ರಾಮನಗರ ತಾಲ್ಲೂಕಿನ ಕೆರೆಮೇಗಳದೊಡ್ಡಿಯ ಮುದ್ದುಶ್ರೀ ದಿಬ್ಬದಲ್ಲಿ ಭಾನುವಾರ ನಡೆದ ಡಾ. ಎಂ. ಬೈರೇಗೌಡ ಸಂಪಾದಕತ್ವದ ‘ಜಾನಪದ ತಿಜೋರಿ’ ಮಾಸಪತ್ರಿಕೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಬಿಡುಗಡೆಗೊಳಿಸಿದರು.
ರಾಮನಗರ: ‘ತೊಂಬತ್ತರ ದಶಕದ ನಂತರ ಜಾನಪದ ಪರಂಪರೆಯು ಹಿನ್ನೆಲೆಗೆ ಸರಿಯುತ್ತಾ ಬಂದಿದೆ. ಜಾಗತೀಕರಣ ಹಾಗೂ ಹಿಂದುತ್ವದ ಪ್ರಭಾವಕ್ಕೆ ಸಿಲುಕಿರುವ ಜಾನಪದವು ಅಳಿವಿನಂಚಿನತ್ತ ಸಾಗುತ್ತಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕೆರೆಮೇಗಳದೊಡ್ಡಿಯ ಮುದ್ದುಶ್ರೀ ದಿಬ್ಬದಲ್ಲಿ ಭಾನುವಾರ ನಡೆದ ಡಾ. ಎಂ. ಬೈರೇಗೌಡ ಸಂಪಾದಕತ್ವದ ‘ಜಾನಪದ ತಿಜೋರಿ’ ಮಾಸಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ಈಶಾನ್ಯ ರಾಜ್ಯಗಳು ಸೇರಿದಂತೆ ಬುಡಕಟ್ಟು ಜನರು ಹೆಚ್ಚಾಗಿರುವೆಡೆ ಬೇರು ಬಿಟ್ಟಿರುವ ಆರ್‌ಎಸ್‌ಎಸ್, ಅಲ್ಲಿನವರಿಗೆ ತಮ್ಮ ಬುಡಕಟ್ಟು ಸಂಸ್ಕೃತಿಯನ್ನು ಮರೆಸಿ ವೈದಿಕ ಸಂಸ್ಕೃತಿಯತ್ತ ವಾಲುವಂತೆ ಮಾಡಿದೆ. ಅಲ್ಲಿ ವೈದಿಕ ದೇವಾಲಯಗಳು ತಲೆ ಎತ್ತಿದ್ದು ಬುಡಕಟ್ಟು ದೇವರುಗಳು ಹಾಗೂ ಆಚರಣೆಗಳು ಮರೆಯಾಗುತ್ತಿವೆ. ಬುಡಕಟ್ಟು ಜನರ ಮನೆಗಳ ಗೋಡೆ ಮೇಲೆ ರಾಮನ ಫೋಟೊ ನೇತಾಡುತ್ತಿದೆ’ ಎಂದರು.
‘ಬುಡಕಟ್ಟು ಜನರ ಮೇಲಿನ ಹಿಂದುತ್ವದ ಪ್ರಯೋಗವು ಬಿಜೆಪಿಯ ಮತ ಬ್ಯಾಂಕ್ ಹೆಚ್ಚಿಸಿದ್ದು, ಈಶಾನ್ಯ ರಾಜ್ಯಗಳಲ್ಲಿ ಅದರ ನೆಲೆಯನ್ನು ವಿಸ್ತರಿಸಿದೆ. ಊರು ಕಾಪಾಡುವೆ ಎನ್ನುತ್ತಿದ್ದ ರಾಜ್ಯದ ಕರಾವಳಿಯ ಭೂತಗಳು, ಈಗ ಹಿಂದೂಗಳನ್ನು ನಾನು ಕಾಪಾಡುತ್ತೇನೆ ಎನ್ನತೊಡಗಿವೆ’ ಎಂದು ವಿಶ್ಲೇಷಿಸಿದರು.
‘ಹಿಂದುತ್ವದಿಂದಾಗಿ ನಮ್ಮ ಜಾನಪದೀಯ ದೇವತೆಗಳು ಪ್ರಾಣ ಕಳೆದುಕೊಳ್ಳುತ್ತಿದ್ದು, ಜನ ಈಗ ವೈದಿಕ ದೇವರುಗಳ ಮೊರೆ ಹೋಗುತ್ತಿದ್ದಾರೆ. ನಮ್ಮ ಪರಂಪರೆಯು ಬಿಕ್ಕಟ್ಟಿನಲ್ಲಿದೆ. ಜಾನಪದ ಹಾಗೂ ಮೌಖಿಕ ಸಾಹಿತ್ಯದ ಪರಂಪರೆಯನ್ನು ಕಳೆದುಕೊಂಡಷ್ಟು ಭಾರತದ ಸಾಂಸ್ಕೃತಿಕತೆ ಸತ್ತು ಹೋಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ದೇಶದ ಪ್ರಮುಖ ವಿ.ವಿ.ಗಳಲ್ಲಿ ಹೆಚ್ಚುತ್ತಿರುವ ವಿದೇಶಿ ವಿದ್ಯಾರ್ಥಿಗಳಿಂದಾಗಿ, ನಮ್ಮ ಶಿಕ್ಷಣದ ವ್ಯವಸ್ಥೆಯೇ ಬದಲಾಗುತ್ತಿದೆ. ಅಂತರರಾಷ್ಟ್ರೀಯ ಮಟ್ಟದ ಕ್ರೆಡಿಟ್‌ಗೆ ಹಾತೊರೆಯುತ್ತಿರುವ ನಮ್ಮ ವಿ.ವಿ.ಗಳಲ್ಲಿ ಈಗ ಪ್ರಾದೇಶಿಕ ಸಂಸ್ಕೃತಿಗೆ ಬೆಲೆ ಇಲ್ಲವಾಗಿದೆ. ಇದರ ನಡುವೆ ವಿದೇಶಿ ವಿ.ವಿ.ಗಳು ದೇಶದಲ್ಲಿ ತಲೆ ಎತ್ತುತ್ತಿದ್ದು, ದೆಹಲಿಯಲ್ಲೇ 22 ವಿ.ವಿ.ಗಳಿವೆ’ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಬಿ.ಟಿ. ನಾಗೇಶ್, ರಾಮನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಸೂರ್ಯಪ್ರಕಾಶ್ ಮಾತನಾಡಿದರು. ಸಾಹಿತಿ ಅರುಣ್ ಕವಣಾಪುರ ನಿರೂಪಣೆ ಹಾಗೂ ಕಸಾಪ ತಾಲ್ಲೂಕು ಅಧ್ಯಕ್ಷ ದಿನೇಶ್ ಬಿಳಗುಂಬ ವಂದನಾರ್ಪಣೆ ಮಾಡಿದರು.
‘ಅಪ್ರಸ್ತುತವಾದ ಸಾಮಾಜಿಕ ನ್ಯಾಯ’
‘ಜಾಗತೀಕರಣದಿಂದ ಸಾಮಾಜಿಕ ನ್ಯಾಯ ಅಪ್ರಸ್ತುತವಾಗಿದೆ. ಆದರೂ ನಾವು ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಮೀಸಲಾತಿಗೆ ಬಡಿದಾಡುತ್ತಿದ್ದೇವೆ. ಕಬ್ಬು ಬೆಳೆದು ಬೆಲ್ಲ ಮಾಡುತ್ತಿದ್ದ ಗೂಡುಗಾಂವ್ ಜಾಗತೀಕರಣಕ್ಕೆ ಸಿಲುಕಿ ದ್ರೋಣಾಚಾರ್ಯರಿದ್ದ ಜಾಗವೆಂಬ ಪ್ರತೀತಿಯೊಂದಿಗೆ ಗುರುಗಾಂವ್ ಆಗಿದೆ. ಅಲ್ಲಿನ ಜಾನಪದ ನಶಿಸಿದೆ. ಬಹುರಾಷ್ಟ್ರೀಯ ಕಂಪನಿಗಳು ಬೀಡುಬಿಟ್ಟಿರುವ ಇಲ್ಲಿ 12 ಲಕ್ಷ ಉದ್ಯೋಗಿಗಳಿದ್ದಾರೆ. ಅಲ್ಲಿ ಸರ್ಕಾರ ಸೃಷ್ಟಿಸಿದ ಉದ್ಯೋಗ 500 ಸಹ ದಾಟದು. ಗ್ರೂಪ್ ‘ಸಿ’ ಮತ್ತು ‘ಡಿ’ ಹುದ್ದೆಗಳನ್ನು ಹೊರಗುತ್ತಿಗೆ ಮಾಡಿದೆ. ಖಾಲಿ ಹುದ್ದೆಗಳ ಭರ್ತಿಗೆ ಗ್ರಹಣ ಹಿಡಿದಿದೆ. ವಿಶ್ವವಿದ್ಯಾಲಯಗಳಲ್ಲಿ ಖಾಲಿಯಾಗುವ ಹುದ್ದೆಗೆ ಅತಿಥಿಗಳನ್ನು ತಂದು ತುಂಬುತ್ತಿದ್ದಾರೆ. ದಿನದಿಂದ ದಿನಕ್ಕೆ ಸಾಮಾಜಿಕ ನ್ಯಾಯ ಸವಕಲಾಗುತ್ತಿದೆ’ ಎಂದು ಬಿಳಿಮಲೆ ಬೇಸರ ವ್ಯಕ್ತಪಡಿಸಿದರು.
‘ಕಪ್ಪುಚುಕ್ಕೆಯ ಸಾಹಿತ್ಯಕ್ಕೆ ದೊಡ್ಡ ಮಾರ್ಕೆಟ್’
‘ಇತ್ತೀಚಿನ ವರ್ಷಗಳಲ್ಲಿ ಕನ್ನಡದಲ್ಲಿ ‘ಹೊಡಿ ಮಗಾ’ ‘ಅಪ್ಪ ಲೂಸಾ’ ‘ಸಾರಾಯಿ ಸೀಸೆಯಲ್ಲಿ ನನ್ನ ದೇವಿ ಕಾಣುವಳು...’ ಹಾಡುಗಳ ಸಾಹಿತ್ಯ ಜನಪ್ರಿಯವಾಗುತ್ತಿದೆ. ಹಾಡಿನ ಪರಂಪರೆಗೆ ಕಪ್ಪುಚುಕ್ಕೆಯಾಗಿರುವ ಇದಕ್ಕೆ ದೊಡ್ಡ ಮಾರುಕಟ್ಟೆ ಇದೆ. ಇದನ್ನು ಪ್ರಶ್ನಿಸುವವರೇ ಇಲ್ಲವಾಗಿದೆ. ಈಗ ಪ್ರಶ್ನಿಸುವುದೂ ಅಪರಾಧ ಎನ್ನುವ ಮಟ್ಟಿಗೆ ಸಮಾಜ ಇಂತಹದ್ದನ್ನೆಲ್ಲಾ ಒಪ್ಪಿಕೊಂಡಿದೆ. ಬೈರೇಗೌಡರು ಇಟ್ಟಿರುವುದು ದೊಡ್ಡ ಹೆಜ್ಜೆ. ಬೆಳೆ ಮತ್ತು ಕಳೆ ಒಂದೇ ಕಡೆ ಇರುತ್ತದೆ. ರೈತ ಕಳೆ ಕಿತ್ತು ಹಾಕಿ ಬೆಳೆ ಉಳಿಸಿಕೊಳ್ಳುತ್ತಾನೆ. ಗೌಡರು ಅದನ್ನು ಭರವಸೆ ಇದೆ’ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದರು. ‘ಉದಾತ್ತ ಆಶಯದಿಂದ ಆರಂಭ’ ‘ವಿ.ವಿ.ಗಳು ತಾವು ಮಾಡಬೇಕಾದ ಕೆಲಸ ಮಾಡುತ್ತಿಲ್ಲ. ಪ್ರಕಟಣೆಗಳು ಸ್ಥಗಿತವಾಗಿದ್ದು ಸಂಘ–ಸಂಸ್ಥೆಗಳು ನೈಜ ಆಶಯ ಮರೆತಿವೆ. ಜಾನಪದಕ್ಕೆ ಸಂಬಂಧಿಸಿದ ಕ್ಷೇತ್ರ ಕಾರ್ಯ ನಿಂತಿದೆ. ಹಳ್ಳಿಗಳತ್ತ ಯಾರೂ ಬರುತ್ತಿಲ್ಲ. ಮಾಯಾಪೆಟ್ಟಿಗೆ ಟಿ.ವಿ.ಯಲ್ಲಿ ನಿಂತು ಹಾಡುವುದು ಹಾಗೂ ಪ್ರದರ್ಶಿಸುವುದೇ ಜಾನಪದ ಕಲೆ ಎಂಬಂತಾಗಿದೆ. ನನ್ನ ಮುಂದಿನ ತಲೆಮಾರಿಗೆ ನಾನೇನು ಕೊಡಬಲ್ಲೆ ಎಂಬ ಉದಾತ್ತ ಆಶಯದೊಂದಿಗೆ ಈ ಪತ್ರಿಕೆ ಆರಂಭಿಸಿದ್ದೇನೆ’ ಎಂದು ‘ಜಾನಪದ ತಿಜೋರಿ’ ಸಂಪಾದಕ ಡಾ. ಎಂ. ಬೈರೇಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.