
ಕನಕಪುರ: ಪರೀಕ್ಷೆಗೆ ಚೆನ್ನಾಗಿ ಓದು ಎಂದು ಪೋಷಕರು ಬುದ್ಧಿಮಾತು ಹೇಳಿದ್ದಕ್ಕೆ ಬೇಸರಗೊಂಡ ದ್ವಿತೀಯ ಪಿಯು ವಿದ್ಯಾರ್ಥಿ ಕಾಲೇಜಿನ ಕಟ್ಟಡದ 2ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆದಿತ್ಯ ಪಿಯು ಕಾಲೇಜಿನ ಶ್ರೀನಿವಾಸ್ (18) ಮೃತ ವಿದ್ಯಾರ್ಥಿ. ತಾಲ್ಲೂಕಿನ ಸಂತೆ ಕೋಡಿಹಳ್ಳಿಯಲ್ಲಿ ಬೇಕರಿ ಹೊಂದಿರುವ ಮೂಲತಃ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ದಂಟಳ್ಳಿ ಗ್ರಾಮದ ಮಹದೇವ ಪ್ರಭು ಅವರ ಪುತ್ರನಾದ ಶ್ರೀನಿವಾಸ್, ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದ.
ಪರೀಕ್ಷೆ ಸಮೀಪಿಸಿದರೂ ಶ್ರೀನಿವಾಸ್ ಓದಿನ ಕಡೆಗೆ ಸರಿಯಾಗಿ ಗಮನ ಕೊಡದೆ ಮೊಬೈಲ್‌ನಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದ. ಮಗನ ನಿರ್ಲಕ್ಷ್ಯ ಕಂಡ ಪೋಷಕರು ‘ಪರೀಕ್ಷೆಗೆ ಚೆನ್ನಾಗಿ ಓದು’ ಎಂದು ನಿತ್ಯ ಬುದ್ಧಿವಾದ ಹೇಳುತ್ತಿದ್ದರು ಎಂದು ಕನಕಪುರ ಟೌನ್ ಠಾಣೆ ಪೊಲೀಸರು ತಿಳಿಸಿದರು.
ಆಗ ಶ್ರೀನಿವಾಸ್ ಮನಸ್ಸಿಗೆ ಬೇಜಾರು ಮಾಡಿಕೊಂಡು ಮರು ಮಾತನಾಡದೆ ಸುಮ್ಮನಿರುತ್ತಿದ್ದ. ಪರೀಕ್ಷೆ ಸಮೀಪಿಸಿದರೂ ಪುತ್ರ ಬೆಳಗ್ಗೆ ಬೇಗ ಏಳದೆ, ಸರಿಯಾಗಿ ತಯಾರಿ ನಡೆಸದಿರುವುದನ್ನು ಕಂಡು ಚಿಂತಾಕ್ರಾಂತರಾಗಿದ್ದ ಪೋಷಕರು ಬುದ್ಧಿಮಾತು ಹೇಳುವುದನ್ನು ಮುಂದುವರಿಸಿದ್ದರು.
ಮಂಗಳವಾರ ಕಾಲೇಜಿಗೆ ಬಂದಿದ್ದ ಶ್ರೀನಿವಾಸ್ ಎಲ್ಲಾ ತರಗತಿಗಳಲ್ಲಿ ಇದ್ದ. ಸಂಜೆ ಕಾಲೇಜು ಮುಗಿದ ಬಳಿಕ 5.20ರ ಸುಮಾರಿಗೆ ಎರಡನೇ ಮಹಡಿಗೆ ಹೋಗಿ ಕೆಳಕ್ಕೆ ಜಿಗಿದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಕಾಲೇಜಿನ ಸಿಬ್ಬಂದಿ ಕೂಡಲೇ ದಯಾನಂದ ಸಾಗರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಪೊಲೀಸರು ಹೇಳಿದರು.
ತಡರಾತ್ರಿ ನಿಧನ: ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ದಯಾನಂದ ಸಾಗರ ಆಸ್ಪತ್ರೆಯಿಂದ ರಾತ್ರಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆದರೆ, ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ರಾತ್ರಿ 11.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.