
ಕನಕಪುರ: ಬೆಂಗಳೂರು ವಿಶ್ವಮಟ್ಟದ ನಗರ. ಬೆಂಗಳೂರಿನ ಮೂಲಕ ಜಗತ್ತು ಭಾರತವನ್ನು ನೋಡುತ್ತಿದೆ. ನಾವೆಲ್ಲರೂ ಗ್ಲೋಬಲ್ ಮಟ್ಟದಲ್ಲಿ ಸ್ಪರ್ಧೆ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಡಿಕೆಎಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಶನಿವಾರ ನಡೆದ 4ನೇ ದಿನದ ಕನಕೋತ್ಸವದಲ್ಲಿ ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿದರು.
‘ನೀವು ಈಗ ಕನಕಪುರ–ರಾಮನಗರದವರಲ್ಲ; ನಿಮ್ಮ ಸ್ಪರ್ಧೆ ಏನಿದ್ದರೂ ಜಾಗತಿಕ ಮಟ್ಟದಲ್ಲಿ ಮಾತ್ರ. ಇದನ್ನು ನಿಮ್ಮ ತಲೆಯಲ್ಲಿ ಇಟ್ಟುಕೊಂಡು ಆ ಮಟ್ಟಕ್ಕೆ ನೀವು ತಯಾರಾಗಬೇಕು’ ಎಂದು ಸಲಹೆ ನೀಡಿದರು.
‘ವಿದ್ಯೆ ಎಂಬುದು ಗೌರವ ತಂದು ಕೊಡುತ್ತದೆ. ಅದನ್ನು ಯಾರು ಕದಿಯಲಾಗದು. ನಾನು ಮಂತ್ರಿ ಆದಾಗ ನನಗೆ ಖುಷಿಯಾಗಿರಲಿಲ್ಲ. ಪದವೀಧರನಾಗಿ ಸರ್ಟಿಫಿಕೇಟ್ ತೆಗೆದುಕೊಂಡಾಗ ಅತ್ಯಂತ ಖುಷಿಯಾಯಿತು. ತಾಲ್ಲೂಕಿನ ಮಕ್ಕಳಿಗೆ ಒಂದು ಶಕ್ತಿ ಪ್ರೋತ್ಸಾಹ ಕೊಡಬೇಕು ಎಂದು ಇಂತಹ ಭವ್ಯವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೇವೆ’ ಎಂದರು.
‘ನೀವೆಲ್ಲರೂ ಸಾಧನೆ ಮೆಟ್ಟಿಲು ಹೇರುವ ಹಂತದಲ್ಲಿದ್ದೀರಿ. ನೀವು ಉದ್ಯೋಗಿಗಳಾದರೆ ಸಾಲದು. ಉದ್ಯಮಿಗಳಾಗಬೇಕು. ಆ ರೀತಿ ನೀವು ಬೆಳೆಯಬೇಕು’ ಎಂದು ತಿಳಿಸಿದರು.
‘ನೀವು ಹುಟ್ಟಿದ ಊರು, ಹೆಸರು ಎಲ್ಲವನ್ನು ಬೆಳೆಸಿಕೊಂಡು ಹೋಗಬೇಕು. ನೀವು ವಿದ್ಯೆ ಕಲಿತ ಶಾಲೆ, ಋಣವನ್ನು ತೀರಿಸಬೇಕು’ ಎಂದು ಹೇಳಿದರು.
ಐಶ್ವರ್ಯ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಸಾವಿರಾರು ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರ ಸ್ವೀಕರಿಸಲು ಬಂದಿದ್ದೀರಿ. ನಮ್ಮ ತಂದೆ–ತಾಯಿ ನನಗೆ ಕೊಟ್ಟ ವಿದ್ಯೆಯಿಂದ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ನಿಮ್ಮ ತಂದೆ–ತಾಯಿ ಕಟ್ಟಿಕೊಂಡಿರುವ ಕನಸು ಮತ್ತು ತ್ಯಾಗದಿಂದ ಮಾತ್ರ ನೀವು ಇಲ್ಲಿವರೆಗೂ ಬರಲು ಸಾಧ್ಯ ಆಗಿದೆ’ ಎಂದರು.
ಅಮೆರಿಕ, ಜಪಾನ್, ಚೀನಾ ದೇಶಗಳ ಬೆಳವಣಿಗೆಗೆ ಯುವಕರ ಪಾತ್ರ ದೊಡ್ಡದಿದೆ. ಆ ದೇಶಗಳು ಅಭಿವೃದ್ಧಿಯಾಗುತ್ತಿದೆ. ಭಾರತ ಕೂಡ ಅಭಿವೃದ್ಧಿಯಾಗುತ್ತಿದೆ. ದೇಶದಲ್ಲಿ ಅತಿ ಹೆಚ್ಚು ಯುವ ಸಮೂಹ ಇದೆ. ಜಗತ್ತಿನ ಏಷ್ಯಾ ಖಂಡದಲ್ಲಿ ಅತಿ ಹೆಚ್ಚಿನ ಯುವ ಸಮೂಹ ಭಾರತದಲ್ಲಿದೆ. ದೇಶದ ಬೆಳವಣಿಗೆಗೆ ನಿಮ್ಮ ಪಾತ್ರ ಬಹಳ ಮುಖ್ಯ ಎಂದರು.
ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ‘ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಏಕಾಗ್ರತೆಯಿಂದ ಓದಬೇಕು. ಎಂಜಿನಿಯರ್, ವೈದ್ಯ ಆಗಬೇಕು ಎಂದು ಎಷ್ಟೋ ವಿದ್ಯಾರ್ಥಿಗಳು ಕನಸು ಕಟ್ಟಿಕೊಂಡಿದ್ದಾರೆ. ಇನ್ನು ಕೆಲವರು ಅಮೆರಿಕದಲ್ಲಿ ನೆಲಸಬೇಕು ಅಂದುಕೊಂಡಿದ್ದಾರೆ. ನೀವು ವೈದ್ಯ ಅಥವಾ ಎಂಜಿನಿಯರ್ ಆಗಿ. ಆದರೆ, ಅಮೆರಿಕಕ್ಕಲ್ಲ. ಕನಕಪುರದಲ್ಲಿ ಕಂಪನಿ ಕಟ್ಟಿ ಅಮೆರಿಕ ಉದ್ಯೋಗಿಗಳನ್ನೇ ನಮ್ಮ ಗಲ್ಲಿಗಳಿಗೆ ಇಳಿಸಬೇಕು ಅದು ನಮ್ಮ ವಿದ್ಯಾರ್ಥಿಗಳ ಸಾಧನೆ ಆಗಬೇಕು’ ಎಂದರು.
ಕರ್ನಾಟಕದಲ್ಲಿ ಕನಕಪುರ ಎಂದರೆ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್. ಸಾಮಾನ್ಯ ಕುಟುಂಬದಿಂದ ಬಂದು ರಾಜ್ಯವನ್ನೇ ಆಳಬಹುದು ಎಂದು ಡಿ.ಕೆ.ಶಿವಕುಮಾರ್ ಅವರು ತೋರಿಸಿದ್ದಾರೆ. ಅವರೇ ನನಗೆ ಸ್ಫೂರ್ತಿ. ಅವರು ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತಾರೆ ಎಂದರು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಯೋಗ ಗುರು ವಚನಾನಂದ ಶ್ರೀ ಉದ್ಘಾಟಿಸಿದರು. ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಶಾಸಕರಾದ ಬಾಲಕೃಷ್ಣ, ನಾಗೇಂದ್ರ ಸ್ವಾಮಿ, ನಟ ರಮೇಶ್ ಅರವಿಂದ್, ವಿಧಾನ ಪರಿಷತ್ ಸದಸ್ಯರಾದ ಜಗದೀಶ್ ಗುತ್ತೇದಾರ್, ಎಸ್.ರವಿ, ದಿನೇಶ್ ಗೂಳಿಗೌಡ, ಸ್ಟಾರ್ ಚಂದ್ರು, ಬೆಂಗಳೂರು ಮಾಜಿ ಮೇಯರ್ ಪದ್ಮಾವತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಉಪಸ್ಥಿತರಿದ್ದರು.
ಗಾಯಕರಾದ ವಿಜಯಪ್ರಕಾಶ್ ಹಾಗೂ ಮಂಗ್ಲಿ ತಂಡದವರು ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು.
ಸಾವಿರಾರು ಸಂಖ್ಯೆಯಲ್ಲಿ ಜನರು ಕನಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮನರಂಜನೆ ಸವಿದರು.
ಸಾತನೂರು ಕ್ಷೇತ್ರದಲ್ಲಿ ಮೊದಲ ಬಾರಿಗೆ 360 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಪ್ರತಿಭಾ ಪುರಸ್ಕಾರ ಇಲ್ಲಿವರೆಗೂ ಬಂದು ನಿಂತಿದೆ. ಈ ವರ್ಷ ಒಟ್ಟು 8100 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆಡಿ.ಕೆ.ಸುರೇಶ್ ಮಾಜಿ ಸಂಸದ
ಪ್ರತಿಭಾ ಪುರಸ್ಕಾರ
ತಾಲ್ಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುನಲ್ಲಿ ಅತಿ ಹೆಚ್ಚು ಅಂಕಗಳಿಸಿದ 8000ಕ್ಕೂ ವಿದ್ಯಾರ್ಥಿಗಳಿಗೆ ಕನಕೋತ್ಸವ ವೇದಿಕೆಯಲ್ಲಿ ಪ್ರತಿಭಾ ಪುರಸ್ಕಾರವನ್ನು ನೀಡಿ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರದಾನ ಮಾಡಿದರು. ಚೆಸ್: ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ರಾಮನಗರ ಚನ್ನಪಟ್ಟಣ ಮಾಗಡಿ ಹಾಗೂ ಕನಕಪುರದಿಂದ ಒಟ್ಟು 26 ಮಂದಿ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. 6 ವರ್ಷದೊಳಗಿನ ಮತ್ತು 6 ವರ್ಷದ ಮೇಲ್ಪಟ್ಟ ವಿಭಾಗದಲ್ಲಿ ಚೆಸ್ ಪಂದ್ಯಾವಳಿಯು ನಗರದ ಟಿಟಿಸಿ ಕ್ಲಬ್‌ನಲ್ಲಿ ನಡೆಯಿತು. ಎರಡು ವಿಭಾಗದಲ್ಲೂ ಪ್ರಥಮ ದ್ವಿತೀಯ ತೃತೀಯ ಬಹುಮಾನಕ್ಕೆ ಆಯ್ಕೆ ಮಾಡಿ ಉಡುಗೊರೆಯೊಂದಿಗೆ ಬಹುಮಾನ ನೀಡಲಾಯಿತು. ದೇಹದಾರ್ಢ್ಯ: ದೇಹದಾರ್ಢ್ಯ ಸ್ಪರ್ಧೆಯನ್ನು ಸ್ಥಳೀಯ ವಿಭಾಗ ಸೇರಿದಂತೆ 55 ಕೆ.ಜಿ 60 ಕೆ.ಜಿ 65 ಕೆ.ಜಿ 70 ಕೆ.ಜಿ 7.5 ಕೆಜಿ 80 ಕೆ.ಜಿ ಮೇಲ್ಪಟ್ಟ ವಿಭಾಗದಲ್ಲಿ 7 ವಿಭಾಗದಲ್ಲಿ ನಡೆಸಲಾಯಿತು. ಏಳು ವಿಭಾಗದಲ್ಲಿ ಒಟ್ಟು 75 ಮಂದಿ ದೇಹದಾರ್ಢ್ಯ ಸ್ಪರ್ಧಿಗಳು ಪಾಲ್ಗೊಂಡು ಹುರಿಗಟ್ಟಿಸಿದ ತಮ್ಮ ದೇಹವನ್ನು ವೇದಿಕೆಯಲ್ಪಿ ಪ್ರದರ್ಶಿಸಿ ಎಲ್ಲರ ಗಮನ ಸೆಳೆದು ಹುಬ್ಬೇರುವಂತೆ ಮಾಡಿದರು. ಪ್ರತಿ ವಿಭಾಗದಲ್ಲೂ ಪ್ರಥಮ ದ್ವಿತೀಯ ತೃತೀಯ ಬಹುಮಾನಿತರನ್ನು ಆಯ್ಕೆ ಮಾಡಿಕೊಂಡಿದ್ದು ಒಟ್ಟು 21 ಮಂದಿಗೆ ಪ್ರಶಸ್ತಿ ಮತ್ತು ಬಹುಮಾನ ನೀಡಿ ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.