ADVERTISEMENT

ಕನಕಪುರ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಗ್ರಹಣ

ಮೂಲಸೌಕರ್ಯ ಕೊರತೆ: ಎನ್‌ಎಂಸಿಗೆ ಪ್ರಸ್ತಾವ ಸಲ್ಲಿಸದಿರಲು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ಧಾರ

ಓದೇಶ ಸಕಲೇಶಪುರ
Published 14 ಜನವರಿ 2026, 8:04 IST
Last Updated 14 ಜನವರಿ 2026, 8:04 IST
ಡಾ. ಶರಣಪ್ರಕಾಶ ಪಾಟೀಲ, ವೈದ್ಯಕೀಯ ಶಿಕ್ಷಣ ಸಚಿವ
ಡಾ. ಶರಣಪ್ರಕಾಶ ಪಾಟೀಲ, ವೈದ್ಯಕೀಯ ಶಿಕ್ಷಣ ಸಚಿವ   

ರಾಮನಗರ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ವಕ್ಷೇತ್ರ ಕನಕಪುರಕ್ಕೆ 2026–27ನೇ ಸಾಲಿನಲ್ಲೂ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭವಾಗುವ ಭಾಗ್ಯವಿಲ್ಲ!

ಮೂಲಸೌಕರ್ಯ ಕೊರತೆ ಕಾರಣಕ್ಕಾಗಿ ಕಾಲೇಜು ಸ್ಥಾಪನೆಗೆ ಅನುಮತಿ ಕೋರಿ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (ಎನ್‌ಎಂಸಿ) ಪ್ರಸ್ತಾವ ಸಲ್ಲಿಸದಿರುವಲು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಸ್ವಕ್ಷೇತ್ರದಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲೇಬೇಕು ಎಂದು ಪಣ ತೊಟ್ಟಿರುವ ಡಿಸಿಎಂ, ಈಗಾಗಲೇ ರಾಜ್ಯ ಸರ್ಕಾರದಿಂದ ಕಾಲೇಜಿಗೆ ಆಡಳಿತಾತ್ಮಕ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಕಾಲೇಜು ಆರಂಭಕ್ಕೆ ಬೇಕಾದ ಮೂಲಸೌಕರ್ಯಗಳೇ ಇಲ್ಲದಿರುವುದರಿಂದ ಹಿನ್ನಡೆಯಾಗಿದೆ.

ADVERTISEMENT

ತಿರಸ್ಕಾರ: ಕಾಲೇಜು ಸ್ಥಾಪನೆಗಾಗಿ ಇಲಾಖೆಯು ಕಳೆದೆರಡು ಸಾಲಿನಲ್ಲಿ ಸಲ್ಲಿಸಿದ್ದ ಪ್ರಸ್ತಾವಗಳನ್ನು ಮೂಲಸೌಕರ್ಯ ಕೊರತೆ ಕಾರಣಕ್ಕಾಗಿ ಎನ್‌ಎಂಸಿ ತಿರಸ್ಕರಿಸಿದೆ. ಹೀಗಾಗಿ, ಕನಕಪುರದಲ್ಲಿ ಕಾಲೇಜು ಸ್ಥಾಪನೆಗೆ ಸರ್ಕಾರದ ಆಡಳಿತಾತ್ಮಕ ಅನುಮೋದನೆ ಇದ್ದರೂ ಮೂಲಸೌಕರ್ಯ ಕೊರತೆ ಕಾರಣಕ್ಕೆ ಕಾರ್ಯರೂಪಕ್ಕೆ ಬರುತ್ತಿಲ್ಲ.

ಕನಿಷ್ಠ 50 ಸೀಟುಗಳಿರುವ ವೈದ್ಯಕೀಯ ಕಾಲೇಜು ಸ್ಥಾಪಿಪಬೇಕಾದರೆ 220 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯ ಅಗತ್ಯವಿದೆ. ಸದ್ಯ ಕನಕಪುರದಲ್ಲಿ ಅಂತಹ ವ್ಯವಸ್ಥೆ ಇಲ್ಲ. ಸದ್ಯ ಅಲ್ಲಿರುವ ತಾಲ್ಲೂಕು ಆಸ್ಪತ್ರೆಯ ಹಾಸಿಗೆಗಳ ಸಾಮರ್ಥ್ಯ 100 ಮಾತ್ರ. ಹಾಗಾಗಿ, ಹೊಸ ಕಟ್ಟಡ ನಿರ್ಮಾಣದ ಅಗತ್ಯವಿದೆ ಎನ್ನುತ್ತವೆ ಇಲಾಖೆಯ ಮೂಲಗಳು.

ಕಟ್ಟಡಕ್ಕೆ ಟೆಂಡರ್: ‘ಕನಕಪುರದಲ್ಲಿ ₹550 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ನಿರ್ಮಿಸಲು ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಕಟ್ಟಡ ನಿರ್ಮಾಣ ಕಾಮಗಾರಿಗೆ ಟೆಂಡರ್ ಸಹ ಆಹ್ವಾನಿಸಲಾಗಿದೆ’ ಎಂದಿದ್ದಾರೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ.

ರಾಮನಗರ ಕಾಲೇಜಿಗೆ ಅರ್ಜಿ

ಮತ್ತೊಂದಡೆ ಜಿಲ್ಲಾ ಕೇಂದ್ರವಾದ ರಾಮನಗರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಇಲಾಖೆಯ ಎನ್‌ಎಂಸಿಗೆ ಅರ್ಜಿ ಸಲ್ಲಿಸಲಿದೆ. ನಗರದಲ್ಲಿ ಆರ್‌ಜಿಯುಎಚ್‌ಎಸ್‌ನ ಹೊಸ ಕ್ಯಾಂಪಸ್‌ ನಿರ್ಮಾಣ ಕಾರ್ಯ ಶೇ 50ರಷ್ಟು ಪೂರ್ಣಗೊಂಡಿದೆ. ಉಳಿದ ಕೆಲಸಗಳು ಆರೇಳು ತಿಂಗಳಲ್ಲಿ ಪೂರ್ಣಗೊಳ್ಳಲಿವೆ. 300 ಹಾಸಿಗೆಗಳ ಆಸ್ಪತ್ರೆಯೂ ಸಿದ್ಧವಾಗಿದೆ. ಆದ್ದರಿಂದ ರಾಮನಗರದಲ್ಲಿ  ವೈದ್ಯಕೀಯ ಕಾಲೇಜಿಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದೇವೆ ಎಂದು ಸಚಿವ ಪಾಟೀಲ ತಿಳಿಸಿದ್ದಾರೆ.

ಕನಕಪುರದಲ್ಲಿರುವ ಆಸ್ಪತ್ರೆಯು ವೈದ್ಯಕೀಯ ಕಾಲೇಜು ಆರಂಭಕ್ಕೆ ಸುಸಜ್ಜಿತ ಆಸ್ಪತ್ರೆ ಬೋಧಕ–ಬೋಧಕೇತರ ಸಿಬ್ಬಂದಿಯಂತಹ ಮೂಲಸೌಕರ್ಯಗಳಿಲ್ಲ. ಕಾಲೇಜು ಆರಂಭಕ್ಕೆ ಆಸ್ಪತ್ರೆ ಸಿದ್ಧವಾಗಿಲ್ಲದ ಕಾರಣ ಈ ಸಲ ಎನ್‌ಎಂಸಿ ಅರ್ಜಿ ಸಲ್ಲಿಸುವುದಿಲ್ಲ
– ಡಾ. ಶರಣಪ್ರಕಾಶ ಪಾಟೀಲ, ವೈದ್ಯಕೀಯ ಶಿಕ್ಷಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.