ADVERTISEMENT

ಕನ್ನಡ ಭಾಷೆಗೆ ನಿರಂತರ ಕಂಟಕ: ಕವಿ ಡಾ.ಎಲ್.ಸಿ.ರಾಜು

​ಪ್ರಜಾವಾಣಿ ವಾರ್ತೆ
Published 5 ಮೇ 2019, 13:39 IST
Last Updated 5 ಮೇ 2019, 13:39 IST
ದರ್ಪಣ ಸಭಾಂಗಣದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯನ್ನು ಬಿ.ಟಿ.ನಾಗೇಶ್ ಉದ್ಘಾಟಿಸಿದರು
ದರ್ಪಣ ಸಭಾಂಗಣದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯನ್ನು ಬಿ.ಟಿ.ನಾಗೇಶ್ ಉದ್ಘಾಟಿಸಿದರು   

ರಾಮನಗರ: ಕನ್ನಡ ಸಾಹಿತ್ಯ ಪರಿಷತ್‌ ಸ್ಥಾಪನೆ ಮಾಡಿರುವ ಉದ್ದೇಶ ಕನ್ನಡವನ್ನು ಉಳಿಸಲು. ಅಂದಿಗೂ ಕನ್ನಡ ಭಾಷೆಗೆ ಕಂಟಕ ಇತ್ತು. ಈಗಲೂ ಇದೆ. ಆದರೆ, ಸ್ವರೂಪ ಬದಲಾಗಿದೆ ಎಂದು ಕವಿ ಡಾ.ಎಲ್.ಸಿ.ರಾಜು ಹೇಳಿದರು.

ಇಲ್ಲಿನ ಶಾಂತಲಾ ಕಲಾ ಕೇಂದ್ರದ ದರ್ಪಣ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್‌ನ 104ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಆ ಕಾಲದಲ್ಲಿ ಕನ್ನಡ ಸಾಹಿತ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಬಿ.ಎಂ.ಶ್ರೀಕಂಠಯ್ಯ ಅವರ ಕೊಡುಗೆ ಅಪಾರ. ಅವರು ಕನ್ನಡಕ್ಕೆ ನೆಲೆ ಒದಗಿಸಿಕೊಟ್ಟ ಶ್ರೇಷ್ಠ ಸಾಹಿತಿಯಾಗಿದ್ದಾರೆ ಎಂದು ತಿಳಿಸಿದರು.

ಅಂದು ಶಿಕ್ಷಣ ವ್ಯವಸ್ಥೆ ಇಲ್ಲದಿದ್ದರೂ ಕನ್ನಡಿಗರು ಸಾಹಿತ್ಯವನ್ನು ಕ್ರಮವಾಗಿ ರಚಿಸುವ ಜ್ಞಾನ ಹೊಂದಿದ್ದರು. ಕನ್ನಡಿಗರು ಅಸಾಮಾನ್ಯ ಸಾಮರ್ಥ್ಯ ಹೊಂದಿದವರೆಂದು ಕವಿರಾಜಮಾರ್ಗ ಕಾವ್ಯದಲ್ಲಿ ಉಲ್ಲೇಖಿಸಲಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಕನ್ನಡ ಸಾಹಿತ್ಯ ಸಮೃದ್ಧವಾಗಿದೆ. ಇಂಥ ಜ್ಞಾನದ ಭಂಡಾರವನ್ನು ಕನ್ನಡಿಗರಿಗೆ ಮುಟ್ಟಿಸುವ ಕಾರ್ಯ ಸಾಹಿತ್ಯ ಪರಿಷತ್ತು ಮಾಡುತ್ತಿದೆ ಎಂದು ತಿಳಿಸಿದರು.

ADVERTISEMENT

ಜತೆಗೆ ಕನ್ನಡಪರ ಚಳವಳಿ, ಜನಪರ ಕಾರ್ಯ, ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವ ಹಲವು ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಪರಿಷತ್ ಕನ್ನಡ ನಾಡು-ನುಡಿ ಸೇವೆಯಲ್ಲಿ ತೊಡಗಿದೆ. ತನ್ನ ವ್ಯಾಪ್ತಿಯನ್ನು ಜಿಲ್ಲೆ, ತಾಲೂಕು ಹಾಗೂ ಹೋಬಳಿ ಮಟ್ಟಕ್ಕೆ ವಿಸ್ತರಿಸಿ, ಕನ್ನಡಪರ ಒಲುವುವನ್ನು ಯುವಜನತೆಯಲ್ಲಿ ಮೂಡಿಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಬಿ.ಟಿ.ನಾಗೇಶ್ ಕಾರ್ಯಕ್ರಮ ಉದ್ಘಾಟಿಸಿದರು. ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಟಿ.ದಿನೇಶ್, ಗೌರವ ಕಾರ್ಯದರ್ಶಿ ಎಚ್.ಕೆ.ಶೈಲಾಶ್ರೀನಿವಾಸ್, ಸಾಂಸ್ಕತಿಕ ಸಂಘಟಕರಾದ ಕವಿತಾರಾವ್, ಡಾ.ಎಂ.ಬೈರೇಗೌಡ, ನಂಜುಂಡಿ ಬಾನಂದೂರು, ಗಾಯಕ ಚೌ.ಪು.ಸ್ವಾಮಿ, ನೃತ್ಯ ಕಲಾವಿದೆ ಚಿತ್ರಾರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.