ADVERTISEMENT

ರಾಮನಗರ: ರೇಷ್ಮೆನಾಡ ಕನ್ನಡ ಹಬ್ಬಕ್ಕೆ ಸ್ತಬ್ಧ ಚಿತ್ರದ ಮೆರಗು

ರಾಜ್ಯೋತ್ಸವ ಆಚರಣೆಯ ಮೆರವಣಿಗೆಗಾಗಿ ನುರಿತ ಕಲಾವಿದರಿಂದ ಸಿದ್ದವಾಗುತ್ತಿವೆ ಆಕರ್ಷಕ ಸ್ತಬ್ಧಚಿತ್ರಗಳು

ಓದೇಶ ಸಕಲೇಶಪುರ
Published 19 ಡಿಸೆಂಬರ್ 2025, 2:48 IST
Last Updated 19 ಡಿಸೆಂಬರ್ 2025, 2:48 IST
ರಾಮನಗರ ನಗರಸಭೆಯು ಹಮ್ಮಿಕೊಂಡಿರುವ ‘ರೇಷ್ಮೆನಾಡ ಕನ್ನಡ ಹಬ್ಬ’ದ ಸಲುವಾಗಿ ನಡೆಯುತ್ತಿರುವ ಸ್ತಬ್ದಚಿತ್ರಗಳ ತಯಾರಿಕೆಯನ್ನು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ವೀಕ್ಷಿಸಿದರು. ಪರಿಸರ ಎಂಜಿನಿಯರ್ ಸುಬ್ರಮಣ್ಯ ಹಾಗೂ ಇತರರು ಇದ್ದಾರೆ
ರಾಮನಗರ ನಗರಸಭೆಯು ಹಮ್ಮಿಕೊಂಡಿರುವ ‘ರೇಷ್ಮೆನಾಡ ಕನ್ನಡ ಹಬ್ಬ’ದ ಸಲುವಾಗಿ ನಡೆಯುತ್ತಿರುವ ಸ್ತಬ್ದಚಿತ್ರಗಳ ತಯಾರಿಕೆಯನ್ನು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ವೀಕ್ಷಿಸಿದರು. ಪರಿಸರ ಎಂಜಿನಿಯರ್ ಸುಬ್ರಮಣ್ಯ ಹಾಗೂ ಇತರರು ಇದ್ದಾರೆ   

ರಾಮನಗರ: ಇಲ್ಲಿನ ನಗರಸಭೆ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಡಿ. 22ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ‘ರೇಷ್ಮೆನಾಡ ಕನ್ನಡ ಹಬ್ಬ’ಕ್ಕೆ ಆಕರ್ಷಕ ಸ್ತಬ್ಧಚಿತ್ರಗಳ ಮೆರಗು ಸಿಗಲಿದೆ. ಅದಕ್ಕಾಗಿ, ನುರಿತ ಕಲಾವಿದರ ತಂಡವು ಕಳೆದೆರಡು ವಾರದಿಂದ ಸ್ತಬ್ಧಚಿತ್ರಗಳನ್ನು ತಯಾರಿಸುವಲ್ಲಿ ನಿರತವಾಗಿದೆ.

ಚಾಮರಾಜನಗರದ ಸ್ತಬ್ಧಚಿತ್ರ ಕಲಾವಿದ ಹರೀಶ್ ಕುಮಾರ್ ನೇತೃತ್ವದ 20 ಮಂದಿಯ ತಂಡ, ಕಳೆದೆರಡು ವಾರದಿಂದ ಸ್ತಬ್ಧಚಿತ್ರಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ. ಸ್ತಬ್ಧಚಿತ್ರ ತಯಾರಿಸಿ ಇಷ್ಟೊಂದು ಅದ್ಧೂರಿಯಾಗಿ ಕನ್ನಡ ಹಬ್ಬ ಆಚರಿಸುತ್ತಿವ ರಾಜ್ಯದ ಮೊದಲ ನಗರಸಭೆ ಎಂಬ ಕೀರ್ತಿಗೆ ರಾಮನಗರ ಪಾತ್ರವಾಗಲಿದೆ.

ಐದು ಸ್ತಬ್ಧಚಿತ್ರ: ‘ಕನ್ನಡ ಹಬ್ಬದಂದು ನಗರಸಭೆಯ ಕಂದಾಯ, ಎಂಜಿನಿಯರಿಂಗ್, ಆರೋಗ್ಯ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ–ನಲ್ಮ್) ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲ್ಯುಡಿಎಸ್‌ಬಿ) ಕಾರ್ಯವೈಖರಿ, ಮಹತ್ವ ಹಾಗೂ ಸಾಧನೆ ಒಳಗೊಂಡ ಸ್ತಬ್ಧಚಿತ್ರಗಳನ್ನು ತಯಾರಿಸಲಾಗುತ್ತಿದೆ’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ನಗರಸಭೆ ಆವರಣದಲ್ಲಿ ಕಳೆದ ತಿಂಗಳು ಅದ್ಧೂರಿಯಾಗಿ ಅನಾವರಣಗೊಂಡ ಸಂವಿಧಾನದ ಪೀಠಿಕೆ ಮಾದರಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಯನ್ನು ನಿರ್ಮಿಸಿದ್ದ ಚಾಮರಾಜನಗರದ ಹರೀಶ್ ಕುಮಾರ್ ಅವರ ತಂಡವೇ, ಕನ್ನಡ ಹಬ್ಬದ ಸ್ತಬ್ಧಚಿತ್ರಗಳನ್ನು ಸಹ ತಯಾರಿಸುತ್ತಿದೆ’ ಎಂದು ಹೇಳಿದರು.

‘ನಾಗರಿಕರಿಗೆ ನಗರಸಭೆಯ ವಿವಿಧ ವಿಭಾಗಗಳ ಕಾರ್ಯವೈಖರಿ, ಅವುಗಳ ಮಹತ್ವ, ಉತ್ತಮ ಆಡಳಿತದ ದಿಸೆಯಲ್ಲಿ ನಾವು ಮಾಡಿರುವ ಇ–ಸ್ವತ್ತ, ಇ–ಖಾತೆ ಅಭಿಯಾನದ ಸಾಧನೆ, ನಾಗರಿಕರ ಪಾಲ್ಗೊಳ್ಳುವಿಕೆ, ಸ್ವಚ್ಛ ನಗರಕ್ಕಾಗಿ ಕೈಗೊಂಡ ಕ್ರಮಗಳು, ಸ್ವಚ್ಛತೆಯ ರಿಯಲ್ ಹೀರೊಗಳಾದ ಪೌರ ಕಾರ್ಮಿಕರು, ಕೆಯುಡಬ್ಲ್ಯುಡಿಎಸ್‌ಬಿಯಿಂದ ನಗರಕ್ಕೆ 24X7 ನೀರು ಪೂರೈಕೆಯಿಂದಾದ ಬದಲಾವಣೆ, ರಾಮನಗರದ ಹಿರಿಮೆಯಾದ ರಾಮದೇವರ ಬೆಟ್ಟದ ಪ್ರತಿಕೃತಿ ಸೇರಿದಂತೆ ಮತ್ತಷ್ಟು ವಿಶೇಷಗಳು ಸ್ತಬ್ಧಚಿತ್ರಗಳ ಆಕರ್ಷಣೆಯಾಗಿರಲಿದೆ’ ಎಂದರು.

ಸ್ತಬ್ಧಚಿತ್ರಕ್ಕೆ ಅಂತಿಮ ಸ್ಪರ್ಶ ನೀಡುವಲ್ಲಿ ನಿರತರಾಗಿರುವ ಕಲಾವಿದ

ಹಬ್ಬ ಉದ್ಘಾಟಿಸಲಿರುವ ಡಿಸಿಎಂ

ರಾಮನಗರ: ನಗರಸಭೆ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಡಿ. 22ರಂದು ಹಮ್ಮಿಕೊಂಡಿರುವ ‘ರೇಷ್ಮೆನಾಡ ಕನ್ನಡ ಹಬ್ಬ’ವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಘನ ಉಪಸ್ಥಿತಿ ವಹಿಸಲಿದ್ದು ರಾಮನಗರ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅಧ್ಯಕ್ಷತೆ ವಹಿಸುವರು. ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಮುಖ್ಯ ಭಾಷಣ ಮಾಡಲಿದ್ದಾರೆ. ಸಂಸದ ಡಾ. ಸಿ.ಎನ್. ಮಂಜುನಾಥ್ ಕನ್ನಡ ಪುಸ್ತಕಗಳ ಮಳಿಗೆ ಉದ್ಘಾಟಿಸಲಿದ್ದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಭುವನೇಶ್ವರಿ ಚಿತ್ರ ಹಾಗೂ ಸ್ತಬ್ಧಚಿತ್ರಗಳ ಮೆರವಣಿಗೆಗೆ ಚಾಲನೆ ನೀಡುವರು. ಶಾಸಕರಾದ ಮಾಗಡಿಯ ಎಚ್.ಸಿ. ಬಾಲಕೃಷ್ಣ ಹಾಗೂ ಚನ್ನಪಟ್ಟಣದ ಸಿ.ಪಿ. ಯೋಗೇಶ್ವರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ ಗೌರವ ಉಪಸ್ಥಿತಿ ವಹಿಸುವರು. ವಿವಿಧ ಕ್ಷೇತ್ರಗಳಿಗೆ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯ ಅವರು ‘ಕೆಂಗಲ್ ಹನುಮಂತಯ್ಯ ಪ್ರಶಸ್ತಿ’ ಪ್ರದಾನ ಮಾಡುವರು. ಮಾಜಿ ಶಾಸಕರೂ ಆಗಿರುವ ಹಿರಿಯ ರಾಜಕಾರಣಿ ಸಿ.ಎಂ. ಲಿಂಗಪ್ಪ ಅವರಿಗೆ ಗಣ್ಯರು ಇದೇ ಸಂದರ್ಭದಲ್ಲಿ ‘ಪೌರ ಸನ್ಮಾನ’ ಮಾಡಲಿದ್ದಾರೆ. ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಕಾರ್ಯಕ್ರಮದ ದಿನ ನಗರದ ಮಿನಿ ವಿಧಾನಸೌಧದಿಂದ ಮಧ್ಯಾಹ್ನ 3 ಗಂಟೆಗೆ ಮೆರವಣಿಗೆ ಶುರುವಾಗಲಿದೆ. ಸಂಜೆ 6 ಗಂಟೆಗೆ ಕ್ರೀಡಾಂಗಣದಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ತಂಡ ಸಂಗೀತ ಸಂಜೆ ನಡೆಸಿ ಕೊಡಲಿದೆ. ಖ್ಯಾತ ಗಾಯಕರಾದ ಕುನಾಲ್ ಗಾಂಜಾವಾಲ ರಾಜೇಶ್ ಕೃಷ್ಣನ್ ಮಂಗ್ಲಿ ಅನುರಾಧ ಭಟ್ ಸೇರಿದಂತೆ ಹಲವು ಗಾಯಕರು ಸಂಗೀತದ ರಸದೌತಣ ಬಡಿಸಲಿದ್ದಾರೆ. ಕನ್ನಡ ಹಬ್ಬದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.