊಡ್ಡದೊಡ್ಡ ವಾಹನಗಳು ಕಷ್ಟದಿಂದ ಓಡಾಡುತ್ತಿವೆ. ವಾಹನಗಳ ಜೊತೆಗೆ ಜನರು ಇದೇ ಸೇತುವೆ ಮೇಲೆ ನಡೆದುಕೊಂಡು ಓಡಾಡುತ್ತಾರೆ. ದೊಡ್ಡ ವಾಹನ ಬಂದಾಗ ನಡೆದುಕೊಂಡು ಹೋಗುವುದು ಕಷ್ಟವಾಗುತ್ತಿದೆ.
ಸೇತುವೆ ಕಿರಿದಾಗಿರುವುದು ಮತ್ತು ಶಿಥಿಲವಾಗಿರುವುದನ್ನು ಹಾಗೂ ವಾಹನಗಳ ಒತ್ತಡ ಹೆಚ್ಚಾಗಿರುವುದನ್ನು ಗಮನಿಸಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನೂತನ ಸೇತುವೆ ಮಂಜೂರು ಮಾಡಿಸಿ 2022ರಲ್ಲಿ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು.
ಆದರೆ ಗುತ್ತಿಗೆದಾರರು ಇಲ್ಲಿಯವರೆಗೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಯಾವಾಗ ಪೂರ್ಣಗೊಳ್ಳುತ್ತದೊ, ಓಡಾಡಲು ಅವಕಾಶ ದೊರೆಯುತ್ತದೊ ಎಂದು ನಿರೀಕ್ಷೆಯಿಂದ ಜನ ಕಾಯುತ್ತಿದ್ದಾರೆ. ಸುಮಾರು ₹11 ಕೋಟಿ ವೆಚ್ಚದಲ್ಲಿ ಈ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
ಸೇತುವೆ ಶಿಥಿಲವಾಗಿದ್ದರಿಂದ ಪಕ್ಕದಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಗುತ್ತಿಗೆದಾರರು 2022ರಿಂದ ನಿರ್ಮಾಣ ಮಾಡುತ್ತಿದ್ದು ಇಲ್ಲಿವರೆಗೂ ಪೂರ್ಣಗೊಳಿಸಿಲ್ಲ. ಶೀಘ್ರವೇ ಸೇತುವೆ ಪೂರ್ಣಗೊಳಿಸಬೇಕುಹೋಟೆಲ್ ನಾಗರಾಜ್ ರೈತ ಕನಕಪುರ
ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲ
ಅರ್ಕಾವತಿ ಸೇತುವೆಗೆ ಮಳಗಾಳು ಬಳಿ ನಿರ್ಮಾಣ ಮಾಡಿರುವ ಸೇತುವೆ ಮಾರ್ಗವಾಗಿ ಹಲವು ಧಾರ್ಮಿಕ ಕೇಂದ್ರ ಪ್ರವಾಸೋದ್ಯಮ ತಾಣಗಳಿವೆ. ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತಿದ್ದು ಸಾಕಷ್ಟು ಜನರು ಈ ಭಾಗಕ್ಕೆ ಬರುತ್ತಾರೆ. ಸೇತುವೆ ಕಿರಿದಾಗಿ ಶಿಥಿಲವಾಗಿರುವುದರಿಂದ ವಾಹನಗಳ ಓಡಾಟಕ್ಕೆ ಕಿರಿಕಿರಿಯಾಗುತ್ತಿದೆ. ಶೀಘ್ರ ಪೂರ್ಣಗೊಳಿಸಿದರೆ ಜನರಿಗೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಕೆ.ಆರ್.ಅರುಣೇಶ್ ಯುವ ಉದ್ಯಮಿ ಶೀಘ್ರವೇ ಪೂರ್ಣಗೊಳಿಸಲಾಗುವುದು ಮಳಗಾಳು ಬಳಿ ಅರ್ಕಾವತಿ ನದಿಗೆ 16 ಮೀಟರ್ ಅಗಲ 140 ಮೀಟರ್ ಉದ್ದದಲ್ಲಿ ₹11 ಕೋಟಿ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣ ಮಾಡುತ್ತಿದ್ದು ನಿರ್ಮಾಣ ಕಾರ್ಯವನ್ನು ಅಭಿಷೇಕ್ ಎಂಬವರು ಗುತ್ತಿಗೆ ಪಡೆದು ಕೆಲಸ ಮಾಡುತ್ತಿದ್ದಾರೆ. ತಾಂತ್ರಿಕ ಕಾರಣಗಳಿಂದ ಕಾಮಗಾರಿ ವಿಳಂಬವಾಗಿದೆ. ಸಮಸ್ಯೆ ಪರಿಹರಿಸಿ ಶೀಘ್ರವೇ ಪೂರ್ಣಗೊಳಿಸಲಾಗುವುದು. ಪ್ರಕಾಶ್ ಎಇಇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಮೀನು ಸ್ವಾಧೀನ ಪ್ರಕ್ರಿಯೆ ಸಮಸ್ಯೆ ಇತ್ತು ಸೇತುವೆ ಪೂರ್ಣಗೊಳ್ಳದಿರುವುದರಿಂದ ಸಾರ್ವಜನಿಕರಿಗೆ ವಾಹನಗಳ ಓಡಾಟಕ್ಕೆ ಸಮಸ್ಯೆ ಆಗುತ್ತಿದೆ. ಮಳಗಾಳು ಅರ್ಕಾವತಿ ಸೇತುವೆ ನಿರ್ಮಾಣದ ಎರಡು ಬದಿಯಲ್ಲಿ ಜಮೀನು ಸ್ವಾಧೀನ ಪ್ರಕ್ರಿಯೆಯ ಸಮಸ್ಯೆ ಇತ್ತು. ಆ ಕಾರಣದಿಂದ ಸೇತುವೆ ನಿರ್ಮಾಣ ಕಾರ್ಯ ವಿಳಂಬವಾಗಿತ್ತು. ಅದು ಈಗ ಬಗೆಹರಿದಿದೆ ಸಂಬಂಧಪಟ್ಟ ಇಲಾಖೆ ಮತ್ತು ಗುತ್ತಿಗೆದಾರನಿಗೆ ಶೀಘ್ರವೇ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಎಸ್.ರವಿ ವಿಧಾನ ಪರಿಷತ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.