ADVERTISEMENT

ಕನಕಪುರ | ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆಗೆ ಸ್ಪಂದಿಸದೆ ತಂದೆ,ತಾಯಿ,ಮಗ ಸಾವು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 5:24 IST
Last Updated 2 ಫೆಬ್ರುವರಿ 2026, 5:24 IST
ಸಿದ್ದರಾಜು
ಸಿದ್ದರಾಜು   

ಕನಕಪುರ: ನಗರದಲ್ಲಿ ವಾರದ ಹಿಂದೆ ಸಂಭವಿಸಿದ್ದ ಅಡುಗೆ ಅನಿಲ ಸಿಲಿಂಡರ್ ಸ್ಫೋಟದ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಒಂದೇ ಕುಟುಂಬದ ಮೂವರು ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟಿದ್ದಾರೆ. ನಗರದ ರಾಮನಗರ ರಸ್ತೆಯ ಅಮರ ನಾರಾಯಣ ಬ್ಲಾಕ್ ನಿವಾಸಿಗಳಾದ ಸಿದ್ದರಾಜು(55), ಪತ್ನಿ ಚಂದ್ರಮ್ಮ(50) ಹಾಗೂ ಪುತ್ರ ಪ್ರಶಾಂತ್(22) ಮೃತರು.

ಕುಟುಂಬವು ತಳ್ಳುಗಾಡಿ ಕ್ಯಾಂಟೀನ್ ಇಟ್ಟುಕೊಂಡು ಬದುಕು ಸಾಗಿಸುತ್ತಿತ್ತು. ಜ. 26ರಂದು ಮನೆಯಲ್ಲಿ ವಿವಿಧ ತಿಂಡಿಗಳನ್ನು ಎಣ್ಣೆಯಲ್ಲಿ ಬೇಯಿಸುತ್ತಿದ್ದರು. ಈ ವೇಳೆ, ಅಡುಗೆ ಅನಿಲ ಸೋರಿಕೆಯಾಗಿ ಒಮ್ಮೆಲೆ ಬೆಂಕಿ ಹೊತ್ತಿಕೊಂಡು ಇಡೀ ಕೋಣೆಯನ್ನು ಆವರಿಸಿತ್ತು. ಇದರಿಂದಾಗಿ ಮೂವರಿಗೆ ತೀವ್ರವಾದ ಸುಟ್ಟ ಗಾಯಗಳಾಗಿದ್ದವು.

ಸ್ಥಳೀಯವಾಗಿ ಚಿಕಿತ್ಸೆ ಕೊಡಿಸಿ, ನಂತರ ಬೆಂಗಳುರಿನ ವಿಕ್ಟೋರಿಯಾ ಆಸ್ಪತ್ರೆಗೆ ಮೂವರನ್ನು ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೊದಲಿಗೆ ಪುತ್ರ ಪ್ರಶಾಂತ್, ಎರಡು ದಿನದ ನಂತರ ತಂದೆ ಸಿದ್ದರಾಜು ಹಾಗೂ ಅದಾದ ಎರಡು ದಿನದ ನಂತರ ಶುಕ್ರವಾರ ತಾಯಿ ಚಂದ್ರಮ್ಮ ಸಹ ಇಹಲೋಕ ತ್ಯಜಿಸಿದರು.

ADVERTISEMENT

ದುರ್ಘಟನೆಯೊಂದಿಗೆ ಮೂವರಿದ್ದ ಕುಟುಂಬವೊಂದು ದುರಂತ ಅಂತ್ಯ ಕಂಡಿದೆ. ಸಿದ್ದರಾಜು ಮತ್ತು ಚಂದ್ರಮ್ಮ ದಂಪತಿಯ ಏಕೈಕ ಪುತ್ರ ಪ್ರಶಾಂತ್ ಅವರು ಅವಿವಾಹಿತರಾಗಿದ್ದರು. ತಂದೆ–ತಾಯಿಯನ್ನು ಬಿಟ್ಟು ಬೇರೆಡೆ ಹೋಗುವುದಕ್ಕೆ ಮನಸ್ಸಿಲ್ಲದ ಅವರು, ಕ್ಯಾಂಟಿನ್ ನಡೆಸಲು ನೆರವಾಗುತ್ತಿದ್ದರು. ಆದರೆ, ಸಿಲಿಂಡರ್‌ನಿಂದ ಸೋರಿಕೆಯಾದ ಅನಿಲದಿಂದ ಹೊತ್ತಿಕೊಂಡ ಬೆಂಕಿಯು ಮೂವರನ್ನು ಬಲಿ ಪಡೆಯಿತು.

ಘಟನೆ ಕುರಿತು ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.