ಕನಕಪುರ: ಚಾಕನಹಳ್ಳಿ ಬಳಿ ನಿರ್ಮಾಣವಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಹಾಗೂ ನೌಕರರ ಕೊರತೆಯಿಂದ ಸಾರ್ವಜನಿಕರು ಪರದಾಡುವಂತಾಗಿದೆ.
ಕನಕಪುರ ತಾಲ್ಲೂಕು ಕಸಬಾ ಹೋಬಳಿ ಚಾಕನಹಳ್ಳಿ ಮತ್ತು ಜವನಮ್ಮನದೊಡ್ಡಿ ಮಧ್ಯಭಾಗದಲ್ಲಿ 2010–11ನೇ ಸಾಲಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ವಿಶಾಲವಾದ ಜಾಗದಲ್ಲಿ ನಿರ್ಮಾಣವಾಗಿದ್ದು, ಅಗತ್ಯ ಪಿಠೋಪಕರಣಗಳನ್ನು ನೀಡಲಾಗಿದೆ. ಆದರೆ, ಅಗತ್ಯವಿರುವಷ್ಟು ಸಿಬ್ಬಂದಿ ಮತ್ತು ನೌಕರರ ಕೊರತೆಯಿಂದ ಸಾರ್ವಜನಿಕರಿಗೆ ಸರಿಯಾಗಿ ಸೇವೆ ಒದಗಿಸಲಾಗುತ್ತಿದೆ.
ಈ ಆರೋಗ್ಯ ಕೇಂದ್ರಕ್ಕೆ 43 ಹಳ್ಳಿಗಳು ಸೇರುತ್ತವೆ. ನಾಲ್ಕು ಆರೋಗ್ಯ ಉಪ ಕೇಂದ್ರಗಳಿದ್ದು, ಹತ್ತು ಸಾವಿರದಷ್ಟು ಜನಸಂಖ್ಯೆ ಹೊಂದಿದೆ. ಈ ಜನಸಂಖ್ಯೆಗೆ ನಿರ್ಮಾಣವಾಗಿರುವ ಆಸ್ಪತ್ರೆಯಲ್ಲಿ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಸಿ), ಫಾರ್ಮಸಿಸ್ಟ್, ಪ್ರಯೋಗಾಲಯದ ತಂತ್ರಜ್ಞ (ಎಲ್‌ಟಿ), ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ (ಪಿಎಚ್‌ಸಿಓ) ಹುದ್ದೆಗಳನ್ನು ಮಂಜೂರು ಮಾಡಿಲ್ಲ. ಕೆಲವು ಹುದ್ದೆಗಳನ್ನು ಮಂಜೂರು ಮಾಡಿದ್ದರೂ ಆ ಹುದ್ದೆಗಳು ಭರ್ತಿಯಾಗಿಲ್ಲ.
ಸುಸಜ್ಜಿತ ಆಸ್ಪತ್ರೆ ಕಟ್ಟಡವಿದ್ದು, ಅದರಲ್ಲಿ ಕೆಲಸ ನಿರ್ವಹಿಸುವ ನೌಕರರು, ಸಿಬ್ಬಂದಿ ಇಲ್ಲದಿರುವುದು ಇಲ್ಲಿನ ಜನರ ದುರಾದೃಷ್ಟವಾಗಿದೆ. ಹಾಗಾಗಿ ಸರ್ಕಾರ ಇಲ್ಲಿನ ಸಮಸ್ಯೆ ಅರಿತು ಅಗತ್ಯವಿರುವ ಸಿಬ್ಬಂದಿ ಮತ್ತು ನೌಕರರನ್ನು ಭರ್ತಿ ಮಾಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಆಸ್ಪತ್ರೆಗೆ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಮೂರು ಬಾರಿ ಮಾತ್ರ ಸಾರಿಗೆ ವ್ಯವಸ್ಥೆಯಿದ್ದು, ಬೇರೆ ಸಮಯದಲ್ಲಿ ಆಟೊ ಅಥವಾ ಸ್ವಂತ ವಾಹನ ಅವಲಂಬಿಸಬೇಕಾಗಿದೆ.
ಆಸ್ಪತ್ರೆಗೆ ಒಂದು ಕಡೆ ಕಾಂಪೌಂಡ್ ನಿರ್ಮಿಸಿದ್ದು, ಮತ್ತೊಂದು ಕಡೆ ಮುಳ್ಳು ತಂತಿ ಬಿಟ್ಟಿದ್ದಾರೆ. ಸುರಕ್ಷತೆಗಾಗಿ ಮತ್ತೊಂದು ಕಡೆಯೂ ಕಾಂಪೌಂಡ್ ನಿರ್ಮಿಸಬೇಕೆಂಬುದು ಆಸ್ಪತ್ರೆ ಆರೋಗ್ಯ ಸಮಿತಿ ಅವರ ಒತ್ತಾಯವಾಗಿದೆ.
ಕನಕಪುರ ತಾಲ್ಲೂಕಿನಲ್ಲಿ 21 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿವೆ. ಇದರಲ್ಲಿ ಹತ್ತು ಮಂದಿ ಕಾಯಂ ವೈದ್ಯರಿದ್ದು, 11 ಮಂದಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಲ್ಲೂಕಿನಲ್ಲಿ 72 ಉಪ ಕೇಂದ್ರಗಳಿದ್ದು, 20 ಮಂದಿ ಮಾತ್ರ ಆರೋಗ್ಯ ಉಪ ಕೇಂದ್ರಗಳ ಮೇಲ್ವಿಚಾರಕರಿದ್ದು, ಒಒಡಿಗಳ ಮೇಲೆ 72 ಉಪಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ಟಾಪ್ ನರ್ಸ್, ಪ್ರಯೋಗಾಲಯದ ತಂತ್ರಜ್ಞ, ಎಫ್‌ಡಿಸಿ, ಫಾರ್ಮಸಿಸ್ಟ್, ಡಿ ಗ್ರೂಪ್ ನೌಕರರು, ಆರೋಗ್ಯ ನಿರೀಕ್ಷಾಧಿಕಾರಿಗಳು ಒಒಡಿ ಮೇಲೆ ಮೂರ್ನಾಲ್ಕು ಕಡೆ ಕಾರ್ಯ ನಿರ್ವಹಿಸುತ್ತಿದ್ದು, ಜನರಿಗೆ ಗುಣಮಟ್ಟದ ಸೇವೆ ದೊರೆಯುತ್ತಿಲ್ಲ. ಹಾಗಾಗಿ ಆರೋಗ್ಯ ಕೇಂದ್ರಕ್ಕೆ ಅಗತ್ಯವಿರುವ ಸಿಬ್ಬಂದಿ, ನೌಕರರು ಮತ್ತು ವೈದ್ಯರನ್ನು ನೇಮಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಚಾಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ವಿಶಾಲವಾದ ಜಾಗದಲ್ಲಿ ನಿರ್ಮಾಣವಾಗಿದೆ. ಒಂದು ಭಾಗದಲ್ಲಿ ಮಾತ್ರ ಕಾಂಪೌಂಡ್ ನಿರ್ಮಾಣ ಮಾಡಬೇಕಿದೆ. ಆಸ್ಪತ್ರೆಗೆ 40 ರಿಂದ 50 ಜನ ಆರೋಗ್ಯ ಸಮಸ್ಯೆಯಿಂದ ಬರುತ್ತಾರೆ. ಸ್ಪಾಪ್ ನರ್ಸ್ ಇಲ್ಲದ ಕಾರಣ ಎಲ್ಲಾ ಕೆಲಸ ನಾನೇ ಮಾಡಬೇಕಿದೆ. ಅಗತ್ಯ ಸಿಬ್ಬಂದಿ ಒದಗಿಸಿದರೆ ಗುಣಮಟ್ಟದ ಸೇವೆ ಒದಗಿಸಬಹುದು. ಈ ಸಿಬ್ಬಂದಿ ಕೊರತೆ ಬಗ್ಗೆ ಟಿಎಚ್‌ಒ ಹಾಗೂ ಡಿಎಚ್‌ಒ ಅವರ ಗಮನಕ್ಕೂ ತರಲಾಗಿದೆ. ಆದರೂ ಮಂಜೂರು ಮಾಡಿಲ್ಲ. ಈರಣ್ಣ ವೈದ್ಯಾಧಿಕಾರಿ ಚಾಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ ಸಮಸ್ಯೆ ನೀಗಿಸಿ ಗ್ರಾಮೀಣ ಭಾಗದ ಜನತೆ ಆರೋಗ್ಯ ಸಮಸ್ಯೆಗಳಿಗೆ ಸರ್ಕಾರಿ ಆಸ್ಪತ್ರೆಗಳನ್ನೇ ಹೆಚ್ಚು ಅವಲಂಬಿಸಿರುತ್ತಾರೆ. ಚಾಕನಹಳ್ಳಿ ಪಿಎಚ್‌ಸಿಗೆ ಹೆಚ್ಚಿನ ಜನರು ಬರುತ್ತಾರೆ. ಹಾಗಾಗಿ ಸಿಬ್ಬಂದಿ ಸಮಸ್ಯೆ ನೀಗಿಸಿದರೆ ಇನ್ನೂ ಹೆಚ್ಚಿನ ಸೇವೆ ಸಿಗಲಿದೆ. ಕಿರಣ್ ವೆಂಕಟೇಗೌಡ ಕೆರಳಾಳುಸಂದ್ರ ಕಾಯಂ ನೌಕರರನ್ನು ಒದಗಿಸಿ ಚಾಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೆಚ್ಚಿನ ಹಳ್ಳಿಗಳು ಬರುತ್ತವೆ. ದೂರದಿಂದ ಬರುವ ಜನರಿಗೆ ಎಲ್ಲಾ ರೀತಿಯ ಸೇವೆಗಳು ಅವರಿಗೆ ಸಿಗಬೇಕು. ಕೆಲವು ಸಿಬ್ಬಂದಿಗೆ ಒಒಡಿ ಮೇಲೆ ಕೆಲಸ ಮಾಡುತ್ತಿದ್ದು ಇಲ್ಲಿಯೇ ಕಾಯಂ ನೌಕರರು ಹಾಗೂ ಸಿಬ್ಬಂದಿ ಕೊಡಬೇಕೆಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.