ADVERTISEMENT

ಚನ್ನಪಟ್ಟಣ: ಪಸರಿಸಲಿ ಕನ್ನಡ ಸಾಹಿತ್ಯ ಸೊಬಗು

ಚನ್ನಪಟ್ಟಣ ಬಸ್‌ ನಿಲ್ದಾಣದಲ್ಲಿ ಜ್ಞಾನಪೀಠ ಪುರಸ್ಕೃತರ ಭಾವಚಿತ್ರ ಅನಾವರಣ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 9:12 IST
Last Updated 3 ಜನವರಿ 2026, 9:12 IST
ಚನ್ನಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಏರ್ಪಡಿಸಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅನಾವರಣ ಕಾರ್ಯಕ್ರಮಕ್ಕೆ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸು.ತ. ರಾಮೇಗೌಡ ಚಾಲನೆ ನೀಡಿದರು. ಕಸ್ತೂರಿ ಕರ್ನಾಟಕ ವೇದಿಕೆ ಜಿಲ್ಲಾಧ್ಯಕ್ಷ ಯೋಗೀಶ್ ಗೌಡ, ಕವಯಿತ್ರಿ ಡಾ. ರಾಜಶ್ರೀ, ಇತರರು ಹಾಜರಿದ್ದರು
ಚನ್ನಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಏರ್ಪಡಿಸಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅನಾವರಣ ಕಾರ್ಯಕ್ರಮಕ್ಕೆ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸು.ತ. ರಾಮೇಗೌಡ ಚಾಲನೆ ನೀಡಿದರು. ಕಸ್ತೂರಿ ಕರ್ನಾಟಕ ವೇದಿಕೆ ಜಿಲ್ಲಾಧ್ಯಕ್ಷ ಯೋಗೀಶ್ ಗೌಡ, ಕವಯಿತ್ರಿ ಡಾ. ರಾಜಶ್ರೀ, ಇತರರು ಹಾಜರಿದ್ದರು   

ಚನ್ನಪಟ್ಟಣ: ಕನ್ನಡ ಸಾಹಿತ್ಯದ ಸೊಬಗನ್ನು ಪಸರಿಸುವ ಕೆಲಸಕ್ಕೆ ಸರ್ವರೂ ಸನ್ನದ್ಧರಾಗಿ ನಿಲ್ಲಬೇಕಾದ ಅನಿವಾರ್ಯತೆ ಬಂದಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸು.ತ. ರಾಮೇಗೌಡ ಹೇಳಿದರು.

ನಗರದ ಸರ್ಕಾರಿ ಬಸ್ ನಿಲ್ದಾಣದ ಆವರಣದಲ್ಲಿ ಶುಕ್ರವಾರ ಚನ್ನಪಟ್ಟಣ ರೋಟರಿ ಸಂಸ್ಥೆ- 3191 ವತಿಯಿಂದ ಏರ್ಪಡಿಸಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅನಾವರಣ ಕಾರ್ಯಕ್ರಮ‌ದಲ್ಲಿ ಮಾತನಾಡಿದರು.

ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿ, ಇತಿಹಾಸ ಇತ್ಯಾದಿ ವಿಷಯಗಳನ್ನು ಜನಸಾಮಾನ್ಯರ ಸ್ಮೃತಿ ಪಟಲದಲ್ಲಿ ದೀರ್ಘಕಾಲ ಉಳಿಯುವಂತೆ ಮಾಡಲು ಸಂಘ–ಸಂಸ್ಥೆಗಳು ಕಾರ್ಯಕ್ರಮಗಳನ್ನು ಸಂಘಟಿಸಬೇಕಿದೆ. ರೋಟರಿ ಸಂಸ್ಥೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು ಬಸ್ ನಿಲ್ದಾಣದಲ್ಲಿ ಅನಾವರಣಗೊಳಿಸಿ, ಜನಸಾಮಾನ್ಯರಿಗೆ ಸಾಹಿತಿಗಳ ಪರಿಚಯಿಸುವ ಕಾರ್ಯ ಶ್ಲಾಘನೀಯ ಎಂದರು.

ADVERTISEMENT

 ಕಸ್ತೂರಿ ಕರ್ನಾಟಕ ವೇದಿಕೆ ಜಿಲ್ಲಾಧ್ಯಕ್ಷ ಯೋಗೀಶ್ ಗೌಡ, ಕನ್ನಡದ ಬಗೆಗೆ ಕನ್ನಡಿಗರು ಅಭಿಮಾನ ಮೂಡಿಸಿಕೊಳ್ಳದ ಹೊರತು, ಕನ್ನಡತನ ಉಳಿಯಲು ಸಾಧ್ಯವಿಲ್ಲ. ನೆಲ, ಜಲ, ಭಾಷೆ, ಆಹಾರ, ಸಂಸ್ಕೃತಿ ಇತ್ಯಾದಿ ಅಂಶಗಳು ಹೆಮ್ಮೆಯ ವಿಷಯವಾಗಬೇಕು ಎಂದು ಹೇಳಿದರು.

ಕವಯಿತ್ರಿ ಡಾ. ರಾಜಶ್ರೀ, ಕನ್ನಡ ಸಾಹಿತ್ಯವನ್ನು ವಿಶ್ವ ದರ್ಜೆಗೆ ಏರಿಸಿದ ಕೀರ್ತಿ ನಮ್ಮ ಕವಿಗಳಿಗೆ ಸಲ್ಲುತ್ತದೆ. ಕನ್ನಡ ಗಳಿಸಿರುವ ಶ್ರೇಷ್ಠತೆಯನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ರೋಟರಿ ಅಧ್ಯಕ್ಷ ಟಿ. ಪ್ರಸನ್ನಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ರೋಟರಿ ಸಂಸ್ಥೆಯ ವಲಯ ಗೌರ್ನರ್ ಬಿ. ಪುಟ್ಟಸ್ವಾಮಯ್ಯ, ಅಸಿಸ್ಟೆಂಟ್ ಗೌರ್ನರ್ ಕೆ. ಗವಿರಾಜು, ಕಾರ್ಯದರ್ಶಿ ಎಲೆಕೇರಿ ವಿನಯ್, ಭಾವಿಪ ಮಾಜಿ ಅಧ್ಯಕ್ಷ ವಸಂತಕುಮಾರ್, ಸಾಹಿತಿಗಳಾದ ಡಾ. ವಿಜಯ್ ರಾಂಪುರ, ಬೋರಲಿಂಗಯ್ಯ, ಯುವಕವಿ ಸಚಿನ್ ಕೆಲಗೆರೆ, ಬಿವಿಎಸ್ ಸಂಘಟನೆಯ ಕುಮಾರ್, ರೋಟರಿ ಸದಸ್ಯರಾದ ರಾಮಪ್ರಸಾದ್, ಸಿ.ಜಿ. ರಮೇಶ್ ಕುಮಾರ್, ಮಂಗಳವಾರಪೇಟೆ ಲೋಕೇಶ್, ಶಿವರಾಜು, ವಕೀಲ ಶಿವಶಂಕರ್, ಗ್ರಂಥಾಲಯ ಮೇಲ್ವಿಚಾರಕ ವೈದ್ಯೇಗೌಡ, ಶಿಲ್ಪಿ ಹರೀಶ್, ಸಾಗರ್, ಆಕಾಶ್ ಜೈನ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.